2ನೇ ಪೋಕ್ಸೋ ಪ್ರಕರಣ: ಮುರುಘಾ ಶರಣದ ಬಂಧನದ ಆದೇಶಕ್ಕೆ ಹೈಕೋರ್ಟ್ ತಡೆ, ಬಂಧನವಾದ ಕೆಲ ಗಂಟೆಗಳಲ್ಲೇ ಬಿಡುಗಡೆಗೆ ಆದೇಶ

ಬೆಂಗಳೂರು : ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್‌ ಹೊರಡಿಸಿದ್ದ ವಿಶೇಷ ನ್ಯಾಯಾಲಯದ ಆದೇಶಕ್ಕೆ ಸೋಮವಾರ ಸಂಜೆ ಕರ್ನಾಟಕ ಹೈಕೋರ್ಟ್‌ ಸಂಜೆ ತಡೆ ನೀಡಿದ್ದು, ಆರೋಪಿ ಶರಣರನ್ನು ಬಿಡುಗಡೆ ಮಾಡುವಂತೆ ಚಿತ್ರದುರ್ಗ ಜಿಲ್ಲಾ ಅಧೀಕ್ಷಕರಿಗೆ ನಿರ್ದೇಶಿಸಿದೆ.
ವಿಶೇಷ ನ್ಯಾಯಾಲಯದ ಆದೇಶದಂತೆ ಬಂಧಿಸಿ ಚಿತ್ರದುರ್ಗದ ಜಿಲ್ಲಾ ಕಾರಾಗೃಹದಲ್ಲಿ ಇಟ್ಟಿರುವ ಆರೋಪಿ ಮುರುಘಾ ಶರಣರನ್ನು ಬಿಡುಗಡೆ ಮಾಡುವ ಸಂಬಂಧದ ಆದೇಶವನ್ನು ಇಮೇಲ್‌ ಮೂಲಕ ಜೈಲು ಅಧೀಕ್ಷಕರಿಗೆ ಕಳುಹಿಸುವಂತೆ ನ್ಯಾಯಮೂರ್ತಿ ಸೂರಜ ಗೋವಿಂದರಾಜ ಅವರಿದ್ದ ಏಕಸದಸ್ಯ ಪೀಠವು ಹೈಕೋರ್ಟ್‌ನ ನ್ಯಾಯಾಂಗ ರಿಜಿಸ್ಟ್ರಾರ್‌ ಜನರಲ್‌ಗೆ ನಿರ್ದೇಶಿಸಿದೆ.

“ಪೋಕ್ಸೊ ಮೊದಲ ಪ್ರಕರಣದಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು ಆರೋಪಿಗೆ ಜಾಮೀನು ಮಂಜೂರು ಮಾಡುವಾಗ ಚಿತ್ರದುರ್ಗಕ್ಕೆ ಆರೋಪಿ ಪ್ರವೇಶಿಸಬಾರದು. ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಬೇಕು ಎಂಬ ಷರತ್ತು ವಿಧಿಸಿದೆ. ಈ ಆದೇಶವನ್ನು ಉಲ್ಲಂಘಿಸಿ ವಿಚಾರಣಾಧೀನ ನ್ಯಾಯಾಲಯಕ್ಕೆ ವಿಶೇಷ ಸರ್ಕಾರಿ ಅಭಿಯೋಜಕರು ಮೆಮೊ ಸಲ್ಲಿಸಿದ್ದು, ಇದನ್ನು ವಿಶೇಷ ನ್ಯಾಯಾಲಯ ಪರಿಗಣಿಸಿದೆ. ಜಾಮೀನು ಮಂಜೂರು ಮಾಡುವಾಗ ಹೈಕೋರ್ಟ್‌ನ ಏಕಸದಸ್ಯ ಪೀಠಗಳು ಪ್ರತ್ಯೇಕ ಪ್ರಕರಣಗಳಲ್ಲಿ ಮಾಡಿರುವ ಆದೇಶವನ್ನು ವಿಶೇಷ ನ್ಯಾಯಾಲಯ ಪಾಲಿಸಬೇಕು” ಎಂದು ಪೀಠ ಹೇಳಿದೆ.

ಹೈಕೋರ್ಟ್‌ ಒಮ್ಮೆ ಚಿತ್ರದುರ್ಗ ಪ್ರವೇಶಿಸಬಾರದು ಎಂದು ಆರೋಪಿಗೆ ನಿರ್ದೇಶಿಸಿದ ಮೇಲೆ ಚಿತ್ರದುರ್ಗದಲ್ಲಿ ನಡೆಯುವ ಎಲ್ಲಾ ಪ್ರಕ್ರಿಯೆಗಳಿಗೂ ಅದು ಅನ್ವಯಿಸುತ್ತದೆ. ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾಗಲು ಹೈಕೋರ್ಟ್‌ ನಿರ್ದೇಶಿಸಿದೆ. ವಿಶೇಷ ನ್ಯಾಯಾಲಯದಲ್ಲಿ ಎಸ್‌ಪಿಪಿ ತೆಗೆದುಕೊಂಡಿರುವ ಕ್ರಮ ಮತ್ತು ಆನಂತರ ಚಿತ್ರದುರ್ಗದ ವಿಶೇಷ ನ್ಯಾಯಾಲಯ ಮಾಡಿರುವ ಆದೇಶವು ಹೈಕೋರ್ಟ್‌ ಆದೇಶಕ್ಕೆ ವಿರುದ್ಧವಾಗಿದೆ. ಹೀಗಾಗಿ, ನ್ಯಾಯ ಎತ್ತಿ ಹಿಡಿಯುವ ದೃಷ್ಟಿಯಿಂದ ಹೈಕೋರ್ಟ್‌ಗೆ ಸಿಆರ್‌ಪಿಸಿ ಸೆಕ್ಷನ್‌ 482 ಅಡಿ ನೀಡಲಾಗಿರುವ ಅಧಿಕಾರವನ್ನು ಚಲಾಯಿಸಬೇಕಿದೆ” ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ.

ಪ್ರಮುಖ ಸುದ್ದಿ :-   ಚಪ್ಪಲಿ ಧರಿಸಿ ಹೋಗಿದ್ದಕ್ಕೆ ಫ್ರಿಡೊ ಸಿಇಒ, ಏಥರ್ ಸಹ-ಸಂಸ್ಥಾಪಕರಿಗೆ ಪ್ರವೇಶ ನಿರಾಕರಿಸಿದ್ದ ಬೆಂಗಳೂರು ರೆಸ್ಟೋರೆಂಟ್‌

ಆರೋಪಿ ಶರಣರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಆರೋಪಿ ಶರಣರ ವಿರುದ್ಧದ ಎಫ್‌ಐಆರ್‌ ದಾಖಲಿಸುವಾಗ ಅನ್ವಯಿಸದ ಕಾಯಿದೆ ಮತ್ತು ಸೆಕ್ಷನ್‌ಗಳನ್ನು ಹಾಕಲಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್‌ನ ಏಕಸದಸ್ಯ ಪೀಠವು (ನ್ಯಾ. ಎಂ ನಾಗಪ್ರಸನ್ನ ಅವರ ಪೀಠ) ಆದೇಶ ಕಾಯ್ದಿರಿಸಿದೆ. ಅಲ್ಲದೇ, ಆರೋಪ ನಿಗದಿಯ ನಂತರದ ಪ್ರಕ್ರಿಯೆಯನ್ನು ಮುಂದೂಡುವಂತೆ ಚಿತ್ರದುರ್ಗದ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸಿದೆ. ಅಲ್ಲದೇ, ಹೈಕೋರ್ಟ್‌ನ ಇನ್ನೊಂದು ಪೀಠವು ಶರಣರಿಗೆ ಜಾಮೀನು ಮಂಜೂರು ಮಾಡುವಾಗ ಚಿತ್ರದುರ್ಗ ಪ್ರವೇಶಕ್ಕೆ ನಿರ್ಬಂಧ ವಿಧಿಸಿ, ವಿಚಾರಣೆಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾಗಬೇಕು (ನ್ಯಾ. ಶ್ರೀನಿವಾಸ್‌ ಹರೀಶ್‌ಕುಮಾರ್‌ ಅವರ ಪೀಠ) ಎಂದು ಆದೇಶಿಸಿದೆ. ಅದಾಗ್ಯೂ, ಪ್ರಾಸಿಕ್ಯೂಷನ್‌ ಎರಡನೇ ಪೋಕ್ಸೊ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಿಲ್ಲ ಎಂದು ಮೆಮೊ ಸಲ್ಲಿಸಿದ್ದಾರೆ. ಇದನ್ನು ವಿಶೇಷ ನ್ಯಾಯಾಲಯ ಪರಿಗಣಿಸಿ, ಶರಣರನ್ನು ಬಂಧಿಸುವಂತೆ ಆದೇಶ ಮಾಡಿದೆ. ಇದರ ಭಾಗವಾಗಿ ಅವರನ್ನು ಬಂಧಿಸಿ, ಚಿತ್ರದುರ್ಗದ ಜೈಲಿನಲ್ಲಿ ಇಡಲಾಗಿದೆ. ಇದು ಹೈಕೋರ್ಟ್‌ ಆದೇಶಕ್ಕೆ ವಿರುದ್ಧವಾದ ಕ್ರಮ” ಎಂದು ಆಕ್ಷೇಪಿಸಿದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಎಸ್‌ಪಿಪಿ-2 ಅವರು “ಎರಡನೇ ಪೋಕ್ಸೊ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆಯಷ್ಟೆ” ಎಂದು ಹೇಳಿದ್ದಾರೆ.
ನವೆಂಬರ್‌ 8ರಂದು ನ್ಯಾ. ಶ್ರೀನಿವಾಸ್‌ ಹರೀಶ್‌ಕುಮಾರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಮುರುಘಾ ಶರಣರಿಗೆ ಜಾಮೀನು ಮಂಜೂರು ಮಾಡಿತ್ತು. ನವೆಂಬರ್‌ 16ರಂದು ಜೈಲಿನಿಂದ ಶರಣರು ಬಿಡುಗಡೆಯಾಗಿದ್ದರು.
ಪೋಕ್ಸೊ ಎರಡನೇ ಪ್ರಕರಣದಲ್ಲಿ ಆರೋಪಿ ವಿಚಾರಣೆಗೆ ಹಾಜರಾಗಿಲ್ಲ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಅವರು ಆರೋಪಿ ಶರಣರ ವಿರುದ್ಧ ಜಾಮೀನು ರಹಿತ ವಾರೆಂಟ್‌ ಹೊರಡಿಸಿದ್ದರು.

ಪ್ರಮುಖ ಸುದ್ದಿ :-   ಶಿರೂರು ಗುಡ್ಡ ಕುಸಿತ ದುರಂತ : 10 ಮಂದಿ ಕಣ್ಮರೆ , ಅವರಲ್ಲಿ ಆರು ಮಂದಿ ಮೃತದೇಹ ಪತ್ತೆ : ಜಿಲ್ಲಾಧಿಕಾರಿ

ವಿಚಾರಣೆಯ ಸಂದರ್ಭದಲ್ಲಿ ಪೀಠವು “ಆರೋಪಿ ಚಿತ್ರದುರ್ಗಕ್ಕೆ ಪ್ರವೇಶಿಸಬಾರದು ಎಂದು ಜಾಮೀನು ಮಂಜೂರು ಆದೇಶದಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠ ಸ್ಪಷ್ಟವಾಗಿ ಹೇಳಿದೆ. ಅದಾಗ್ಯೂ ವಿಶೇಷ ಸರ್ಕಾರಿ ಅಭಿಯೋಜಕರು ವಿಚಾರಣಾಧೀನ ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿ, ಆರೋಪಿ ಶರಣರು ವಿಚಾರಣೆಗೆ ಹಾಜರಾಗಿಲ್ಲ ಎಂದು ಹೇಳಿದ್ದಾರೆ. ಇದು ಹೈಕೋರ್ಟ್‌ನ ಆದೇಶಕ್ಕೆ ವಿರುದ್ಧವಲ್ಲವೇ” ಎಂದು ಎಸ್‌ಪಿಪಿ-2ಗೆ ಪ್ರಶ್ನಿಸಿತು.
ಚಿತ್ರದುರ್ಗದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಸೋಮವಾರ ಬೆಳಗ್ಗೆ ಮುರುಘಾ ಶ್ರೀಗಳ ವಿರುದ್ಧದ ಎರಡನೇ ಪೋಕ್ಸೊ ಪ್ರಕರಣದಲ್ಲಿ ಅವರಿಗೆ ಜಾಮೀನು ರಹಿತ ವಾರಂಟ್ ಹೊರಡಿಸಿದ್ದರು. ನಂತರ ವಿರಕ್ತ ಮಠದಲ್ಲಿ ತಂಗಿದ್ದ ಮುರುಘಾ ಶ್ರೀಗಳನ್ನು ಬಂಧಿಸಿದ್ದ ಪೊಲೀಸರು ಚಿತ್ರದುರ್ಗಕ್ಕೆ ಕರೆತಂದು ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಒಪ್ಪಿಸಿತ್ತು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement