ವಿಶ್ವಕಪ್‌ ಕ್ರಿಕೆಟ್‌ : ನ್ಯೂಜಿಲ್ಯಾಂಡ್‌ ವಿರುದ್ಧ ರೋಚಕ ಜಯಗಳಿಸಿದ ಆಸ್ಟ್ರೇಲಿಯಾ

ಧರ್ಮಶಾಲಾ : ಶನಿವಾರ ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ತಂಡವು ವಿಶ್ವಕಪ್ 2023 ಅಂಕಗಳ ಪಟ್ಟಿಯಲ್ಲಿ ಅಗ್ರ 4 ರಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ.
ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 388 ರನ್ ಗಳಿಸಿ ಆಲೌಟ್‌ ಆಯಿತು. ನಿಗದಿತ ಗುರಿಯ ಬೆನ್ನಟ್ಟಿದ ನ್ಯೂಜಿಲ್ಯಾಂಡ್‌ ತಂಡಕ್ಕೆ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 383 ರನ್‌ಗಳಿಸಲು ಸಾಧ್ಯವಾಯಿತು. ಇದು ವಿಶ್ವಕಪ್ ಪಂದ್ಯವೊಂದರಲ್ಲಿ ಎರಡು ತಂಡಗಳ ಅತ್ಯಧಿಕ ಒಟ್ಟು ಮೊತ್ತವಾಗಿದೆ.
ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಸೋತ ನಂತರ ನಾಲ್ಕು ಪಂದ್ಯಗಳನ್ನು ಗೆದ್ದು ಕೊನೆಯ-ನಾಲ್ಕು ಸ್ಥಾನಕ್ಕೆ ಮರಳಿದೆ. ಆಸ್ಟರೇಲಿಯಾದ ಟ್ರಾವಿಸ್ ಹೆಡ್ ತಮ್ಮ ಮೊದಲ ವಿಶ್ವಕಪ್ ಪಂದ್ಯದಲ್ಲಿ 67 ಎಸೆತಗಳಲ್ಲಿ 109 ರನ್ ಗಳಿಸಿದರು ಮತ್ತು ಡೇವಿಡ್ ವಾರ್ನರ್ (65 ಎಸೆತಗಳಲ್ಲಿ 81) ಅವರೊಂದಿಗೆ ಆರಂಭಿಕ ವಿಕೆಟ್‌ಗೆ ಕೇವಲ 19 ಓವರ್‌ಗಳಲ್ಲಿ 175 ರನ್ ಸೇರಿಸಿದರು. ಕೊನೆಯಲ್ಲಿ ಬಿರುಸಿನ ಆಟವಾಡಿದ ಗ್ಲೆನ್ ಮ್ಯಾಕ್ಸ್‌ವೆಲ್ (41), ಜೋಸ್ ಇಂಗ್ಲಿಸ್ (38) ಮತ್ತು
ಕೇವಲ 14 ಎಸೆತಗಳಲ್ಲಿ 37 ರನ್ ಸಿಡಿಸಿದ ಪ್ಯಾಟ್ ಕಮ್ಮಿನ್ಸ್ ತಂಡವನ್ನು ಬೃಹತ್‌ ಮೊತ್ತಕ್ಕೆ ಕೊಂಡೊಯ್ದರು. ನ್ಯೂಜಿಲ್ಯಾಂಡ್‌ ಪರ ಗ್ಲೆನ್ ಫಿಲಿಪ್ಸ್ 37 ರನ್‌ ನೀಡಿ 3 ವಿಕೆಟ್‌ ಪಡೆದರು.

ಪ್ರಮುಖ ಸುದ್ದಿ :-   ಬ್ಲೇಡ್‌ ಹಿಡಿದು ಗ್ಯಾಂಗ್-ರೇಪ್ ಯತ್ನದಿಂದ ಪಾರಾದ ನರ್ಸ್... !

ನ್ಯೂಜಿಲೆಂಡ್ ಪರ ರಚಿನ್ ರವೀಂದ್ರ 89 ಎಸೆತಗಳಲ್ಲಿ 116 ರನ್‌ಗಳ ಪ್ರತಿದಾಳಿಯೊಂದಿಗೆ ಗರಿಷ್ಠ ಸ್ಕೋರ್ ಮಾಡಿದರು. ರವೀಂದ್ರ ಅವರ ಎರಡನೇ ವಿಶ್ವಕಪ್ ಶತಕದ ಹಾದಿಯಲ್ಲಿರುವಾಗ ನ್ಯೂಜಿಲೆಂಡ್ 59 ಎಸೆತಗಳಲ್ಲಿ 96 ರನ್‌ಗಳಿಸಿತು.. ಆದಾಗ್ಯೂ, ಅವರು ಔಟಾದ ನಂತರ ನೀಶಮ್ ಬಹುತೇಕ ಗೆಲುವಿನ ದಡಕ್ಕೆ ತಂಡವನ್ನು ಕೊಂಡೊಯ್ದಿದ್ದರು. ಆದರೆ ಕೊನೆಯ ಹಂತದಲ್ಲಿ ನ್ಯೂಜಿಲ್ಯಾಂಡ್‌ ತಂಡ ಎಡವಿತು. ಕೊನೆಯ ಓವರ್‌ನಲ್ಲಿ 19 ರನ್‌ಗಳ ಅಗತ್ಯವಿದ್ದಾಗ ಜಿಮ್ಮಿ ನಿಶಾಮ್ (58; 39ಎ) ಕ್ರೀಸ್‌ನಲ್ಲಿ ಇದ್ದರು.
ಅನುಭವಿ ಬೌಲರ್ ಮಿಚೆಲ್ ಸ್ಟಾರ್ಕ್‌ ಬೌಲಿಂಗ್ ನಲ್ಲಿ ಹಾಕಿದ ವೈಡ್ ಎಸೆತ ಬೌಂಡರಿಗೆರೆ ದಾಟಿತು. ಆದರೆ ಇದರಿಂದ ಧೃತಿಗೆಡದ ಆಸ್ಟ್ರೇಲಿಯಾ ಆಟಗಾರರು ಅಮೋಘವಾಗಿ ಫೀಲ್ಡಿಂಗ್ ಮಾಡಿ ನಿಶಾಮ್ ಅವರನ್ನು ರನೌಟ್ ಮಾಡಿದರು. ಕೊನೆಯ ಎಸೆತದಲ್ಲಿ ಆರು ರನ್‌ ಅಗತ್ಯವಿತ್ತು. ಬ್ಯಾಟರ್ ಫರ್ಗ್ಯುಸನ್ ಅವರಿಗೆ ಸಿಕ್ಸರ್ ಹೊಡೆಯಲು ಆಗಲಿಲ್ಲ. ಹೀಗಾಗಿ ನ್ಯೂಜಿಲೆಂಡ್‌ ಅಂತಿಮವಾಗಿ ಐದು ರನ್‌ಗಳಿಂದ ಸೋಲನುಭಿಸಿತು.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement