ಪಠಾಣಕೋಟ್ ದಾಳಿ ಮಾಸ್ಟರ್ ಮೈಂಡ್ ಶಾಹಿದ್ ಲತೀಫ್ ಪಾಕಿಸ್ತಾನದಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಹತ್ಯೆ

ಸಿಯಾಲ್‌ಕೋಟ್‌: ಭಾರತದ ಪಠಾಣ್‌ಕೋಟ್ ದಾಳಿಯ ಮಾಸ್ಟರ್‌ಮೈಂಡ್ ಮತ್ತು ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಾಹಿದ್ ಲತೀಫ್‌ನನ್ನು ಬುಧವಾರ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ.
41 ವರ್ಷದ ಶಾಹಿದ್ ಲತೀಫ್ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಇಎಂ) ಸದಸ್ಯ ಮತ್ತು ಜನವರಿ 2, 2016 ರಂದು ನಡೆದ ಪಠಾಣ್‌ಕೋಟ್ ದಾಳಿಯ ಪ್ರಮುಖ ಸಂಚುಕೋರ. ಆತ ಪಾಕಿಸ್ತಾನದ ಸಿಯಾಲ್‌ಕೋಟ್‌ನಿಂದ ದಾಳಿಯನ್ನು ಸಂಘಟಿಸಿದ್ದ ಮತ್ತು ಅದನ್ನು ಕಾರ್ಯಗತಗೊಳಿಸಲು ನಾಲ್ವರು ಜೆಎಂ ಭಯೋತ್ಪಾದಕರನ್ನು ಪಠಾಣ್‌ಕೋಟ್‌ಗೆ ಕಳುಹಿಸಿದ್ದ.

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದನೆಯ ಆರೋಪದ ಮೇಲೆ ನವೆಂಬರ್ 1994 ರಲ್ಲಿ ಲತೀಫ್ ನನ್ನು ಭಾರತದಲ್ಲಿ ಬಂಧಿಸಲಾಯಿತು. ವಿಚಾರಣೆಗೆ ಒಳಪಡಿಸಲಾಯಿತು ಮತ್ತು ಅಂತಿಮವಾಗಿ ಜೈಲಿನಲ್ಲಿರಿಸಲಾಯಿತು. ಭಾರತದಲ್ಲಿ ಶಿಕ್ಷೆ ಅನುಭವಿಸಿದ ನಂತರ, 2010 ರಲ್ಲಿ ವಾಘಾ ಮೂಲಕ ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಯಿತು. 1999ರಲ್ಲಿ ಇಂಡಿಯನ್ ಏರ್ ಲೈನ್ಸ್ ವಿಮಾನ ಅಪಹರಣ ಪ್ರಕರಣದಲ್ಲೂ ಲತೀಫ್ ಆರೋಪಿಯಾಗಿದ್ದ.
2010 ರಲ್ಲಿ ಬಿಡುಗಡೆಯಾದ ನಂತರ ಲತೀಫ್ ಪಾಕಿಸ್ತಾನದ ಜಿಹಾದಿ ಕಾರ್ಖಾನೆಗೆ ಹಿಂತಿರುಗಿದ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ಹೇಳಿದೆ. ಭಾರತ ಸರ್ಕಾರದಿಂದ ಆತನನ್ನು ವಾಂಟೆಡ್ ಭಯೋತ್ಪಾದಕ ಎಂದು ಪಟ್ಟಿ ಮಾಡಲಾಗಿದೆ.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement