ನಿಗಮ, ಮಂಡಳಿ ನೇಮಕಾತಿ ಕಗ್ಗಂಟು, ಒಮ್ಮತ ಮೂಡಿಸಲು ಕಸರತ್ತು : ಡಿಸೆಂಬರ್‌ನಲ್ಲಿ ನೇಮಕಾತಿ…?

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮುಗಿದ ಆರು ತಿಂಗಳ ನಂತರ ಬಾಕಿ ಉಳಿದಿರುವ ಮಂಡಳಿ ಮತ್ತು ನಿಗಮಗಳಿಗೆ ನೇಮಕಾತಿ ಮಾಡುವಂತೆ ಒತ್ತಡಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಂಗಳವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಡಳಿ ಮತ್ತು ನಿಗಮಗಳ ನೇಮಕಾತಿ ಕುರಿತು 7 ಗಂಟೆಗಳ ಸುದೀರ್ಘ ಸಭೆ ನಡೆಸಿದ್ದಾರೆ. ಶಾಸಕರ ಹೆಸರುಗಳ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಒಮ್ಮತ ಮೂಡಿಸಲು ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಸಭೆ ರಾತ್ರಿ 10 ಗಂಟೆಯವರೆಗೆ ನಡೆಯಿತು. ಶಿವಕುಮಾರ್ ಮಧ್ಯರಾತ್ರಿಯವರೆಗೂ ಸುರ್ಜೇವಾಲಾ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು ಎಂದು ಹೇಳಲಾಗಿದೆ. ಸಿದ್ದರಾಮಯ್ಯ ಮೊದಲು ಶಾಸಕರನ್ನು ನಿಗಮ‌, ಮಂಡಳಿಗೆ ನೇಮಿಸುವಂತೆ ಒತ್ತಾಯಿಸುತ್ತಿದ್ದರೆ, ಶಿವಕುಮಾರ ಅವರು ಪಕ್ಷದ ಕಾರ್ಯಕರ್ತರಿಗೆ ನೇಮಕಾತಿಯಲ್ಲಿ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ನಿಗಮ ಮಂಡಳಿ ನೇಮಕಾತಿ ವಿಚಾರ ಸಂಬಂದ ಸಿದ್ದರಾಮಯ್ಯ ಹಾಗೂ ಶಿವಕುಮಾರ ನಡುವೆ ತಿಕ್ಕಾಟ ಶುರುವಾಗಿರುವ ಹಿನ್ನೆಲೆಯಲ್ಲಿ ಸುರ್ಜೇವಾಲಾ ಅವರು ಮಧ್ಯಪ್ರವೇಶಿಸಿದ್ದು, ಮಂಗಳವಾರ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅಭಿಪ್ರಾಯ ಆಲಿಸಿದ್ದಾರೆ.
ಡಿಸೆಂಬರ್ ಮೊದಲ ವಾರದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ. ಯಾಕೆಂದರೆ ಪಂಚ ರಾಜ್ಯಗಳ 5 ರಾಜ್ಯಗಳ ಚುನಾವಣೆಗಳಲ್ಲಿ ಪಕ್ಷದ ವರಿಷ್ಠರು ತೊಡಗಿಸಿಕೊಂಡಿರುವುದರಿಂದ ಅದರ ನಂತರವೇ ಇದಕ್ಕೆ ಮತ್ತಷ್ಟು ಸ್ಪಷ್ಟತೆ ಸಿಗಬಹುದಾಗಿದೆ.
ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಕೆಲವು ಹಿರಿಯ ಶಾಸಕರನ್ನು ಕರೆಸಿ ಅಭಿಪ್ರಾಯ ಕೇಳಿದ್ದಾರೆ. ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಅವರನ್ನು ಸಭೆಗೆ ಕರೆಸಲಾಯಿತು ಮತ್ತು ಪ್ರಮುಖ ನಿಗಮದ ಸ್ಥಾನದ ಆಫರ್‌ ನೀಡಲಾಯಿತು ಆದರೆ ಅವರು ಅದನ್ನು ನಿರಾಕರಿಸಿದರು ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಪೆನ್‌ಡ್ರೈವ್ ಕೇಸ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳಲು ನನಗೆ 100 ಕೋಟಿ ರೂ. ಆಫರ್ ನೀಡಿದ್ದ ಡಿ.ಕೆ.ಶಿವಕುಮಾರ : ದೇವರಾಜೇ ಗೌಡ ಸ್ಫೋಟಕ ಹೇಳಿಕೆ

20ಕ್ಕೂ ಹೆಚ್ಚು ಶಾಸಕರ ಹೆಸರು ಅಂತಿಮ…?
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಶಿವಕುಮಾರ ಜೊತೆಗೆ ಸುರ್ಜೇವಾಲಾ ಅವರು 20 ಕಾಂಗ್ರೆಸ್ ಶಾಸಕರ ಹೆಸರನ್ನು ಅಂತಿಮಗೊಳಿಸಿದ್ದಾರೆ ಮತ್ತು ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗಿದೆ. ಆದರೆ ಯಾವುದೂ ಖಚಿತತೆಯಿಲ್ಲ. ಸಚಿವ ಸಂಪುಟದಿಂದ ವಂಚಿತರಾಗಿರುವ ಹಿರಿಯ ಶಾಸಕರಿಗೆ ಮಂಡಳಿ ಮತ್ತು ನಿಗಮಗಳಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದೂ ಹೇಳಲಾಗುತ್ತಿದೆ. ಆದರೆ 5 ರಾಜ್ಯಗಳ ಚುನಾವಣೆಗಳಲ್ಲಿ ಚುನಾವಣೆ ಮುಗಿದ ನಂತರ ಪಕ್ಷದ ವರಿಷ್ಠರು ಈ ಬಗ್ಗೆ ಗಮನಹರಿಸುತ್ತಾರೆ ಎಂದು ಹೇಳಲಾಗುತ್ತಿದೆ. ಅಷ್ಟರೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಶಿವಕುಮಾರ ಅವರು ತಮ್ಮ ತಮ್ಮ ಬೆಂಬಲಿತ ಶಾಸಕರು ಹಾಗೂ ಪಕ್ಷದ ನಾಯಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದಿರುವುದರಿಂದ ಈ ಬಗ್ಗೆ ಹೈಕಮಾಂಡ್‌ ಪರಾಮರ್ಶೆ ನಡೆಸಿಯೇ ಅಧಿಕೃತ ಮುದ್ರೆ ಒತ್ತುವ ಅನಿವಾರ್ಯತೆ ಇದೆ.

ಡಿಸೆಂಬರ್‌ನಲ್ಲಿ ನೇಮಕಾತಿ ಸಾಧ್ಯತೆ
ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಾಸಗಿ ಹೋಟೆಲ್ ನಿಂದ ನಿರ್ಗಮಿಸಿದ್ದಾರೆ. ಶಿವಕುಮಾರ ಸಭೆಯನ್ನು ಮುಂದುವರಿಸಿ ಮಧ್ಯರಾತ್ರಿಯ ನಂತರ ತೆರಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ ಕಾಂಗ್ರೆಸ್ ಹೈಕಮಾಂಡ್‌ಗೆ ಪಟ್ಟಿ ಕಳುಹಿಸಲಾಗುತ್ತದೆ ಎಂದು ಹೇಳಿದ್ದಾರೆ.
“ಮಂಡಳಿಗಳು ಮತ್ತು ನಿಗಮಗಳಿಗೆ ನೇಮಕಾತಿಗಳ ಕುರಿತು ಚರ್ಚೆಗಳು ನಡೆದವು. ಬೆಂಗಳೂರು ಮಾತ್ರವಲ್ಲದೆ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಶಾಸಕರ ಬಗ್ಗೆಯೂ ಚರ್ಚಿಸಿದ್ದೇವೆ. ಕೆಲ ಶಾಸಕರ ಹೆಸರು ಚರ್ಚೆಯಾಗಿದೆ. ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ನಮ್ಮ ನಾಯಕರು ನವೆಂಬರ್ 28 ರಂದು ಮತ್ತೆ ಬರುತ್ತಾರೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಇನ್ಮುಂದೆ ಎಸ್ ​ಎಸ್ಎ ಲ್ ​ಸಿಗೆ ಗ್ರೇಸ್ ಮಾರ್ಕ್ಸ್ ರದ್ದು ಮಾಡಲು ಸಿಎಂ ಸಿದ್ದರಾಮಯ್ಯ ಸೂಚನೆ

 

 

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement