ನೋಂದಣಿಯಾಗದ ಮದರಸಾಗಳು ದಿನಕ್ಕೆ ₹10 ಸಾವಿರ ದಂಡ ಪಾವತಿಸಬೇಕು : ಉತ್ತರಪ್ರದೇಶ ಶಿಕ್ಷಣ ಇಲಾಖೆ

ಮುಜಾಫರ್‌ನಗರ : ನೋಂದಣಿಯಾಗದೆ ಕಾರ್ಯನಿರ್ವಹಿಸುತ್ತಿರುವ ಮದರಸಾಗಳಿಗೆ ದಿನಕ್ಕೆ ₹10 ಸಾವಿರ ದಂಡ ವಿಧಿಸಲಾಗುವುದು ಎಂದು ಉತ್ತರಪ್ರದೇಶದ ಶಿಕ್ಷಣ ಇಲಾಖೆ ಹೇಳಿದೆ.
ದಾಖಲೆಗಳಿಲ್ಲದೆ ಮುಜಾಫರ್‌ನಗರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮದರಸಾಗಳಿಗೆ ಪ್ರಾಥಮಿಕ ಶಿಕ್ಷಣ ಇಲಾಖೆ ನೋಟಿಸ್‌ ಜಾರಿ ಮಾಡಿದ್ದು, ನೋಟಿಸ್‌ ತಲುಪಿದ ಮೂರು ದಿನಗಳೊಳಗೆ ಸರಿಯಾದ ದಾಖಲೆಗಳನ್ನು ಸಲ್ಲಿಸಬೇಕು ಇಲ್ಲವೇ ಕ್ರಮ ಎದುರಿಸಬೇಕು ‘ ಎಂದು ಸೂಚನೆ ನೀಡಲಾಗಿದೆ.
ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಮದರಸಾಗಳು ಮಾನ್ಯತೆ ಅಥವಾ ನೋಂದಣಿಯಾಗದೆ ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಮಾಹಿತಿ ನೀಡಿತ್ತು’ ಎಂದು ಪ್ರಾಥಮಿಕ ಶಿಕ್ಷಣಾಧಿಕಾರಿ ಶುಭಂ ಶುಕ್ಲಾ ಹೇಳಿದ್ದಾರೆ.

ಶಿಕ್ಷಣ ಇಲಾಖೆಯ ಈ ಆದೇಶವನ್ನು ಕಾನೂನುಬಾಹಿರ ಎಂದು ಹೇಳಿರುವ ಜಮಿಯತ್ ಉಲಮಾ-ಎ-ಹಿಂದ್ ಸಂಘಟನೆ, ನೋಟಿಸ್‌ ನೀಡಿರುವ ಮದರಸಾಗಳಿಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದೆ.
ಕಾನೂನುಬಾಹಿರವಾಗಿ ನೋಟಿಸ್‌ ನೀಡುವ ಮೂಲಕ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಲಾಗುತ್ತದೆ. ಮದರಸಾಗಳು ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿವೆ. ಹೀಗಾಗಿ ₹10 ಸಾವಿರ ದಂಡ ಪಾವತಿಸಲು ಸಾಧ್ಯವಿಲ್ಲ’ ಎಂದು ಜಮಿಯತ್ ಉಲಮಾ-ಎ-ಹಿಂದ್ ಸಂಘಟನೆಯ ಉತ್ತರಪ್ರದೇಶ ಘಟಕ ಕಾರ್ಯದರ್ಶಿ ಮೌಲಾನ ಜಾಕಿರ್‌ ಹುಸೈನ್‌ ಆರೋಪಿಸಿದ್ದಾರೆ.
ಉತ್ತರಪ್ರದೇಶದಲ್ಲಿ 24 ಸಾವಿರ ಮದರಸಾಗಳು ಕಾರ್ಯನಿರ್ಹಿಸುತ್ತಿದ್ದು ಅವುಗಳಲ್ಲಿ 16 ಸಾವಿರ ಮದರಸಾಗಳಷ್ಟೇ ಮಾನ್ಯತೆ ಪಡೆದುಕೊಂಡಿವೆ. ಉಳಿದ ಎಂಟು ಸಾವಿರ ಮದರಸಾಗಳು ಮಾನ್ಯತೆ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶಿ ದೇಣಿಗೆ ಸ್ವೀಕರಿಸಿರುವ ಕಾರಣಕ್ಕೆ ರಾಜ್ಯದ ನಾಲ್ಕು ಸಾವಿರ ಮದರಸಾಗಳು ಪರಿಶೀಲನೆಯಲ್ಲಿವೆ. ಇವುಗಳ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಾಜ್ಯ ಸರ್ಕಾರ ರಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿ ; ಪತ್ನಿಗೆ ಥಳಿಸಿ ಪರಾರಿ...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement