ಹಮಾಸ್ ಉಗ್ರರ ದಾಳಿಯಿಂದ ತತ್ತರಿಸಿರುವ ಇಸ್ರೇಲ್ನಲ್ಲಿ 25 ವರ್ಷದ ಯುವತಿಯೊಬ್ಬಳು ಕೆಚ್ಚೆದೆಯಿಂದ ಹೋರಾಡಿ ತನ್ನ ಇಡೀ ಗ್ರಾಮವನ್ನು ರಕ್ಷಿಸಿದ್ದಾಳೆ ಹಾಗೂ ಅವಳ ನೇತೃತ್ವದ ತಂಡ 25 ಉಗ್ರರನ್ನು ಹೊಡೆದುರುಳಿಸಿದೆ. ಅವಳೇ ಐವರು ಉಗ್ರರನ್ನು ಸ್ವತಃ ಎದುರಿಸಿ ಹೊಡೆದುರುಳಿಸಿದ್ದಾಳೆ.
ಈ 25 ವರ್ಷದ ಇನ್ಬಾರ್ ಲೈಬರ್‌ಮ್ಯಾನ್ ಎಂಬ ಇಸ್ರೇಲಿನ ಯುವತಿ ತನ್ನ ಸಾಹಸದಿಂದ ಹಮಾಸ್ ಅನ್ನೇ ಹಿಮ್ಮೆಟ್ಟಿಸಿದ್ದಾಳೆ. ಗಡಿಯ ಸಮೀಪವೇ ಇರುವ ಈ ಗ್ರಾಮ ಹಮಾಸ್ ಬಂಡುಕೋರರು ನಿಯಂತ್ರಿಸುವ ಗಾಜಾ ಪಟ್ಟಿಯಿಂದ ಕೇವಲ ಕಲ್ಲೆಸೆಯುವಷ್ಟು ದೂರದಲ್ಲಿದೆ.
ಡಿಸೆಂಬರ್ 2022 ರಿಂದ ಗ್ರಾಮದ ಭದ್ರತಾ ಸಂಯೋಜಕಳಾಗಿರುವ ಯುವತಿ ಇನ್ಬಾರ್ ಲೈಬರ್‌ಮ್ಯಾನ್ ಅಕ್ಟೋಬರ್ 7ರಂದು ಸ್ಫೋಟದ ಸದ್ದನ್ನು ಕೇಳಿದ್ದಾಳೆ. ಇದು ಹಳ್ಳಿಯ ಮೇಲೆ ಸಾಮಾನ್ಯವಾಗಿ ರಾಕೆಟ್ ದಾಳಿಯ ಸಮಯದಲ್ಲಿ ಕೇಳಿಬರುವ ಶಬ್ದಕ್ಕಿಂತ ವಿಭಿನ್ನವಾಗಿದೆ ಎಂದು ತಕ್ಷಣವೇ ಗಮನಿಸಿದ್ದಾಳೆ.
ಅಪಾಯದ ಮುನ್ಸೂಚನೆ ಅರಿತ ಅವಳು ಭಯದಿಂದ ಹೆದರುವ ಬದಲು, ಹಳ್ಳಿಯ ಶಸ್ತ್ರಾಗಾರದಿಂದ ಬಂದೂಕುಗಳನ್ನು ನಿವಾಸಿಗಳಿಗೆ ವಿತರಿಸಲು ಶಸ್ತ್ರಾಗಾರದತ್ತ ಧಾವಿಸಿದ್ದಾಳೆ.
ಇತರ 12 ಭದ್ರತಾ ಸಿಬ್ಬಂದಿಗೆ ಗನ್ಗಳನ್ನು ನೀಡಿ, ಎಂಥ ಪರಿಸ್ಥಿತಿಯನ್ನೂ ಎದುರಿಸಲು ತಕ್ಷಣ ಸಜ್ಜಾಗಿರುವಂತೆ ಸೂಚಿಸಿದಳು. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಲೈಬರ್‌ಮ್ಯಾನ್ ಹಮಾಸ್ ವಿರುದ್ಧ ಹೊಂಚುದಾಳಿಗಳನ್ನು ಸಂಯೋಜಿಸಿದಳು ಮತ್ತು 12 ಸದಸ್ಯರ ತನ್ನ ತಂಡದೊಂದಿಗೆ ಹಮಾಸ್ ಹೋರಾಟಗಾರರನ್ನು ಹೊಡೆದುರುಳಿಸಿದಳು. ಆಗ ಅವರ ಬಳಿ ರಕ್ಷಣೆಗಾಗಿ ಯಾವುದೇ ವ್ಯವಸ್ಥೆಗಳಿಲ್ಲವಾಗಿತ್ತು. ಆದರೂ ಶಸ್ತ್ರ ಸಜ್ಜಿತ ಆಕ್ರಮಣಕಾರರನ್ನು ಎದುರಿಸಿದರು ಮತ್ತು ಯುವತಿ ಲೈಬರ್‌ಮ್ಯಾನ್ ಸ್ವತಃ ಐದು ಉಗ್ರಗಾಮಿಗಳನ್ನು ಹೊಡೆದುರುಳಿಸಿದಳು.
ಆಕೆ ತನ್ನ ಪ್ರದೇಶದ ಆಯಕಟ್ಟಿನ ಸ್ಥಳಗಳಲ್ಲಿ ತನ್ನ ತಂಡದವರನ್ನು ನಿಯೋಜಿಸಿ ಹೊಂಚು ಹಾಕಿ ಗೆರಿಲ್ಲಾ ದಾಳಿ ನಡೆಸಲು ನಿರ್ದೇಶನ ನೀಡಿದಳು. ಅಲ್ಲದೆ, ತನ್ನ ಗ್ರಾಮದ ಮಕ್ಕಳು ಮಹಿಳೆಯರನ್ನೆಲ್ಲ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಳು. ಇಸ್ರೇಲ್ ಭದ್ರತಾ ಪಡೆಗಳು ಸ್ಥಳಕ್ಕೆ ಬರುವವರೆಗೂ ಹಮಾಸ್ ಆಕ್ರಮಣಕಾರರೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ಭೀಕರ ಗುಂಡಿನ ಕಾಳಗದ ನೇತೃತ್ವ ವಹಿಸಿದ್ದ ಈ ಯುವತಿ ಅಕ್ಷರಶಃ ತನ್ನ ಗ್ರಾಮವನ್ನು ರಕ್ಷಿಸಿದ್ದಾಳೆ ಇಂದು ಇಸ್ರೇಲ್ ಅವಳನ್ನು ಪ್ರಶಂಸಿಸಿದೆ.
ತನ್ನ ಭದ್ರತೆಯಲ್ಲಿದ್ದ ಸಮುದಾಯವನ್ನು ರಕ್ಷಣೆ ಮಾಡಿದ್ದಲ್ಲದೆ, ದಾಳಿಗೆ ಬಂದಿದ್ದ ಅಷ್ಟೂ ಹಮಾಸ್ ಉಗ್ರರನ್ನು ಸದೆಬಡಿದಿದ್ದಾಳೆ. ನಿರ್ ಆಮ್ ಅನ್ನು ತೂರಲಾಗದ ಕೋಟೆಯಾಗಿ ಪರಿವರ್ತಿಸಲಾಯಿತು. ಆದರೆ ಹತ್ತಿರದ ಮತ್ತೊಂದು ಗ್ರಾಮದಲ್ಲಿ ಭಾರೀ ಅನಾಹುತ ಸಂಭವಿಸಿದೆ. ವಿಶೇಷವೆಂದರೆ ಲಿಬರ್‌ಮ್ಯಾನ್ ಗ್ರಾಮದ ಮೊದಲ ಮಹಿಳಾ ಮಿಲಿಟರಿ ಭದ್ರತಾ ಸಂಯೋಜಕಿ.
ಈಗ ಈಕೆಯ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಲಾರಂಭಿಸಿದೆ. ಇಸ್ರೇಲ್‌ನ X ಖಾತೆಯು ಲೈಬರ್‌ಮನ್ ಕೆಚ್ಚೆದೆಯ ಪ್ರಯತ್ನಗಳಿಗಾಗಿ ಅವಳನ್ನು ಶ್ಲಾಘಿಸಿತು, ಅವಳಿಂದಾಗಿ “ಸಂಪೂರ್ಣ ಸಮುದಾಯ ರಕ್ಷಿಸಲ್ಪಟ್ಟಿದೆ” ಎಂದು ಹೇಳಿದೆ
ನಿಮ್ಮ ಕಾಮೆಂಟ್ ಬರೆಯಿರಿ