ಅಸಾಧ್ಯವಾದ ಗೆಲುವನ್ನು ಅಫ್ಘಾನಿಸ್ತಾನದಿಂದ ಕಸಿದುಕೊಂಡ ಮ್ಯಾಕ್ಸ್‌ವೆಲ್ : ನೋವಿನಲ್ಲೂ ಏಕಾಂಗಿ ಹೋರಾಟ, ಅಜೇಯ 201 ರನ್, ಹಲವು ದಾಖಲೆಗಳು ಪುಡಿಪುಡಿ..

ಮುಂಬೈ: ಮಂಗಳವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಅಜೇಯ 201 ರನ್ ಗಳಿಸುವ ಮೂಲಕ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ತಮ್ಮ ಹೆಸರನ್ನು ಇತಿಹಾಸ ಪುಸ್ತಕಗಳಲ್ಲಿ ಬರೆದಿದ್ದಾರೆ. ಅವರು ಆಸ್ಟ್ರೇಲಿಯಾ ನಿಶ್ಚಿತವಾಗಿಯೂ ಭಾರೀ ಅಂತರದಲ್ಲಿ ಸೋಲುತ್ತದೆ ಎಂದು ಭಾವಿಸಲಾಗಿದ್ದ ಪಂದ್ಯವನ್ನು ಏಕಾಂಗಿ ಹೋರಾಟದ ಮೂಲಕ ಗೆಲ್ಲಿಸಿದ್ದಾರೆ. ಬೆನ್ನು ನೋವಿನ ಸಮಸ್ಯೆಗಳು, ಸ್ನಾಯು ಸೆಳೆತದ ನೋವಿನ ಮಧ್ಯೆಯೇ ಅವರ 128 ಎಸೆತಗಳ ಈ ಭರ್ಜರಿ ದ್ವಿಶತಕದ ಆಟ ಬಂದಿದೆ.
ಮ್ಯಾಕ್ಸ್‌ವೆಲ್ 128 ಎಸೆತಗಳಲ್ಲಿ 21 ಬೌಂಡರಿ ಮತ್ತು 10 ಸಿಕ್ಸರ್‌ಗಳ ಸಹಾಯದಿಂದ ಅಜೇಯ 201 ರನ್ ಗಳಿಸಿದರು. ಈ ಪ್ರಕ್ರಿಯೆಯಲ್ಲಿ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಹಲವಾರು ಹೊಸ ಮೈಲಿಗಲ್ಲುಗಳನ್ನು ಸಾಧಿಸಿದರು.
ಅಫ್ಗನ್ ತಂಡವು ಒಡ್ಡಿದ 292 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾದ ಏಳು ಬ್ಯಾಟರ್‌ಗಳು ಪೆವಿಲಿಯನ್ ಸೇರಿದಾಗ ಮೊತ್ತ ಕೇವಲ 91 ರನ್‌ಗಳಾಗಿದ್ದವು. ಹಾಗೂ ಅಫ್ಘಾನಿಸ್ತಾನದ ಗೆಲುವು ಬಹುತೇಕ ನಿಶ್ಚಿತವಾಗಿತ್ತು. ಆದರೆ ಕ್ರೀಸ್‌ಗೆ ಬಂದ ತಮ್ಮ ತಂಡದ ನಾಯಕ ಪ್ಯಾಟ್ ಕಮಿನ್ಸ್ ಎಚ್ಚರಿಕೆಯ ಆಟವಾಡಿ ಹೊಡೆತಗಳಿಗೆ ಹೋಗದೆ ಕೇವಲ ಮ್ಯಾಕ್ಸ್‌ ವೆಲ್‌ ಜೊತೆ ಕ್ರೀ ನಲ್ಲಿ ಉಳಿಯುವ ಕೆಲಸವನ್ನಷ್ಟೇ ಮಾಡಿದರು. ಅವರು 68 ಎಸೆತ ಎದುರಿಸಿ ಕೇವಲ 12 ರನ್‌ ಮಾತ್ರ ಗಳಿಸಿದರು. ಆದರೆ ಎಂಟನೇ ವಿಕೆಟ್‌ ಜೊತೆಯಾಟದಲ್ಲಿ ಆಸ್ಟ್ರೇಲಿಯಾ ತಂಡವು 170 ಎಸೆತಗಳಲ್ಲಿ 202 ರನ್‌ ಸೇರಿಸಲು ಕಾರಣರಾದರು.

ಗಾಲ್ಫ್ ಕಾರ್ಟ್‌ನಿಂದ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಮ್ಯಾಕ್ಸ್‌ವೆಲ್ ಕಳೆದ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಚೇತರಿಸಿಕೊಂಡ ಮೇಲೆ ಆಡಿದ ಮೊದಲ ಪಂದ್ಯ ಇದಾಗಿತ್ತು.
ಆದರೆ ಈ ನೋವುಗಳನ್ನು ಬದಿಗಿಟ್ಟು, ಫಿಸಿಯೊ ಬಂದು ಕೊಡುತ್ತಿದ್ದ ಪ್ರಥಮ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತ ಮ್ಯಾಕ್ಸ್‌ವೆಲ್ ಆಡಿದ ರೀತಿ ಸ್ಫೂರ್ತಿದಾಯಕವಾಗಿತ್ತು. ಮ್ಯಾಕ್ಸ್‌ವೆಲ್ ನೋವು ತಡೆಯದೇ ಪೆವಿಲಿಯನ್‌ಗೆ ಮರಳಿ ವಿಶ್ರಾಂತಿ ತೆಗೆದುಕೊಳ್ಳಬಹುದಿತ್ತು. ಕ್ರೀಸ್‌ನಲ್ಲಿ ಕಾಲಿನ ಚಲನೆಯನ್ನು ಹೆಚ್ಚು ಮಾಡದೇ ತಮ್ಮ ದೇಹದ ಸಮತೋಲನ ಕಾಪಾಡಿಕೊಂಡು ಅವರು ಹೊಡೆದ ಸಿಕ್ಸರ್‌ಗಳು ಮತ್ತು ಬೌಂಡರಿಗಳಿಗೆ ಫೀಲ್ಡರ್‌ಗಳೇ ಅವಾಕ್ಕಾದರು. ಮ್ಯಾಕ್ಸ್‌ವೆಲ್ ರೌದ್ರಾವತಾರಕ್ಕೆ ಅಫ್ಘನ್‌ ಆಟಗಾರರು ಕಕ್ಕಾಬಿಕ್ಕಿಯಾದರು.
ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡವು ಇಬ್ರಾಹಿಂ ಜದ್ರಾನ್ ಅವರ ಚೊಚ್ಚಲ ಶತಕದ (129 ನಿ., 143 ಬೌ, 8×4, 3×6) ನೆರವಿನಿಂದ 5 ವಿಕೆಟ್‌ಗೆ 291 ರನ್ ಗಳಿಸಿ ಸವಾಲಿನ ಮೊತ್ತವನ್ನು ಎದುರಾಳಿಗೆ ನೀಡಿತು. ಆದರೆ ಆಸ್ಟ್ರೇಲಿಯಾವು 19 ನೇ ಓವರ್‌ನಲ್ಲಿ ಏಳು ವಿಕೆಟ್‌ಗೆ 91 ರನ್‌ ಗಳಿಸಿ ಬಹುತೇಕ ಭರ್ಜರಿ ಅಂತರದಲ್ಲಿ ಸೋಲುವ ದಯನೀಯ ಸ್ಥಿತಿಗೆ ತಲುಪಿತ್ತು. ಯಾರೂ ಆಸ್ಟ್ರೇಲಿಯಾ ಗೆಲ್ಲುತ್ತದೆ ಎಂದು ಭಾವಿಸಿರಲಿಲ್ಲ. ಆದರೆ ಮ್ಯಾಕ್ಸ್‌ವೆಲ್‌ ಅವರ ಸ್ಫೋಟಕ ಬ್ಯಾಟಿಂಗ್‌ ಅಸಾಧ್ಯವಾದುದನ್ನು ಸಾಧ್ಯವಾಗಿಸಿತು. ಮ್ಯಾಕ್ಸ್‌ವೆಲ್‌ ಮೈಮೇಲೆ ಭೂತಬಂದವರಂತೆ ಆಡಿದರು. ಎದುರಾಳಿ ಬೌಲಿಂಗ್‌ ದಾಳಿಯನ್ನು ನುಚ್ಚುನೂರು ಮಾಡಿದರು.
ಇದು ಆಸ್ಟ್ರೇಲಿಯಾದ ಏಕದಿನದ ಪಂದ್ಯದ ಮೊದಲ ದ್ವಿಶತಕ ಮತ್ತು ಒಟ್ಟಾರೆ 50-ಓವರ್ ಕ್ರಿಕೆಟ್‌ನಲ್ಲಿ ದ್ವಿಶತಕದ 11 ನೇ ನಿದರ್ಶನವಾಗಿದೆ. ಈ ಪಂದ್ಯದಲ್ಲಿ ಅವರು ಆಸ್ಟ್ರೇಲಿಯಾ ಪರವಾಗಿ ಹಲವಾರು ದಾಖಲೆಗಳನ್ನು ಮಾಡಿದರು.
-2011ರಲ್ಲಿ ಬಾಂಗ್ಲಾದೇಶದ ವಿರುದ್ಧ ಶೇನ್ ವಾಟ್ಸನ್ ಅವರ 185* ರನ್‌ ಗಳಿಸಿದ್ದರು. ಮ್ಯಾಕ್ಸ್‌ವೆಲ್ ಆ ದಾಖಲೆಯನ್ನು ಮುರಿದಿದ್ದಾರೆ.

ಪ್ರಮುಖ ಸುದ್ದಿ :-   ಸಿಖ್ಖರ ಭಾವನೆಗಳಿಗೆ ಧಕ್ಕೆ ತಂದ ಆರೋಪ ; ರಾಹುಲ್‌ ಗಾಂಧಿ ವಿರುದ್ಧ 3 ಎಫ್‌ಐಆರ್‌ ದಾಖಲು

– ಇದು ಏಕದಿನದ ಪಂದ್ಯದಲ್ಲಿ ರನ್-ಚೇಸ್‌ ಮಾಡುವಾಗ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಇಲ್ಲಿ, 2021 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 193 ರನ್ ಸಿಡಿಸಿದ್ದ ಪಾಕಿಸ್ತಾನದ ಫಖರ್ ಜಮಾನ್ ಅವರ ದಾಖಲೆಯನ್ನೂ ಮ್ಯಾಕ್ಸ್‌ವೆಲ್ ಮುರಿದರು.
– ಮ್ಯಾಕ್ಸ್‌ವೆಲ್‌ರ ದ್ವಿಶತಕವು 2009 ರಲ್ಲಿ ಬಾಂಗ್ಲಾದೇಶದ ವಿರುದ್ಧ ಜಿಂಬಾಬ್ವೆಯ ಚಾರ್ಲ್ಸ್ ಕೋವೆಂಟ್ರಿ ಅವರ 194 ರನ್‌ಗಳ ದಾಖಲೆಯನ್ನು ಪುಡಿಮಾಡಿದೆ, ಇದು ಏಕದಿನದ ಕ್ರಿಕೆಟ್ ಇತಿಹಾಸದಲ್ಲಿ ಆರಂಭಿಕರಲ್ಲದವರ ಗರಿಷ್ಠ ಸ್ಕೋರ್ ಆಗಿದೆ.
– ಮ್ಯಾಕ್ಸ್‌ವೆಲ್ ಅವರ 201* ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ದ್ವಿಶತಕದ ಮೂರನೇ ನಿದರ್ಶನವಾಗಿದೆ, ಕ್ರಿಸ್ ಗೇಲ್ (2015 ರಲ್ಲಿ ಜಿಂಬಾಬ್ವೆ ವಿರುದ್ಧ 215) ಮತ್ತು ಮಾರ್ಟಿನ್ ಗಪ್ತಿಲ್ (2015 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನ್ಯೂಜಿಲೆಂಡ್‌ಗಾಗಿ 237) ಇತರ ಇಬ್ಬರಾಗಿದ್ದಾರೆ.
– ಮ್ಯಾಕ್ಸ್‌ವೆಲ್ ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್ (12*) ನಡುವೆ ಎಂಟನೇ ವಿಕೆಟ್‌ಗೆ 202 ರನ್‌ಗಳ ಜೊತೆಯಾಟ ಬಂದಿದೆ. ಇದು ಏಕದಿನದ ಪಂದ್ಯಗಳಲ್ಲಿ ಏಳನೇ ಅಥವಾ ನಂತರದ ವಿಕೆಟ್‌ಗೆ ಇದುವರೆಗಿನ ಅತ್ಯಧಿಕ ಪಾಲುದಾರಿಕೆಯಾಗಿದೆ. 2015ರಲ್ಲಿ ನ್ಯೂಜಿಲೆಂಡ್ ವಿರುದ್ಧ ಜೋಸ್ ಬಟ್ಲರ್ ಮತ್ತು ಇಂಗ್ಲೆಂಡ್‌ನ ಆದಿಲ್ ರಶೀದ್ ನಡುವೆ ಏಳನೇ ವಿಕೆಟ್‌ಗೆ 177 ರನ್‌ಗಳ ಜೊತೆಯಾಟವೇ ಈವರೆಗಿನ ದಾಖಲೆಯಾಗಿತ್ತು.

ಪ್ರಮುಖ ಸುದ್ದಿ :-   ವೀಡಿಯೊ...| ದಿಢೀರ್ ಬಾಯ್ತೆರೆದ ರಸ್ತೆ : ಸೆಕೆಂಡೆಗಳಲ್ಲೇ ದೊಡ್ಡ ಟ್ಯಾಂಕರ್ ಅನ್ನೇ ಇಡಿಯಾಗಿ ನುಂಗಿದ ಗುಂಡಿ...!

– ಮ್ಯಾಕ್ಸ್‌ವೆಲ್ ಕೇವಲ 128 ಎಸೆತಗಳಲ್ಲಿ ತಮ್ಮ ದ್ವಿಶತಕವನ್ನು ತಲುಪಿದರು, ಇದು ಏಕದಿನದ ಪಂದ್ಯಗಳಲ್ಲಿ ಎರಡನೇ ವೇಗದ ದ್ವಿಶತಕವಾಯಿತು. ಭಾರತದ ಇಶಾನ್ ಕಿಶನ್ ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧ ಕೇವಲ 126 ಎಸೆತಗಳಲ್ಲಿ ಸಾರ್ವಕಾಲಿಕ ವೇಗದ ದ್ವಿಶತಕ ಗಳಿಸಿದ್ದಾರೆ.
-ಮ್ಯಾಕ್ಸ್‌ವೆಲ್ ಏಕದಿನದಲ್ಲಿ ನಂ.6ನೇ ಕ್ರಮಾಂಕದಲ್ಲಿ ಬ್ಯಾಂಟಿಂಗ್‌ಗೆ ಬಂದ ಆಟಗಾರನ ಗರಿಷ್ಠ ವೈಯಕ್ತಿಕ ಸ್ಕೋರ್ ಮಾಡಿದ ದಾಖಲೆಯನ್ನು ಮುರಿದಿದ್ದಾರೆ. ಪ್ರಾಸಂಗಿಕವಾಗಿ, ಮ್ಯಾಕ್ಸ್‌ವೆಲ್ 1983 ರ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧದ ಕಪಿಲ್ ದೇವ್ ಅವರ ಅಜೇಯ 175* ದಾಖಲೆ ಮುರಿದಿದ್ದಾರೆ.
– ಪಂದ್ಯದಲ್ಲಿ 10 ಸಿಕ್ಸರ್‌ಗಳನ್ನು ಹೊಡೆದು, ಮ್ಯಾಕ್ಸ್‌ವೆಲ್ ತಮ್ಮ ವಿಶ್ವಕಪ್ ವೃತ್ತಿಜೀವನದಲ್ಲಿ 33 ಸಿಕ್ಸರ್‌ಗಳನ್ನು ಹೊಂದಿದ್ದಾರೆ ಮತ್ತು ವಿಶ್ವಕಪ್‌ನಲ್ಲಿ ಈಗ ಹೆಚ್ಚು ಸಿಕ್ಸರ್‌ಗಳನ್ನು ಹೊಂದಿರುವ ಆಟಗಾರರಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ನಾಯಕ ರೋಹಿತ್ ಶರ್ಮಾ (55) ಮತ್ತು ವೆಸ್ಟ್ ಇಂಡೀಸ್ ದಂತಕಥೆ ಕ್ರಿಸ್ ಗೇಲ್ (49) ಅವರ ನಂತರ ಮೂರನೇ ಸ್ಥಾನದಲ್ಲಿದ್ದಾರೆ.

 

 

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement