ವಿಶ್ವಕಪ್ 2023: ಗ್ಲೆನ್ ಮ್ಯಾಕ್ಸ್‌ವೆಲ್ ಬಳಿಕ ಆಸೀಸ್‌ಗೆ ಮತ್ತೊಂದು ಆಘಾತ; ಸ್ಟಾರ್ ಆಲ್‌ರೌಂಡರ್ ಆಸ್ಟ್ರೇಲಿಯಾಕ್ಕೆ ವಾಪಸ್…

ನವದೆಹಲಿ: ಶನಿವಾರ (ನವೆಂಬರ್ 4) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಸೆಣಸಲಿದೆ.
ಈ ಮಹತ್ವದ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದ ಗ್ಲೆನ್ ಮ್ಯಾಕ್ಸ್‌ವೆಲ್ ಗಾಯದ ಕಾರಣ ಆಡುವುದಿಲ್ಲ, ಆದರೆ ಈಘ ಆಸ್ಟ್ರೇಲಿಯಾಕ್ಕೆ ಮತ್ತೊಂದು ಆಗಾತ ಎದುರಾಗಿದೆ. ತಂಡದ ಸ್ಟಾರ್ ಅಲ್‌ರೌಂಡರ್ ಮಿಚೆಲ್ ಮಾರ್ಷ್ ಸಹ ಆಟಕ್ಕೆ ಲಭ್ಯ ಇರುವುದಿಲ್ಲ ಎಂಬ ಸುದ್ದಿ ಹೊರಬಿದ್ದಿದೆ. ಹೀಗಾಗಿ ಆಸ್ಟ್ರೇಲಿಯಾ ತಂಡ ಡಬಲ್ ಆಘಾತಕ್ಕೆ ಒಳಗಾಗಿದೆ.
ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಅವರು ವೈಯಕ್ತಿಕ ಕಾರಣಗಳಿಂದ ಧಿಡೀರ್ ಆಗಿ ನವೆಂಬರ್ 1ರಂದು ಆಸ್ಟ್ರೇಲಿಯಾಕ್ಕೆ ಹಿಂತಿರುಗಿದ್ದಾರೆ. 32 ವರ್ಷದ ಮಿಚೆಲ್ ಮಾರ್ಷ್ ಅನಿರ್ದಿಷ್ಟ ಅವಧಿಗೆ 2023ರ ವಿಶ್ವಕಪ್‌ನಿಂದ ಹೊರಗುಳಿಯುತ್ತಾರೆ ಮತ್ತು ಹಿಂದಿರುಗುವ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ.

ಶನಿವಾರ, ನವೆಂಬರ್ 4ರಂದು ತನ್ನ ಸಾಂಪ್ರದಾಯಿಕ ಎದುರಾಳಿ ಹಾಗೂ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ನಿರ್ಣಾಯಕ ಮುಖಾಮುಖಿಗೂ ಮುನ್ನ ಕೌಟುಂಬಿಕ ಕಾರಣಗಳಿಂದಾಗಿ ಮಿಚೆಲ್ ಮಾರ್ಷ್ ತವರು ಪರ್ತ್‌ಗೆ ಹಿಂದಿರುಗಿದ್ದಾರೆ ಎನ್ನಲಾಗಿದೆ.
ಆಸ್ಟ್ರೇಲಿಯಾ ತಂಡದ ಅಂತಿಮ ಲೀಗ್ ಪಂದ್ಯವು ನವೆಂಬರ್ 7ರಂದು ಹಶ್ಮತುಲ್ಲಾ ಶಾಹಿದಿ ನಾಯಕತ್ವದ ಅಫ್ಘಾನಿಸ್ತಾನ ವಿರುದ್ಧ ನಡೆಯಲಿದೆ ಮತ್ತು ಆ ಪಂದ್ಯಕ್ಕೆ ಮುನ್ನ ಮಿಚೆಲ್ ಮಾರ್ಷ್ ಮರಳುತ್ತಾರೆಯೇ ಎಂದು ತಿಳಿದಿಲ್ಲ.
ಆಡಿದ ಆರು ಪಂದ್ಯಗಳಲ್ಲಿ ಒಂದು ಶತಕ ಮತ್ತು ಒಂದು ಅರ್ಧಶತಕ ಹಾಗೂ ವಿಶ್ವಕಪ್‌ನಲ್ಲಿ ಕೇವಲ 7 ಓವರ್‌ಗಳ ಬೌಲಿಂಗೆ ಮಾಡಿ ಎರಡು ವಿಕೆಟ್ ಪಡೆದಿರುವ ಮಿಚೆಲ್ ಮಾರ್ಷ್ ಅತ್ಯುತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದರಿಂದ ಇದು ಆಸ್ಟ್ರೇಲಿಯಾ ತಂಡಕ್ಕೆ ಭಾರಿ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ.
ಆಸ್ಟ್ರೇಲಿಯಾ ತಂಡ ಆಡಿದ 6 ಪಂದ್ಯಗಳಲ್ಲಿ 2 ಸೋಲು ಮತ್ತು 4 ಪಂದ್ಯಗಳನ್ನು ಗೆದ್ದು 8 ಅಂಕಗಳೊಂದಿಗೆ ಪ್ರಸ್ತುತ 2023ರ ಏಕದಿನ ವಿಶ್ವಕಪ್‌ನ ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡಗಳ ನಂತರ 3ನೇ ಸ್ಥಾನದಲ್ಲಿದೆ.

ಪ್ರಮುಖ ಸುದ್ದಿ :-   ನಕಲಿ ನೋಟು ಜಾಲ : ಕರ್ನಾಟಕದ ಬಳ್ಳಾರಿ ಸೇರಿ 4 ರಾಜ್ಯಗಳಲ್ಲಿ ಏಕಕಾಲದಲ್ಲಿ ಎನ್‌ ಐ ಎ ದಾಳಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement