ಸ್ಟಾಕ್‌ಹೋಂ : ಜೈಲಿನಲ್ಲಿರುವ ಇರಾನಿನ ಮಾನವ ಹಕ್ಕುಗಳ ಕಾರ್ಯಕರ್ತೆ ನರ್ಗೆಸ್ ಮೊಹಮ್ಮದಿ ಅವರಿಗೆ 2023 ರ ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟಿಸಲಾಗಿದೆ. ತನ್ನ ದೇಶದಲ್ಲಿ ಮಹಿಳೆಯರ ಮೇಲಿನ ದಬ್ಬಾಳಿಕೆಯ ವಿರುದ್ಧ ಹೋರಾಟ ಮತ್ತು “ಎಲ್ಲರಿಗೂ ಸಮಾನ ಸ್ವಾತಂತ್ರ್ಯ ಉತ್ತೇಜಿಸುವುದಕ್ಕಾಗಿ” 2023 ರ ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಪಡೆದಿದ್ದಾರೆ.
ನೊಬೆಲ್ ಪ್ರಶಸ್ತಿ ಸಮಿತಿಯ ಪ್ರಕಾರ, ನರ್ಗೆಸ್ ಮೊಹಮ್ಮದಿ ಅವರನ್ನು “13 ಬಾರಿ ಬಂಧಿಸಲಾಗಿದೆ, ಐದು ಬಾರಿ ಅಪರಾಧಿ ಎಂದು ಘೋಷಿಸಲಾಗಿದೆ. ಒಟ್ಟು 31 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಮತ್ತು 154 ಛಡಿ ಏಟಿನ ಶಿಕ್ಷೆ ನೀಡಲಾಗಿದೆ.
ಫ್ರಂಟ್ ಲೈನ್ ಡಿಫೆಂಡರ್ಸ್ ಹಕ್ಕುಗಳ ಸಂಘಟನೆಯ ಪ್ರಕಾರ, ಇರಾನ್ ಮಾನವ ಹಕ್ಕುಗಳ ಕಾರ್ಯಕರ್ತೆ ಟೆಹ್ರಾನ್‌ನ ಎವಿನ್ ಜೈಲಿನಲ್ಲಿ ಬಹು ವರ್ಷದ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ತಿಳಿಸಿದೆ.
ನರ್ಗೆಸ್ ಮೊಹಮ್ಮದಿ ಇರಾನ್ ಆಡಳಿತದ ವಿರುದ್ಧ “ಅಪಪ್ರಚಾರ” ಮಾಡಿದ ಆರೋಪವನ್ನೂ ಎದುರಿಸುತ್ತಿದ್ದಾರೆ.
ಅವರು 2003 ರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾದ ಶಿರಿನ್ ಎಬಾಡಿ ನೇತೃತ್ವದ ಸರ್ಕಾರೇತರ ಸಂಸ್ಥೆಯಾದ ಡಿಫೆಂಡರ್ಸ್ ಆಫ್ ಹ್ಯೂಮನ್ ರೈಟ್ಸ್ ಸೆಂಟರ್‌ನ ಉಪ ಮುಖ್ಯಸ್ಥರಾಗಿದ್ದಾರೆ ಎಂದು ರಾಯಿಟರ್ಸ್ ವರದಿ ಹೇಳಿದೆ.
ನರ್ಗೆಸ್ ಮೊಹಮ್ಮದಿಯವರು ಭೌತಶಾಸ್ತ್ರದ ವಿದ್ಯಾರ್ಥಿಯಾಗಿ, ಸಮಾನತೆ ಮತ್ತು ಮಹಿಳಾ ಹಕ್ಕುಗಳಿಗಾಗಿ ಪ್ರತಿಪಾದಿಸಲು ಪ್ರಾರಂಭಿಸಿದರು. ಅವರು “ವ್ಯವಸ್ಥಿತ ತಾರತಮ್ಯ ಮತ್ತು ದಬ್ಬಾಳಿಕೆ” ಯನ್ನು ನಿರಂತರವಾಗಿ ವಿರೋಧಿಸಿದ್ದಾರೆ.ಅವರು ಗೌರವಯುತ ಜೀವನವನ್ನು ನಡೆಸುವ ಹಕ್ಕಿಗಾಗಿ ಹೋರಾಟ” ವನ್ನು ಬೆಂಬಲಿಸಿದ್ದಾರೆ ಎಂದು ನೊಬೆಲ್ ಸಮಿತಿ ಹೇಳಿದೆ. ಅವರ ಹೋರಾಟವು “ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯದ ಹಕ್ಕಿಗೆ” ವಿಸ್ತರಿಸುತ್ತದೆ, ಮಹಿಳೆಯರ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ನಿಗ್ರಹಿಸುವ ನಿಯಮಗಳಿಗೆ ಅವರು ಸವಾಲು ಹಾಕಿದ್ದಾರೆ ಎಂದು ಸಮಿತಿ ಹೇಳಿದೆ.
ನೊಬೆಲ್ ಪ್ರಶಸ್ತಿಗಳು 11 ಮಿಲಿಯನ್ ಸ್ವೀಡಿಷ್ ಕ್ರೋನರ್ (ಸುಮಾರು $1 ಮಿಲಿಯನ್) ನಗದು ಪ್ರಶಸ್ತಿಯನ್ನು ಹೊಂದಿದೆ. ಪುರಸ್ಕೃತರು ಡಿಸೆಂಬರ್‌ನಲ್ಲಿ ನಡೆಯುವ ಪ್ರಶಸ್ತಿ ಸಮಾರಂಭಗಳಲ್ಲಿ 18-ಕ್ಯಾರೆಟ್ ಚಿನ್ನದ ಪದಕ ಸಹ ಸ್ವೀಕರಿಸುತ್ತಾರೆ.
ಕಳೆದ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಉಕ್ರೇನ್, ಬೆಲಾರಸ್ ಮತ್ತು ರಷ್ಯಾದ ಮಾನವ ಹಕ್ಕುಗಳ ಕಾರ್ಯಕರ್ತರಿಗೆ ನೀಡಲಾಗಿತ್ತು.
ಗುರುವಾರ, ನಾರ್ವೇಜಿಯನ್ ಲೇಖಕ ಜಾನ್ ಫೋಸ್ಸೆ ಅವರಿಗೆ 2023 ರ ಸಾಹಿತ್ಯದ ನೊಬೆಲ್ ಪ್ರಶಸ್ತಿ ನೀಡಲಾಯಿ. ವಿಜ್ಞಾನಿಗಳಾದ ಮೌಂಗಿ ಬವೆಂಡಿ, ಲೂಯಿಸ್ ಬ್ರೂಸ್ ಮತ್ತು ಅಲೆಕ್ಸಿ ಎಕಿಮೊವ್ ಅವರು “ಕ್ವಾಂಟಮ್ ಡಾಟ್‌ಗಳ ಅನ್ವೇಷಣೆ ಮತ್ತು ಸಂಶ್ಲೇಷಣೆಗಾಗಿ” 2023 ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ