ಅತ್ಯಾಚಾರ, ಲೂಟಿ, ಡಕಾಯಿತಿ, ಜೈಲಿಗೆ ಹೋಗುವುದರಲ್ಲಿ ಮುಸ್ಲಿಮರು ನಂಬರ್ 1′ : ವಿವಾದಕ್ಕೆ ಕಾರಣವಾದ ಅಸ್ಸಾಂ ರಾಜಕಾರಣಿ ಬದ್ರುದ್ದೀನ್ ಅಜ್ಮಲ್ ಹೇಳಿಕೆ

ದಿಸ್ಪುರ: ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರು ದರೋಡೆ, ಅತ್ಯಾಚಾರ, ಕೊಲೆ, ಈವ್ ಟೀಸಿಂಗ್ ಮತ್ತು ಜೈಲಿಗೆ ಹೋಗುವಂತಹ ಅಪರಾಧಗಳ ವಿಷಯದಲ್ಲಿ ಮುಸ್ಲಿಮರು “ನಂ 1” ಎಂದು ಹೇಳಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಉದ್ಯಮಿ ಹಾಗೂ ರಾಜಕಾರಣಿಯಾಗಿರುವ ಅವರು, ಮುಸ್ಲಿಮರಲ್ಲಿ ಶಿಕ್ಷಣದ ಕೊರತೆಯಿಂದಾಗಿ ಅವರಲ್ಲಿ ಅಪರಾಧಗಳ ಪ್ರಮಾಣ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.
ಅಸ್ಸಾಂನ ಗೋಲ್‌ಪಾರಾ ಜಿಲ್ಲೆಯ ಖಾಸಗಿ ಕಾಲೇಜು ಡಾಲ್ಗೋಮಾ ಅಂಚಲಿಕ್ ಕಾಲೇಜಿನಲ್ಲಿ ಕೆಲದಿನಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಐಯುಡಿಎಫ್ ಮುಖ್ಯಸ್ಥರು, ದರೋಡೆ, ಡಕಾಯಿತಿ, ಅತ್ಯಾಚಾರ, ಲೂಟಿಯಂತಹ ಅಪರಾಧಗಳಲ್ಲಿ ನಾವು ನಂಬರ್ 1 ಆಗಿದ್ದೇವೆ. ಜೈಲಿಗೆ ಹೋಗುವುದರಲ್ಲಿಯೂ ನಾವೇ ನಂ.1. ನಮ್ಮ ಮಕ್ಕಳಿಗೆ ಶಾಲಾ-ಕಾಲೇಜುಗಳಿಗೆ ಹೋಗಲು ಸಮಯವಿಲ್ಲ, ಆದರೆ ಜೂಜಾಡಲು, ಇತರರನ್ನು ಮೋಸಗೊಳಿಸಲು ಅವರಿಗೆ ಸಾಕಷ್ಟು ಸಮಯವಿದೆ. ಇಂತಹ ಎಲ್ಲಾ ತಪ್ಪು ವಿಷಯಗಳಿಗೆ ಯಾರು ಹೆಚ್ಚಾಗಿ ಭಾಗಿಯಾಗಿದ್ದಾರೆಂದು ಕೇಳಿ? ಅದು ಮುಸ್ಲಿಮರು … ಮತ್ತು ಅದು ದುಃಖಕರ ವಿಷಯವಾಗಿದೆ ಎಂದು ಅವರು ಹೇಳಿದ್ದಾರೆ.

ಜೈಲುಗಳಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆ ಎಂದು ಬದ್ರುದ್ದೀನ್ ಅಜ್ಮಲ್ ವಿಷಾದಿಸಿದರು, ಜನರು ಚಂದ್ರ ಮತ್ತು ಸೂರ್ಯನತ್ತ ಹೋಗುತ್ತಿದ್ದಾರೆ ಮತ್ತು ನಾವು ಜೈಲಿಗೆ ಹೋಗುವುದು ಹೇಗೆ ಎಂಬುದರ ಕುರಿತು ಪಿಎಚ್‌ಡಿ ಮಾಡುತ್ತಿದ್ದೇವೆ. ಪೋಲೀಸ್ ಠಾಣೆಗೆ ಹೋಗಿ ಮತ್ತು ಅಲ್ಲಿರುವವರಲ್ಲಿ ಹೆಚ್ಚಿನವರು ಯಾರೆಂದು ನಿಮಗೆ ತಿಳಿಯುತ್ತದೆ. ಇದು ದುಃಖದ ವಿಷಯವಲ್ಲವೇ ಎಂದು ಎಐಯುಡಿಎಫ್ ಮುಖ್ಯಸ್ಥರು ಮುಸ್ಲಿಮರಲ್ಲಿ ಹೆಚ್ಚಿನ ಅಪರಾಧ ಪ್ರವೃತ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಶಿಕ್ಷಣದಿಂದ ಮಾತ್ರ ಇದನ್ನು ಸರಿಪಡಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.
“ನೀವು ಸಾರ್ವಜನಿಕವಾಗಿ ಮಹಿಳೆಯರನ್ನು ಕೆಟ್ಟದೃಷ್ಟಿಯಿಂದ ಏಕೆ ನೋಡುತ್ತೀರಿ? ನಿಮ್ಮ ಸ್ವಂತ ಕುಟುಂಬದಲ್ಲಿ ನಿಮಗೆ ತಾಯಿ-ಸಹೋದರಿ ಇಲ್ಲವೇ? ನಮ್ಮ ಯುವಕರಿಂದಾಗಿ ಹೆಣ್ಣು ಮಕ್ಕಳು ರಸ್ತೆಯಲ್ಲಿ ಸುರಕ್ಷಿತವಾಗಿಲ್ಲ. ಇದನ್ನು ಇಸ್ಲಾಂ ಕಲಿಸಿಲ್ಲ ಎಂದು ಅವರು ಹೇಳಿದರು.
ನಮ್ಮ ಸುಧಾರಣೆಗೆ ಒಂದೇ ಒಂದು ಮಾರ್ಗವಿದೆ ಮತ್ತು ಅದು ಶಿಕ್ಷಣ. ಒಂದು ಕಾಲದಲ್ಲಿ, ಶಿಕ್ಷಣದ ವಿಷಯದಲ್ಲಿ ನಾವು ವಿಶ್ವದಲ್ಲೇ ನಂಬರ್ 1 ಆಗಿದ್ದೆವು, ಈಗ ಪರಿಸ್ಥಿತಿ ಹಾಗಿಲ್ಲ”ಎಂದು ಎಐಯುಡಿಎಫ್ ಮುಖ್ಯಸ್ಥ ಡಾಲ್ಗೋಮಾ ಅಂಚಲಿಕ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ಸಭೆಯಲ್ಲಿ ಪ್ರತಿಪಾದಿಸಿದರು.

ಪ್ರಮುಖ ಸುದ್ದಿ :-   ರಕ್ಷಣಾ ಸಚಿವ ರಾಜನಾಥ ಸಿಂಗ್ ದೆಹಲಿ ಏಮ್ಸ್ ಗೆ ದಾಖಲು

ಮುಸ್ಲಿಂ ರಾಜಕಾರಣಿಗಳು ಮುಸ್ಲಿಂ ಸಮುದಾಯವನ್ನು ವಂಚಿಸುತ್ತಿದ್ದಾರೆ ಮತ್ತು ಸಮುದಾಯದಲ್ಲಿ ಶಿಕ್ಷಣವನ್ನು ಉತ್ತೇಜಿಸಲು ಏನನ್ನೂ ಅವರು ಮಾಡುತ್ತಿಲ್ಲ ಎಂದು ಆರೋಪಿಸಿದರು. ಈ ಹಿಂದೆ ಅನೇಕ ಮುಸ್ಲಿಮರು ತಮ್ಮ ಸಮುದಾಯದ ಜನರನ್ನು ವಂಚಿಸುವ ಮೂಲಕ ನಾಯಕರಾಗಿದ್ದಾರೆ. ಮುಸ್ಲಿಮರಿಗೆ ಶಿಕ್ಷಣ ನೀಡಲು ಅವರು ಏನನ್ನೂ ಮಾಡಲಿಲ್ಲ. ಇದಕ್ಕೆ ವಿರುದ್ಧವಾಗಿ ಅವರು ಮುಸ್ಲಿಮರನ್ನು ಗುಲಾಮರನ್ನಾಗಿ ಮಾಡಿ ರಾಜಕೀಯ ಮಾಡಿದರು ಎಂದು ಅಜ್ಮಲ್ ಹೇಳಿದ್ದಾರೆ.
ಏತನ್ಮಧ್ಯೆ, ಎಐಯುಡಿಎಫ್ ಮುಖ್ಯಸ್ಥರ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದು, ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದಂತೆ ಬದ್ರುದ್ದೀನ್ ಅಜ್ಮಲ್ ಅವರ ಪ್ರತಿಪಾದನೆಗೆ ಅನೇಕ ಮುಸ್ಲಿಂ ಮುಖಂಡರು ಆಕ್ಷೇಪಣೆಗಳನ್ನು ಎತ್ತಿದ್ದಾರೆ.
ಬದ್ರುದ್ದೀನ್ ಅಜ್ಮಲ್ ಅವರ ಕಾಮೆಂಟ್‌ಗಳಿಗೆ ಪ್ರತಿಕ್ರಿಯೆಯಾಗಿ, ಅಸ್ಸಾಂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ದೇಬಬ್ರತ ಸೈಕಿಯಾ, “ಯಾವುದೇ ಎಐಯುಡಿಎಫ್ ಶಾಸಕರು ವಿಧಾನಸಭೆಯಲ್ಲಿ ಇಂತಹ ಸಮಸ್ಯೆಗಳನ್ನು ತಂದರೆ, ಅವರ ಪಕ್ಷವು ಸೂಕ್ತವಾಗಿ ಉತ್ತರಿಸುತ್ತದೆ” ಎಂದು ಹೇಳಿದ್ದಾರೆ. ಅಜ್ಮಲ್ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಇತಿಹಾಸವನ್ನು ಹೊಂದಿದ್ದಾರೆ, ಇದು ಹೊಸದೇನೂ ಅಲ್ಲ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಮುಖಂಡ ಮತ್ತು ಸಚಿವ ಪಿಜೂಷ್ ಹಜಾರಿಕಾ ಅವರು ಅಜ್ಮಲ್ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿ, ರಾಜ್ಯದಲ್ಲಿ ಮುಸ್ಲಿಮರಲ್ಲಿ ಅಪರಾಧ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಬಿಜೆಪಿ ಹೇಳುತ್ತಿದೆ ಮತ್ತು ಇದು ಕಳವಳಕಾರಿ ಸಂಗತಿಯಾಗಿದೆ ಎಂದು ಹೇಳಿದರು. ‘ಕೆಲವು ಮುಸ್ಲಿಂ ಮುಖಂಡರು ಈ ವಿಷಯದ ಬಗ್ಗೆ ಆತ್ಮಾವಲೋಕನ ಆರಂಭಿಸಿದ್ದು ನನಗೆ ಖುಷಿ ತಂದಿದೆ, ಮುಸ್ಲಿಮರಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗಬೇಕು’ ಎಂದು ಹೇಳಿದರು.
ವಿವಿಧ ವಲಯಗಳ ಟೀಕೆಗಳ ನಡುವೆಯೂ ಬದ್ರುದ್ದೀನ್ ಅಜ್ಮಲ್ ಅವರು ಮುಸ್ಲಿಮರಲ್ಲಿ ಅಪರಾಧದ ಪ್ರಮಾಣಗಳು ಸಾಕಷ್ಟು ಹೆಚ್ಚಿವೆ ಮತ್ತು ಯಾವುದೇ ಜೈಲಿನಲ್ಲಿರುವ ಹೆಚ್ಚಿನ ಅಪರಾಧಿಗಳು ಮುಸ್ಲಿಂ ಸಮುದಾಯದಿಂದ ಬಂದವರು ಎಂಬುದು ಗೊತ್ತಾಗುತ್ತದೆ ಎಂದು ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ತಾವು ಹೇಳಿದ್ದರಲ್ಲಿ “ಏನೂ ತಪ್ಪಿಲ್ಲ” ಎಂದು ಅವರು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಜೈಲುಗಳಿಗೆ ಹೋಗಿ, ಹೆಚ್ಚಿನ ಕೈದಿಗಳು ನಮ್ಮ ಸಮುದಾಯದವರೇ ಎಂಬುದನ್ನು ನೋಡುತ್ತೀರಿ’ ಎಂದರು. ಮುಸ್ಲಿಂ ಪ್ರದೇಶಗಳಲ್ಲಿ ರಸ್ತೆಗಳಲ್ಲಿ ವಾಹನಗಳು ಓಡಿದಾಗ ಹುಡುಗಿಯರನ್ನು ಕಂಡರೆ ಶಿಳ್ಳೆ ಹೊಡೆಯುತ್ತಾರೆ ಎಂದು ಅವರು ಹೇಳಿದರು. ಪೋಷಕರು ಅವಿದ್ಯಾವಂತರಾಗಿದ್ದು, ಅವರಿಗೆ ಸರಿಯಾದ ಶಿಕ್ಷಣ ಸಿಗದಿರುವುದು ಇದಕ್ಕೆ ಕಾರಣ ಎಂದು ಅಜ್ಮಲ್ ಹೇಳಿದ್ದಾರೆ. ಹಿಂದೂಗಳಿರುವ ಪ್ರದೇಶಗಳಲ್ಲಿ ಇದು ನಡೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.
126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಎಐಯುಡಿಎಫ್ 15 ಶಾಸಕರನ್ನು ಹೊಂದಿದೆ.

ಪ್ರಮುಖ ಸುದ್ದಿ :-   ವೀಡಿಯೊ : ಜೈಪುರ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ಸ್ಪೈಸ್‌ಜೆಟ್ ಮಹಿಳಾ ಉದ್ಯೋಗಿ ; ಬಂಧನ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement