ಖ್ಯಾತ ಕನ್ನಡ-ತುಳು ಸಾಹಿತಿ, ಜಾನಪದ-ಯಕ್ಷಗಾನ ವಿದ್ವಾಂಸ ಪ್ರೊ. ‌ಅಮೃತ ಸೋಮೇಶ್ವರ ಇನ್ನಿಲ್ಲ

ಮಂಗಳೂರು : ಕನ್ನಡದ ಖ್ಯಾತ ಸಾಹಿತಿ, ಜಾನಪದ ವಿದ್ವಾಂಸ ಹಾಗೂ ಯಕ್ಷಗಾನ ಪ್ರಸಂಗ ಕರ್ತೃ ಪ್ರೊ.ಅಮೃತ ಸೋಮೇಶ್ವರ (89) ಅವರು ಶನಿವಾರ (ಜನವರಿ 6) ಬೆಳಿಗ್ಗೆ ನಿಧನರಾದರು.
ಅವರು ವಯೋಸಹಜವಾಗಿ ಶನಿವಾರ ಬೆಳಿಗ್ಗೆ ತಮ್ಮ ಸ್ವಗೃಹ ಸೋಮೇಶ್ವರದ ‘ಒಲುಮೆ’ಯಲ್ಲಿ ನಿಧನರಾದರು. ಅಮೃತ ಸೋಮೇಶ್ವರ ಅವರಿಗೆ ಪತ್ನಿ ನರ್ಮದಾ, ಮಕ್ಕಳಾದ ಚೇತನ ಸೋಮೇಶ್ವರ, ಜೀವನ ಸೋಮೇಶ್ವರ ಇದ್ದಾರೆ. ಸೋಮೇಶ್ವರ ಪುರಸಭೆ ಕಚೇರಿ ಬಳಿಯ ಅವರ ಸ್ವಗೃಹದಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕನ್ನಡ ಹಾಗೂ ತುಳು ಸಾಹಿತಿಯಾಗಿ, ಸಂಶೋಧಕರಾಗಿ, ಜಾನಪದ ವಿದ್ವಾಂಸರಾಗಿ, ಯಕ್ಷಗಾನ ಪ್ರಸಂಗಕರ್ತರಾಗಿ, ಸಮಾಜಮುಖಿ ಚಂತನೆಯುಳ್ಳ ಸಹೃದಯಿಯಾಗಿ ಅವರು ಕರ್ನಾಟಕದ ಜನರಿಗೆ ಪರಿಚಿತರಾಗಿದ್ದರು.
ವಿಮರ್ಶಕರು, ಅತ್ಯುತ್ತಮ ಲೇಖಕರು ಹಾಗೂ ನಿಷ್ಠುರವಾದಿಯಾಗಿದ್ದ ಪ್ರೊ.ಅಮೃತ ಸೋಮೇಶ್ವರ ಅವರು ಕನ್ನಡ ಸಾಹಿತ್ಯದ ವಿವಿಧ ವಿಭಾಗಗಳಾದ ಕಥೆ, ಸಾಹಿತ್ಯ, ಕವನ, ಸಣ್ಣ ಕಥೆ, ಕಾದಂಬರಿ, ನಾಟಕ, ವ್ಯಕ್ತಿ ಚಿತ್ರಣ, ಜನಾಂಗ‌ದ ಪರಿಚಯ, ರೇಡಿಯೋ ರೂಪಕ, ನೃತ್ಯರೂಪಕ, ಸ್ವತಂತ್ರ ಗಾದೆ, ಶಬ್ಧ ಕೋಶ, ಸಂಸ್ಕೃತಿ ಚಿಂತನ, ಕುಚೋದ್ಯ ಕೋಶ, ಅಂಕಣ ಲೇಖನ, ಯಕ್ಷಗಾನ ವಿಚಾರ ವಿಮರ್ಶೆ, ಸಂಪಾದನೆ ಸೇರಿದಂತೆ ಹಲವು ಕೃತಿಗಳು ಸೇರಿದಂತೆ ನೂರಕ್ಕೂ ಹೆಚ್ಚಿನ‌ ಕೃತಿಗಳನ್ನು ಹೊರತಂದಿದ್ದಾರೆ.

ಅಮೃತ ಸೋಮೇಶ್ವರ ಅವರು 1935ರ ಸೆಪ್ಟಂಬರ್ 27ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕೋಟೆಕಾರು ಸಮೀಪದ ಅಡ್ಯ ಎಂಬಲ್ಲಿ ಜನಿಸಿದರು. ತಂದೆ ಚಿರಿಯಂಡ ಮತ್ತು ತಾಯಿ ಅಮುಣಿ. ಮಲಯಾಳಂ ಮಾತೃಭಾಷೆಯಾದರೂ ಕನ್ನಡ ಹಾಗೂ ತುಳುವಿನಲ್ಲಿ ಸಾಹಿತ್ಯ ಕೃಷಿ ಮಾಡಿದರು.
ಅಮೃತ ಸೋಮೇಶ್ವರ ಅವರ ಪ್ರಾರಂಭಿಕ ಶಿಕ್ಷಣ ಕೋಟೆಕಾರಿನ ಸ್ಟೆಲ್ಲಾ ಮೇರಿ ಕಾನ್ವೆಂಟ್‌ನಲ್ಲಿ ಹಾಗೂ ಪ್ರೌಢಶಿಕ್ಷಣ ಆನಂದಾಶ್ರಮದಲ್ಲಿ ನಡೆಯಿತು. ಮತ್ತು ಪದವಿ ಶಿಕ್ಷಣವನ್ನು ಮಂಗಳೂರಿನ ಸೇಂಟ್‌ ಅಲೋಷಿಯಸ್‌ ಕಾಲೇಜಿನಲ್ಲಿ ಮುಗಿಸಿದರು.
ಮದರಾಸು ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದ ಅಮೃತೇಶ್ವರರು ತಾವು ಓದಿದ ಅಲೋಷಿಯಸ್‌ ಕಾಲೇಜಿನಲ್ಲಿಯೇ ಅಧ್ಯಾಪಕರಾಗಿ ಸೇರಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದ ನಂತರ ಅವರು ಪುತ್ತೂರಿನ ಸೇಂಟ್‌ ಫಿಲೋಮಿನ ಕಾಲೇಜಿನಲ್ಲಿ ಉಪನ್ಯಾಸಕರಾದರು. ನಂತರ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡು 1993ರಲ್ಲಿ ವೃತ್ತಿಯಿಂದ ನಿವೃತ್ತರಾದರು. ನಿವೃತ್ತಿಯ ನಂತರ ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಮಾಹಿತಿ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕೆಲಕಾಲ ಕಾರ್ಯ ನಿರ್ವಹಿಸಿದರು.

ಪ್ರಮುಖ ಸುದ್ದಿ :-   ಪ್ರಜ್ವಲ್‌ ರೇವಣ್ಣ ಪ್ರಕರಣ : ದೇವೇಗೌಡ, ಎಚ್‌ಡಿಕೆಯನ್ನು ತಪ್ಪಾಗಿ ಬಿಂಬಿಸಿ ಸುದ್ದಿ ಪ್ರಸಾರ ಮಾಡದಂತೆ 89 ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾದೇಶ

ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡಿದ್ದ ಅವರು ಕಥೆ , ಕವನಗಳ ಜೊತೆಗೆ ಯಕ್ಷಗಾನ ಪ್ರಸಂಗವೊಂದನ್ನೂ ರಚಿಸಿದ್ದರು. ಅಮರ ಶಿಲ್ಪಿ ವೀರ ಕಲ್ಕುಡ, ಘೋರ ಮಾರಕ, ಸಹಸ್ರ ಕವಚ ಮೋಕ್ಷ, ಕಾಯಕಲ್ಪ, ಅಮರ ವಾಹಿನಿ, ತ್ರಿಪುರ ಮಥನ, ಆದಿಕವಿ ವಾಲ್ಮೀಕಿ, ಚಾಲುಕ್ಯ ಚಕ್ರೇಶ್ವರ ಮುಂತಾದ ಮೂವತ್ತಕ್ಕೂ ಹೆಚ್ಚು ಯಕ್ಷಗಾನ ಕೃತಿಗಳನ್ನು ರಚಿಸಿದ್ದಾರೆ. ‘ಯಕ್ಷಗಾನ ಕೃತಿ ಸಂಪುಟ’ ಜಾನಪದ ಯಕ್ಷಗಾನ ಸಂಶೋಧನೆಯ ಫಲವಾಗಿ ಮೂಡಿಬಂದ ಅವರ ಬಹು ಮೌಲಿಕ ಕೃತಿಯಾಗಿದೆ.
ದ್ಯಾರ್ಥಿ ದೆಸೆಯಲ್ಲಿದ್ದಾಗಲೇ ‘ಎಲೆಗಿಳಿ’ (1957) ಎಂಬ ಕಥಾ ಸಂಕಲವನ್ನು ಹೊರ ತಂದಿದ್ದರು. ನಂತರ ಕೆಂಪು ನೆನಪು, ರುದ್ರಶಿಲೆ ಸಾಕ್ಷಿ, ಮಾನವತೆ ಗೆದ್ದಾಗ ಮುಂತಾದವುಗಳು. ವನಮಾಲೆ, ಭ್ರಮಣ, ಉಪ್ಪುಗಳ್ಳಿ, ಜ್ಯೋತಿದರ್ಶನವಾಯಿತು ಮುಂತಾದವು ಕವನ ಸಂಕಲನಗಳು ಹೊರಬಂದವು. ತೀರದ ತೆರೆ (ಕಾದಂಬರಿ), ಕೋಟಿಚನ್ನಯ್ಯ, ವಿಶ್ವರೂಪ (ನಾಟಕ), ನಂದಳಿಕೆ ನಂದಾದೀಪ ಹಾಗೂ ರಾಜರತ್ನಂ ಕವಿತೆಗಳು (ವಿಮರ್ಶಾಕೃತಿಗಳು).

ಅಮೃತ ಸೋಮೇಶ್ವರರು ತುಳುವಿನಲ್ಲಿಯೂ ಕೃತಿ ರಚಿಸಿದ್ದು ತಂಬಿಲ, ರಂಗೀತ (ತುಳು ಕವನ ಸಂಕಲನಗಳು); ತುಳು ಪಾಡ್ದನ ಕತೆಗಳು, ಅವಿಲು (ತುಳು ಜಾನಪದ ಕತೆಗಳು); ಅಪಾರ್ಥಿನಿ ಎಂಬ ಕುಚೋದ್ಯದ ಶಬ್ದಕೋಶವಲ್ಲದೆ ಫಿನ್ಲೆಂಡಿನ ಜಾನಪದ ಮಹಾಕಾವ್ಯವಾದ ‘ಕಾಲೇವಾಲ’ ವನ್ನೂ ತುಳುಭಾಷೆಗೆ ಅನುವಾದಿಸಿದ್ದಾರೆ. ಇವಲ್ಲದೆ ತುಳು ಭಾಷೆಯಲ್ಲಿ ಹಲವಾರು ರೇಡಿಯೋ ನಾಟಕಗಳು, ನೃತ್ಯ ರೂಪಕಗಳು, ಗಾದೆಗಳನ್ನೂ ರಚಿಸಿದ್ದಾರೆ. ಚಂದ್ರಶೇಖರ ಕಂಬಾರರ ಜೋಕುಮಾರ ಸ್ವಾಮಿ ನಾಟಕವನ್ನೂ ತುಳು ಭಾಷೆಗೆ ಅನುವಾದಿಸಿದ್ದು ಅದು ರಂಗದ ಮೇಲೂ ಪ್ರದರ್ಶನಗೊಂಡಿದೆ. ಸುಮಾರು 50ಕ್ಕೂ ಹೆಚ್ಚು ಭಕ್ತಿಗೀತೆ, ಭಾವಗೀತೆಗಳ ಧ್ವನಿಸುರುಳಿಗಳನ್ನೂ ತುಳು ಹಾಗೂ ಕನ್ನಡ ಭಾಷೆಗಳಲ್ಲಿ ತಂದಿದ್ದಾರೆ. ಯಕ್ಷಗಾನ ಕಲಾ ತಂಡವನ್ನು ಬಹರೈನ್‌, ದುಬಾಯ್‌ ದೇಶಗಳಿಗೆ ಕೊಂಡೊಯ್ದು ಯಕ್ಷಗಾನದ ಬಗ್ಗೆ ಅಭಿರುಚಿ ಬೆಳೆಯುವಂತೆ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಮೇ 10ರ ವರೆಗೆ ಮಳೆ ಮುನ್ಸೂಚನೆ

ಪ್ರಶಸ್ತಿ-ಪುರಸ್ಕಾರಗಳು…
2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಗೌರವಕ್ಕೆ ಭಾಜನರಾಗಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ‌ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ 2020ನೇ ನೇ ಸಾಲಿನ ‘ಗೌರವಶ್ರೀ’ ಪ್ರಶಸ್ತಿ, ಮಣಿಪಾಲ ಅಕಾಡೆಮಿಯ ಮಾಹೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
‘ತುಳುನಾಡ ಕಲ್ಕುಡೆ’ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಯಕ್ಷಗಾನ ಕೃತಿ ಸಂಪುಟ’ಕ್ಕೆ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ, ‘ತುಳುಪಾಡ್ದನ ಕಥೆಗಳು’ ಕೃತಿಗೆ ಕೇಂದ್ರ ವಿದ್ಯಾ ಇಲಾಖೆಯ ಪ್ರಶಸ್ತಿ, ‘ತುಳುಪಾಡ್ದನ ಸಂಪುಟ’ಕ್ಕೆ ಕು.ಶಿ. ಹರಿವಾಸಭಟ್ಟ ಜಾನಪದ ಪ್ರಶಸ್ತಿ, ‘ಅಪಾರ್ಥಿನಿ’ ಕುಚೋದ್ಯ ಶಬ್ದ ಕೋಶಕ್ಕೆ ಆರ್ಯಭಟ ಪ್ರಶಸ್ತಿ, ಯಕ್ಷಗಾನದ ಕೊಡುಗೆಗಾಗಿ ‘ಪಾರ್ತಿಸುಬ್ಬ ಪ್ರಶಸ್ತಿ’ ಸಂದಿದೆ. ಆಕಾಶವಾಣಿ ಬಹುಮಾನ, ತುಳು ಅಕಾಡಮಿ ಪ್ರಶಸ್ತಿ, ಕುಕ್ಕಿಲ ಪ್ರಶಸ್ತಿ, ನುಡಿಸಿರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮುಲ್ಕಿಯಲ್ಲಿ ನಡೆದ ಅಖಿಲ ಭಾರತ ತುಳುಸಮ್ಮೇಳನದ ಅಧ್ಯಕ್ಷತೆ, ಮುಂಬೈನಲ್ಲಿ ನಡೆದ ಯಕ್ಷಗಾನ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಸಂದಿವೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement