ಏಕದಿನ ವಿಶ್ವಕಪ್ 2023 : ರೋಚಕ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದ ಆಸ್ಟ್ರೇಲಿಯಾ, ಫೈನಲ್‌ನಲ್ಲಿ ಭಾರತಕ್ಕೆ ಎದುರಾಳಿ

ಕೋಲ್ಕತ್ತಾ: 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾವನ್ನು 3 ವಿಕೆಟ್ ಗಳಿಂದ ಸೋಲಿಸುವ ಮೂಲಕ ಭಾನುವಾರದ ಫೈನಲ್‌ನಲ್ಲಿ ಭಾರತದ ವಿರುದ್ಧದ ಅಂತಿಮ ಹಣಾಹಣಿಗೆ ಸಜ್ಜಾಗಿದೆ.
ದಕ್ಷಿಣ ಆಫ್ರಿಕಾ ಮತ್ತೊಮ್ಮೆ ವಿಶ್ವಕಪ್ ಸೆಮಿಫೈನಲ್‌ನಂತಹ ದೊಡ್ಡ ವೇದಿಕೆಯ ಮೇಲೆ ಬಂದು ‘ಚೋಕರ್ಸ್’ ಎಂಬ ಹಣೆಪಟ್ಟಿಯಂತೆ ಆಡಿತು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ 2023ರ ಅಂತಿಮ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನವೆಂಬರ್ 19ರಂದು ನಡೆಯಲಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 49.4 ಓವರ್ ಗಳಲ್ಲಿ 212 ರನ್ ಗಳಿಸಿ ಆಸ್ಟ್ರೇಲಿಯಕ್ಕೆ ಗೆಲ್ಲಲು 213 ರನ್ ಗಳ ಗುರಿ ನೀಡಿತ್ತು. ದಕ್ಷಿಣ ಆಫ್ರಿಕಾ ಪರ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ 116 ಎಸೆತಗಳಲ್ಲಿ 101 ರನ್‌ಗಳ ಇನಿಂಗ್ಸ್‌ ಆಡಿದರು. ಡೇವಿಡ್ ಮಿಲ್ಲರ್ ಅವರ ಹೋರಾಟದ ಶತಕವನ್ನು ಹೊರತುಪಡಿಸಿ ದಕ್ಷಿಣ ಆಫ್ರಿಕಾ ಬ್ಯಾಟಿಂಗ್‌ನಲ್ಲಿ ವಿಫಲವಾಯಿತು..

ಅಗ್ರ ಬ್ಯಾಟ್ಸ್‌ಮನ್‌ಗಳಾದ ಕ್ವಿಂಟನ್ ಡಿ ಕಾಕ್ (03), ಟೆಂಬಾ ಬವುಮಾ (0), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (06) ಮತ್ತು ಏಡೆನ್ ಮಾರ್ಕ್ರಾಮ್ (10) ವಿಫಲರಾದರು. ತಂಡ 24 ರನ್ ಗಳಿಗೆ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡಿತ್ತು. ಇನ್ನು ಹೆನ್ರಿಕ್ ಕ್ಲಾಸೆನ್ 48 ಎಸೆತಗಳಲ್ಲಿ 47 ರನ್ ಗಳಿಸಿ ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿದರು. ಆಸ್ಟ್ರೇಲಿಯಾ ಪರ ವೇಗಿಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ತಲಾ 3 ವಿಕೆಟ್ ಪಡೆದರು. ಜೋಶ್ ಹ್ಯಾಜಲ್‌ವುಡ್ ಮತ್ತು ಟ್ರಾವಿಸ್ ಹೆಡ್ ತಲಾ 2 ವಿಕೆಟ್ ಪಡೆದರು.

ಪ್ರಮುಖ ಸುದ್ದಿ :-   ವೀಡಿಯೊ...| ಶಿವಸೇನೆ ನಾಯಕಿ ಕರೆದೊಯ್ಯಲು ಬಂದಿದ್ದ ಹೆಲಿಕಾಪ್ಟರ್ ಅಪಘಾತ

ದಕ್ಷಿಣ ಆಫ್ರಿಕಾ ನೀಡಿದ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯ ತಂಡ 47.2 ಓವರ್‌ಗಳಲ್ಲಿ 215 ರನ್ ಗಳಿಸಿ ಜಯ ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಆಸ್ಟ್ರೇಲಿಯದ ಆರಂಭಿಕರಾದ ಟ್ರಾವಿಸ್ ಹೆಡ್ (62, 48b, 9×4, 2×6) ಮತ್ತು ಡೇವಿಡ್ ವಾರ್ನರ್ (29, 18b, 1×4, 4×6) ನಂತರ ತಂಡಕ್ಕೆ 213 ರನ್‌ಗಳ ಗುರಿ ಬೆನ್ನಟ್ಟುವಲ್ಲಿ ಉತ್ತಮ ಆರಂಭವನ್ನು ನೀಡಿದರು.
ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ 62, ಡೇವಿಡ್ ವಾರ್ನರ್ 29, ಸ್ಟೀವ್ ಸ್ಮಿತ್ 30, ಜೋಶ್ ಇಂಗ್ಲಿಸ್ 28 ರನ್ ಹಾಗೂ ಮಿಚೆಲ್ ಸ್ಟಾರ್ಕ್ ಅಜೇಯ 16 ರನ್ ಹೊಡೆದರು.

ದಕ್ಷಿಣ ಆಫ್ರಿಕದ ಸ್ಪಿನ್ನರ್‌ ತಬ್ರೈಜ್ ಶಮ್ಸಿ ಸಮಯೋಚಿತ ವಿಕೆಟ್‌ಗಳೊಂದಿಗೆ ಒತ್ತಡ ಹೇರಿದರು. ಎಡಗೈ ಸ್ಪಿನ್ನರ್ ಶಮ್ಸಿ ಅವರು ಮಾರ್ನಸ್ ಲ್ಯಾಬುಸ್ಚಾಗ್ನೆ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಬೇಗನೆ ಔಟ್‌ ಮಾಡುವ ಮೂಲಕ ಆಸ್ಟ್ರೇಲಿಯಾಕ್ಕೆ ಆಘಾತ ನೀಡಿದರು. ಐದು ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿದ್ದಾಗ ಆಸ್ಟ್ರೇಲಿಯನ್ ಪಾಳಯದಲ್ಲಿ ಸ್ವಲ್ಪಮಟ್ಟಿಗೆ ಆತಂಕದ ವಾತಾವರಣವಿತ್ತು. ಸ್ಟೀವ್ ಸ್ಮಿತ್ (30) ವಿಕೆಟ್‌ಕೀಪರ್ ಕ್ವಿಂಟನ್ ಡಿ ಕಾಕ್‌ ಕ್ಯಾಚಿಗೆ ಔಟಾದ ನಂತರ ಆಸ್ಟ್ರೇಲಿಯಾ ತಂಡ ಇನ್ನಷ್ಟು ಆಘಾತಕ್ಕೆ ಒಳಗಾಯಿತು. ಯಾರ್ಕರ್‌ನೊಂದಿಗೆ ಜೋಶ್ ಇಂಗ್ಲಿಸ್ (28, 49b, 3×4) ಅನ್ನು ಜೆರಾಲ್ಡ್ ಕೋಟ್ಜಿ ಔಟ್‌ ಮಾಡಿದಾಗ ಆಸ್ಟ್ರೇಲಿಯಾ ಮತ್ತಷ್ಟು ತೊಂದರೆಗೆ ಸಿಲುಕಿತು. ಆಸ್ಟ್ರೇಲಿಯಕ್ಕೆ ಇನ್ನೂ 20 ರನ್‌ಗಳ ಅಗತ್ಯವಿದ್ದು ಕೇವಲ ಮೂರು ವಿಕೆಟ್‌ಗಳು ಮಾತ್ರ ಕೈಯಲ್ಲಿತ್ತು. ಆದರೆ ಮಿಚೆಲ್ ಸ್ಟಾರ್ಕ್ (ಅಜೇಯ 16 ) ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್ (ಅಜೇಯ 14) ಅವರ ಸಂವೇದನಾಶೀಲ ಆಟದಿಂದ ಗೆಲುವಿನ ದಡ ಸೇರಿತು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ; ಮತ್ತೊಂದು ಕ್ಷೇತ್ರದಿಂದಲೂ ರಾಹುಲ್‌ ಗಾಂಧಿ ಸ್ಪರ್ಧೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement