ಸಿಎಂ ಕಾರ್ಯಕ್ರಮಕ್ಕಾಗಿ ಐತಿಹಾಸಿಕ ಹಂಪಿ ವಿರೂಪಾಕ್ಷ ದೇಗುಲದ ಕಂಬಕ್ಕೆ ಮೊಳೆ ಹೊಡೆದರು…!

ಹೊಸಪೇಟೆ: ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಧ್ವಜ ಕಟ್ಟುವ ಸಲುವಾಗಿ ಹಂಪಿ ವಿರೂಪಾಕ್ಷ ದೇವಸ್ಥಾನದ ಕಲ್ಲಿನ ಕಂಬಕ್ಕೆ ಹಾನಿ ಮಾಡಲಾಗಿದೆ ಎಂದು ವರದಿಯಾಗಿದೆ.
ಕಂಬಕ್ಕೆ ಮೊಳೆ ಹೊಡೆಯಲು ಡ್ರಿಲ್ಲಿಂಗ್ ಮಷಿನ್ ಬಳಸಿರುವುದಕ್ಕೆ ಭಾರತೀಯ ಪುರಾತತ್ವ ಇಲಾಖೆಯು ಈಗ ಕರ್ನಾಟಕ ದತ್ತಿ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ. ನೋಟಿಸ್ ನಲ್ಲಿ ಈ ಬಗ್ಗೆ ಕೂಡಲೇ ವಿವರಣೆ ನೀಡುವಂತೆ ಸೂಚನೆ ನೀಡಿದೆ.
ಕಳೆದ ವಾರ ನಡೆದ ಕಾರ್ಯಕ್ರಮದ ವೇಳೆ ಕಲ್ಲಿನ ಕಂಬಕ್ಕೆ ಧ್ವಜ ಅಳವಡಿಸಲಾಗಿದ್ದು, ಈ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ವಿರೂಪಾಕ್ಷ ದೇಗುಲ ಪುರಾತತ್ವ ಇಲಾಖೆ ಸುಪರ್ದಿಗೆ ಬರುತ್ತದೆ. ಹೀಗಾಗಿ ಇಲ್ಲಿ ಏನೇ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಪುರಾತತ್ವ ಇಲಾಖೆಯಿಂದ ಅನುಮತಿ ಪಡೆಯಬೇಕಿತ್ತು. ಆದರೆ ಯಾವುದೇ ಅನುಮತಿ ಪಡೆಯದೇ ಸ್ಮಾರಕಗಳಿಗೆ ಡ್ರಿಲ್ ಹೊಡೆದು ಮೊಳೆ ಹೊಡೆಯಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಪುರಾತತ್ವ ಇಲಾಖೆ ಹಾನಿಯನ್ನು ಗಮನಿಸಿದೆ. ಪಿಲ್ಲರ್‌ನಲ್ಲಿ ಹಾನಿಗೊಳಗಾದ ಭಾಗದ ಫೋಟೋಗಳನ್ನು ದಾಖಲಾತಿಗಾಗಿ ತೆಗೆದುಕೊಂಡಿದೆ. ಹಂಪಿ ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವುದರಿಂದ ಪಾರಂಪರಿಕ ಸ್ಮಾರಕಗಳಿಗೆ ಸಣ್ಣದೊಂದು ಹಾನಿಯಾದರೂ ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಡ್ರಿಲ್‌ ಮಾಡುವಾಗ ಸ್ಥಳೀಯ ಅಧಿಕಾರಿಗಳು ಏಕೆ ಕ್ರಮಕೈಗೊಳ್ಳಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದ ಕನ್ನಡ ಜ್ಯೋತಿ ಕಾರ್ಯಕ್ರಮದ ದಿನ ಕಂಬಗಳಿಗೆ ನಾಡ ಧ್ವಜಗಳನ್ನು ಕಟ್ಟಲಾಗಿತ್ತು. ಕಂಬವನ್ನು ಕೊರೆದಿದ್ದರೂ ಸ್ಥಳೀಯ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಹಂಪಿಯಲ್ಲಿ ಯಾವುದೇ ದೊಡ್ಡ ಕಾರ್ಯಕ್ರಮಗಳು ನಡೆದಾಗ ಎಎಸ್‌ಐ ಮತ್ತು ಹಂಪಿ ಆಡಳಿತಾಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಐಸಿಸ್‌ ಬೆಂಬಲಿಗನ ಜೊತೆ ವೇದಿಕೆ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ: ಯತ್ನಾಳ ಆರೋಪ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement