ಆಘಾತಕಾರಿ…: ಹೋಮ್‌ಸ್ಟೇ ಉದ್ಯೋಗಿಗೆ ಬಲವಂತವಾಗಿ ಸಾರಾಯಿ ಕುಡಿಸಿ, ಥಳಿಸಿ ಸಾಮೂಹಿಕ ಅತ್ಯಾಚಾರ : ಮಹಿಳೆ ಸೇರಿ ಐವರ ಬಂಧನ

ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ಐವರು ದುಷ್ಕರ್ಮಿಗಳು ಮಹಿಳೆಯೊಬ್ಬರಿಗೆ ಬಲವಂತವಾಗಿ ಮದ್ಯಪಾನ ಮಾಡಿಸಿ, ಆಕೆಗೆ ಥಳಿಸಿ ಹೋಮ್‌ಸ್ಟೇನಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಭಯಾನಕ ಘಟನೆ ವರದಿಯಾಗಿದೆ.
ತನ್ನ ಸ್ನೇಹಿತ ಹಾಗೂ ಇತರೆ ಕೆಲವರು ಬಲವಂತವಾಗಿ ತನಗೆ ಮದ್ಯಪಾನ ಮಾಡಿಸಿದ್ದು, ಬಳಿಕ ಕೊಠಡಿಯೊಂದಕ್ಕೆ ಎಳೆದೊಯ್ದರು. ಅದಕ್ಕೆ ವಿರೋಧಿಸಲು ಪ್ರಯತ್ನಿಸಿದಾಗ ಕೆಲವರು ಥಳಿಸಿದರು ಎಂದು ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ. ಮದ್ಯದ ಬಾಟಲಿಯಿಂದ ತಲೆಗೆ ಹೊಡೆದಿರುವುದಾಗಿಯೂ ಮಹಿಳೆ ಆರೋಪಿಸಿದ್ದಾರೆ. ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಘಟನೆ ಸಂಬಂಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಅತ್ಯಾಚಾರ, ಹಲ್ಲೆ ಮತ್ತು ಇತರೆ ಸಂಬಂಧಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತರಲ್ಲಿ ನಾಲ್ವರು ಪುರುಷರು ಹಾಗೂ ಒಬ್ಬ ಮಹಿಳೆ ಸೇರಿದ್ದಾರೆ. ಅತ್ಯಾಚಾರ ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ.

ಮಹಿಳೆಯು ಅದೇ ಹೋಮ್‌ಸ್ಟೇ ನಲ್ಲಿ ಉದ್ಯೋಗಿಯಾಗಿದ್ದು, ಒಂದೂವರೆ ವರ್ಷಗಳಿಂದ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ವ್ಯಕ್ತಿಯೊಬ್ಬ ಮಹಿಳೆಯನ್ನು ಕೊಠಡಿಗೆ ಎಳೆದುಕೊಂಡು ಹೋಗುವ ವೇಳೆ ಆಕೆ ಸಹಾಯಕ್ಕಾಗಿ ಯಾಚಿಸುವ ವೀಡಿಯೊವೊಂದು ವ್ಯಾಪಕವಾಗಿ ಹರಿದಾಡುತ್ತಿದೆ.
ದುಷ್ಕರ್ಮಿಯೊಬ್ಬ ಆಕೆಯನ್ನು ಬಲವಂತವಾಗಿ ಕೊಠಡಿ ಕಡೆಗೆ ಎಳೆದುಕೊಂಡು ಹೋಗಿದ್ದು, ಆಗ ಅವರು ‘ ತನಗೆ ಮಕ್ಕಳಿದ್ದಾರೆ, ದಯವಿಟ್ಟು ನನಗೆ ಸಹಾಯ ಮಾಡಿ’ ಎಂದು ಅಂಗಲಾಚುವುದು ಸಹ ವೀಡಿಯೊದಲ್ಲಿ ಕಂಡುಬಂದಿದೆ. ನಂತರ ಆಕೆ ನೆಲದ ಮೇಲೆ ಬಿದ್ದಿರುವುದು ಹಾಗೂ ಆಗ ಕೆಲವರು ಆಕೆಗೆ ಹಿಂಸೆ ನೀಡುವುದು ಕೂಡ ವೀಡಿಯೊದಲ್ಲಿ ಕಂಡುಬಂದಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಶಾಲೆಯಲ್ಲೇ ಹೊಡೆದಾಡಿಕೊಂಡ ಪ್ರಾಂಶುಪಾಲೆ-ಶಿಕ್ಷಕಿ

“ದಯವಿಟ್ಟು ನನ್ನನ್ನು ಕಾಪಾಡಿ. ನನಗೆ ನಾಲ್ಕು ಹೆಣ್ಣುಮಕ್ಕಳಿದ್ದಾರೆ. ಅವರು ನನ್ನನ್ನು ಎಳೆದಾಡಿದರು. ನನ್ನ ಫೋನ್ ಕಸಿದುಕೊಂಡಿದ್ದಾರೆ. ನನ್ನ ವೀಡಿಯೊ ಬಳಸಿಕೊಂಡು ನನಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಅವರು ನನ್ನಿಂದ ಹಣ ತೆಗೆದುಕೊಂಡಿದ್ದಾರೆ” ಎಂದು ಮಹಿಳೆ ಹೇಳಿದ್ದಾರೆ.
ತನ್ನನ್ನು ಬಲವಂತವಾಗಿ ಕೊಠಡಿಯಲ್ಲಿ ಕೂಡಿ ಹಾಕಿದ್ದು, ಕ್ರೂರವಾಗಿ ಥಳಿಸಲಾಗಿದೆ. ಆರೋಪಿಗಳು ತನಗೆ ಬಲವಂತವಾಗಿ ಮದ್ಯ ಕುಡಿಸಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ.
ತನ್ನ ಆಕ್ಷೇಪಾರ್ಹ ವೀಡಿಯೊವೊಂದನ್ನುಈ ಮುಂಚೆ ಮಾಡಿ, ಅದನ್ನು ಮುಂದಿಟ್ಟುಕೊಂಡು ತನಗೆ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಮಹಿಳೆ ಹೇಳಿದ್ದಾರೆ ಎಂದು ಹೇಳಲಾಗಿದೆ.

ತಕ್ಷಣ ಸ್ಪಂದಿಸಿದ ಪೊಲೀಸರು
ಹೋಟೆಲ್‌ನಲ್ಲಿ ಅತ್ಯಾಚಾರ ಘಟನೆಯೊಂದು ನಡೆದಿದೆ ಎಂದು ಆಗ್ರಾದ ತಾಜಗಂಜ್ ಪೊಲೀಸ್ ಠಾಣೆಗೆ ಮಾಹಿತಿ ಬಂದಿತ್ತು, ಪೊಲೀಸರು ತಕ್ಷಣವೇ ಸ್ಪಂದಿಸಿದ್ದಾರೆ ಹಾಗೂ ಸಂತ್ರಸ್ತೆಯ ಹೇಳಿಕೆಗಳನ್ನು ಪರಿಗಣಿಸಿ ದೂರು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸದಾರ್ ಅರ್ಚನಾ ಸಿಂಗ್ ತಿಳಿಸಿದ್ದಾರೆ.
ಶನಿವಾರ ತಡ ರಾತ್ರಿ ಸಂತ್ರಸ್ತೆಯು ಪೊಲೀಸರನ್ನು ಸಂಪರ್ಕಿಸಿದ್ದರು. ಇದಕ್ಕೆ ಸ್ಪಂದಿಸಿದ ಪೊಲೀಸರು ಸೋಮವಾರ ಐವರನ್ನು ಬಂಧಿಸಿದ್ದಾರೆ ಎಂದು ಸಹಾಯಕ ಪೊಲೀಸ್ ಆಯುಕ್ತೆ ಅರ್ಚನಾ ಸಿಂಗ್ ಹೇಳಿದ್ದಾರೆ. ಬಂಧಿತ ಐವರಲ್ಲಿ ಒಬ್ಬರಾದ ಮಹಿಳೆ ಕೂಡ ಸಂತ್ರಸ್ತೆ ಕೆಲಸ ಮಾಡುತ್ತಿದ್ದ ಹೋಮ್‌ಸ್ಟೇಗೆ ಸಂಬಂಧಿಸಿದವಳು ಎನ್ನಲಾಗಿದೆ. ಹೋಮ್‌ಸ್ಟೇಗೆ ಬೀಗ ಮುದ್ರೆ ಹಾಕಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಕಾಂಗ್ರೆಸ್​​​ಗೆ ಮತ್ತೊಂದು ಶಾಕ್ ; ಸ್ಪರ್ಧಿಸಲು ನಿರಾಕರಿಸಿ ಟಿಕೆಟ್‌ ವಾಪಸ್‌ ಮಾಡಿದ ಕಾಂಗ್ರೆಸ್​​ ಅಭ್ಯರ್ಥಿ...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement