ನವದೆಹಲಿ : ಮೂರು ದಿನಗಳ ಹಿಂದೆ ಕಾಂಗ್ರೆಸ್ ಅನ್ನು ಗೇಲಿ ಮಾಡುವ ಮೂಲಕ ವಿಪಕ್ಷಗಳ ಮೈತ್ರಿಕೂಟ-ಇಂಡಿಯಾ ಬ್ಲಾಕ್ ಜೊತೆಗಿನ ತಮ್ಮ ಪಕ್ಷದ ಸಂಬಂಧದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳನ್ನು ಮೂಡಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಈಗ ‘ಪಿಡಿಎ’ ಪದವನ್ನು ಬಳಸಿ ಮತ್ತೊಂದು ಪೋಸ್ಟ್ ಹಾಕಿರುವುದು ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಆರು ಕ್ಷೇತ್ರಗಳಿಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಗಳನ್ನು ಪರಿಗಣಿಸುವುದಾಗಿ ಭರವಸೆ ನೀಡಿದ ಹೊರತಾಗಿಯೂ ಮಧ್ಯಪ್ರದೇಶದಲ್ಲಿ ತನ್ನ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಸಮಾಜವಾದಿ ಪಕ್ಷಕ್ಕೆ ಯಾವುದೇ ಸ್ಥಾನಗಳನ್ನು ನೀಡದ ಕಾರಣ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ಸಂಬಂಧಗಳು ಹದಗೆಟ್ಟಿದೆ. ಅಂದಿನಿಂದ ಅಖಿಲೇಶ್ ಯಾದವ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಮತ್ತು ನವೆಂಬರ್ 17 ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದ 18 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷವು ಅಭ್ಯರ್ಥಿಗಳನ್ನು ನಿಲ್ಲಿಸಿದೆ ಹಾಗೂ ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಎದುರಾಳಿಗಳಾಗಿದ್ದಾರೆ.
ಭಾನುವಾರ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, ಅಖಿಲೇಶ ಸಿಂಗ್ ಯಾದವ್ ಅವರು ಪಕ್ಷದ ಕೆಂಪು-ಹಸಿರು ಬಾವುಟದ ಚಿಹ್ನೆ ಮತ್ತು ಅದರ ಮೇಲೆ ಹಿಂದಿಯಲ್ಲಿ ಬರೆಯಲಾದ ಸಂದೇಶವನ್ನು ಹೊಂದಿರುವ ಎಸ್‌ಪಿ ಕಾರ್ಯಕರ್ತನ ಫೋಟೋವನ್ನು ಹಂಚಿಕೊಂಡಿದ್ದಾರೆ. ಹಾಗೂ “ಮಿಷನ್ 2024. ನೇತಾಜಿ (ದಿವಂಗತ ಮುಲಾಯಂ ಸಿಂಗ್ ಯಾದವ್) ಅಮರರಾಗಿ ಉಳಿಯಲಿ. ‘ಪಿಡಿಎ’ ಈ ಬಾರಿ ಚುನಾವಣೆಯಲ್ಲಿ ಅಖಿಲೇಶ ಯಾದವ್ ಗೆಲ್ಲುವುದನ್ನು ಖಚಿತಪಡಿಸುತ್ತದೆ. ಅಖಿಲೇಶ ಯಾದವ್ ಬಡವರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳುತ್ತಾರೆ ಎಂದು ಅದರಲ್ಲಿ ಬರೆಯಲಾಗಿದೆ.
‘ಪಿಡಿಎ’ ಎಂದರೆ ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರು ಎಂಬುದನ್ನು ಸೂಚಿಸುತ್ತದೆ ಮತ್ತು ಅಖಿಲೇಶ ಯಾದವ್ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು (ಎನ್‌ಡಿಎ) ಸೋಲಿಸುತ್ತಾರೆ ಎಂದು ಪ್ರತಿಪಾದಿಸುತ್ತಿದ್ದಾರೆ.
ಪೋಸ್ಟ್‌ನೊಂದಿಗೆ ತಮ್ಮ ಸಂದೇಶದಲ್ಲಿ, ಯಾದವ್ ಅವರು ಹಿಂದಿಯಲ್ಲಿ, “2024 ರ ಚುನಾವಣೆಗಳು ಪಿಡಿಎ (PDA) ಕ್ರಾಂತಿಯಾಗಲಿದೆ” ಎಂದು ಬರೆದಿದ್ದಾರೆ.
ಕಾಂಗ್ರೆಸ್ ಪಕ್ಷವು ಮಧ್ಯಪ್ರದೇಶಕ್ಕೆ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದ ನಂತರ, ಗುರುವಾರ ಯಾದವ್ ಅವರು ಕಾಂಗ್ರೆಸ್ ಅನ್ನು ಟೀಕಿಸಿದ್ದರು. ಕಾಂಗ್ರೆಸ್ ಪಕ್ಷವು ಇತರ ಪಕ್ಷಗಳನ್ನು “ಮೂರ್ಖʼರನ್ನಾಗಿಸುತ್ತದೆ ಎಂದು ಆರೋಪಿಸಿದರು ಮತ್ತು ರಾಜ್ಯಮಟ್ಟದಲ್ಲಿ ಮೈತ್ರಿ ಕೆಲಸ ಮಾಡುವುದಿಲ್ಲ ಎಂದು ಸಮಾಜವಾದಿ ಪಕ್ಷಕ್ಕೆ ಅರಿವಾಗಿದೆ ಎಂದು ಹೇಳಿದ್ದರು.
ಆರು ಕ್ಷೇತ್ರಗಳಲ್ಲಿ ಟಿಕೆಟ್ ನೀಡುವ ಕುರಿತು ನಮ್ಮ ಬಗ್ಗೆ ಯೋಚಿಸುತ್ತೇವೆ ಎಂದು ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಕಾಂಗ್ರೆಸ್ ತನ್ನ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಿದಾಗ ಸಮಾಜವಾದಿ ಪಕ್ಷಕ್ಕೆ ಏನೂ ಇರಲಿಲ್ಲ. ರಾಜ್ಯದಲ್ಲಿ ಯಾವುದೇ ಮೈತ್ರಿ ಇಲ್ಲ ಎಂದು ನನಗೆ ತಿಳಿದಿದ್ದರೆ, ನಾವು ಭೇಟಿಯಾಗುತ್ತಿರಲಿಲ್ಲ, ನಾವು ಕಾಂಗ್ರೆಸ್ ಜೊತೆ ಮಾತನಾಡುತ್ತಿರಲಿಲ್ಲ ಎಂದು ಅವರು ಹೇಳಿದ್ದರು.
ಈ ಬಗ್ಗೆ ಕೇಳಲಾದ ಪ್ರಶ್ನೆಗೆ, ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಕಮಲನಾಥ ಅವರು “ಅರೆ ಭಾಯ್ ಛೋಡೋ ಅಖಿಲೇಶ್ ವಖಿಲೇಶ್… ( ಅಖಿಲೇಶ್ ವಖಿಲೇಶ್ ಎಂಬುದನ್ನು ಬಿಡಿ) ಎಂದು ಹೇಳಿದರು. ಹಾಗೂ ಇಂಡಿಯಾ ಮೈತ್ರಿಕೂಟವು ಕೇಂದ್ರ ಮಟ್ಟದಲ್ಲಿ ಮತ್ತು ಅದರ ಗಮನ ಲೋಕಸಭೆ ಚುನಾವಣೆಯ ಮೇಲಿದೆ ಎಂದು ಅವರು ಪ್ರತಿಪಾದಿಸಿದ್ದರು.
ಇದರಿಂದ ಅಸಮಾಧಾನಗೊಂಡಿರುವ ಅಖಿಲೇಶ ಯಾದವ್ ಅವರು, ಶುಕ್ರವಾರವೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದರು, “ಕಾಂಗ್ರೆಸ್ ಈ ರೀತಿ ವರ್ತಿಸಿದರೆ, ಅವರೊಂದಿಗೆ ಯಾರು ನಿಲ್ಲುತ್ತಾರೆ ಎಂದು ಪ್ರಶ್ನಿಸಿದರು. ಶನಿವಾರ, ಯಾದವ್ ಅವರು ಕಾಂಗ್ರೆಸ್ ಪಕ್ಷವು ಸಮಾಜವಾದಿ ಪಕ್ಷಕ್ಕೆ “ದ್ರೋಹ” ಮಾಡಬಾರದು ಎಂದು ಹೇಳಿದರು ಮತ್ತು ಅದು ಮೈತ್ರಿಯನ್ನು ಬಯಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಮೂಲಕ ನನಗೆ ಒಬ್ಬರಿಂದ ಸಂದೇಶ ಬಂದಿದೆ. ಅವರು ಏನಾದರೂ ಹೇಳಿದರೆ, ನಾನು ಅದನ್ನು ಅನುಸರಿಸಬೇಕಾಗುತ್ತದೆ. ಅವರು ನನಗೆ ಕೆಲವು ಸಂದೇಶವನ್ನು ನೀಡಿದ್ದಾರೆ” ಎಂದು ಅಖಿಲೇಶ ಯಾದವ್ ಯಾವುದೇ ಹೆಸರನ್ನು ಬಹಿರಂಗಪಡಿಸದೆ ಅಥವಾ ಹೆಚ್ಚಿನ ವಿವರಣೆಯನ್ನು ನೀಡದೆ ಹೇಳಿದರು. “ಆದರೆ ನಾನು ಅವರಿಗೆ ಒಂದು ವಿಷಯ ಹೇಳಲು ಬಯಸುತ್ತೇನೆ: ಅವರು ಮೈತ್ರಿ ಬಯಸದಿದ್ದರೆ ಅವರು ನಮ್ಮನ್ನು ಏಕೆ ಕರೆದರು ಎಂದು ಪ್ರಶ್ನಿಸಿದ್ದಾರೆ.
“ನಮ್ಮ ವಿರುದ್ಧ ಪಿತೂರಿ ಮಾಡಬೇಡಿ, ನಮಗೆ ದ್ರೋಹ ಮಾಡಬೇಡಿ, ತಮಗೆ ಸಮಾಜವಾದಿ ಪಕ್ಷದ ಅಗತ್ಯವಿಲ್ಲ ಎಂದು ಕಾಂಗ್ರೆಸ್‌ನವರು ನಮಗೆ ನೇರವಾಗಿ ಹೇಳಬೇಕು. ನಾವು ಮೈತ್ರಿ ಬಗ್ಗೆ ಒಮ್ಮೆಯೂ ಮಾತನಾಡುವುದಿಲ್ಲ ಮತ್ತು ಬಿಜೆಪಿಯನ್ನು ಸೋಲಿಸಲು ನಾವೇ ತಯಾರಿ ನಡೆಸುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಅವರು ಹೇಳಿದರು.
ಅಖಿಲೇಶ ಯಾದವ್ ಅವರು ಜಾತಿ ಜನಗಣತಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿರುವುದರ ಬಗ್ಗೆ ವ್ಯಂಗ್ಯವಾಡಿದರು ಮತ್ತು ಪಕ್ಷವು ಈಗ ಅದನ್ನು ಬಯಸುತ್ತಿರುವುದು ಅದ್ಭುತವಾಗಿದೆ ಎಂದು ಹೇಳಿದರು. ಇದೇ ಕಾಂಗ್ರೆಸ್ ಪಕ್ಷವೇ ಈ ಹಿಂದೆ ಜಾತಿ ಗಣತಿಗೆ ಅಂಕಿ-ಅಂಶ ನೀಡಿಲ್ಲ, ಹಿಂದುಳಿದ ಜಾತಿ, ಪಂಗಡಗಳ ಬೆಂಬಲ ಸಿಗದಿದ್ದಲ್ಲಿ ಯಶಸ್ವಿಯಾಗುವುದಿಲ್ಲ ಎಂಬುದು ಈಗ ಎಲ್ಲರಿಗೂ ಗೊತ್ತಿದೆ. “ಕಾಂಗ್ರೆಸ್ ಪಕ್ಷವು ಈಗ ಜಾತಿ ಗಣತಿಯನ್ನು ಬಯಸುತ್ತಿರುವುದು ಒಂದು ಪವಾಡವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಈಗ ತಾವು ಹುಡುಕುತ್ತಿದ್ದ ಮತವು ತಮ್ಮ ಬಳಿ ಇಲ್ಲ ಎಂಬುದರ ಅರಿವಾಗಿದೆ ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ