ಬಿಹಾರದಲ್ಲಿ ರಾಜಕೀಯ ಬೆಳವಣಿಗೆ :ಸಿಎಂ ಸ್ಥಾನಕ್ಕೆ ನಿತೀಶಕುಮಾರ ರಾಜೀನಾಮೆ, ಇಂದು ಸಂಜೆ ಮತ್ತೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ..!

ಪಾಟ್ನಾ : ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶಕುಮಾರ ಭಾನುವಾರ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಳೆದ ಎರಡ್ಮೂರು ದಿನಗಳಿಂದ ಬಿಹಾರ ರಾಜಕಾರಣದಲ್ಲಿನ ಎಲ್ಲಾ ವದಂತಿಗಳಿಗೆ ತೆರೆಬಿದ್ದಿದೆ. ಅವರು ಇಂದು, ಭಾನುವಾರ ಸಂಜೆ ಅಥವಾ ನಾಳೆ ಎನ್ ಡಿಎ ಜೊತೆಗೆ ಹೊಸ ಸರ್ಕಾರ ರಚಿಸುವ ಸಾಧ್ಯತೆಯಿದೆ.
ಇಂದು, ಭಾನುವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಜೆಡಿಯು ಶಾಸಕರ ಸಭೆ ನಡೆಸಿದ ಬಳಿಕ ಹಿರಿಯ ಸಚಿವ ಬಿಜೇಂದ್ರ ಯಾದವ್ ಅವರೊಂದಿಗೆ ರಾಜಭವನಕ್ಕೆ ತೆರಳಿದ ನಿತೀಶಕುಮಾರ ಅವರು ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ರಾಜ್ಯಪಾಲರು ಅವರ ರಾಜೀನಾಮೆ ಅಂಗೀಕರಿಸಿದ್ದು, ಹೊಸ ಸರ್ಕಾರ ರಚನೆಯಾಗುವವರೆಗೂ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಸೂಚಿಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶಕುಮಾರ, ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜ್ಯದಲ್ಲಿ ಸರ್ಕಾರವನ್ನು ವಿಸರ್ಜಿಸುವಂತೆ ರಾಜ್ಯಪಾಲರಿಗೂ ಹೇಳಿರುವುದಾಗಿ ತಿಳಿಸಿದರು.
ಬಿಹಾರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆ ಪಾಟ್ನಾದ ಬಿಜೆಪಿ ಕಚೇರಿಯಲ್ಲಿ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದ್ದು, ಕೇಂದ್ರ ಸಚಿವ ನಿತ್ಯಾನಂದ ರಾಯ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ ತಾವ್ಡೆ, ಸಂಸದ ರವಿಶಂಕರಪ್ರಸಾದ ಸಭೆಗೆ ಆಗಮಿಸಿದ್ದಾರೆ.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಆರೋಪ: ಜನಸಾಮಾನ್ಯರಿಗೆ ರಾಜಭವನದ ಸಿಸಿಟಿವಿ ದೃಶ್ಯಾವಳಿ ತೋರಿಸಿದ ಪಶ್ಚಿಮ ಬಂಗಾಳದ ರಾಜ್ಯಪಾಲ

ಹೊಸ ಸರ್ಕಾರದಲ್ಲಿ ನಿತೀಶಕುಮಾರ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ. ಇವರ ಜೊತೆಗೆ ಇಬ್ಬರು ಬಿಜೆಪಿ ನಾಯಕರು ಉಪಮುಖ್ಯಮಂತ್ರಿಯಾಗಲಿದ್ದಾರೆ. ಉಪ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನಲಾಗಿದೆ. ಸುಶೀಲಕುಮಾರ ಮೋದಿ ಮತ್ತು ರೇಣುದೇವಿ ಉಪಮುಖ್ಯಮಂತ್ರಿಯಾಗಬಹುದು ಎಂದು ಮೂಲಗಳು ಹೇಳಿವೆ.
ಇಂದು ಸಂಜೆ 4 ಗಂಟೆಗೆ ನೂತನ ಸರ್ಕಾರದಲ್ಲಿ ನಿತೀಶಕುಮಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದ್ದು, ಅವರ ಜೊತೆ 6 ರಿಂದ 8 ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಮೂಲಗಳು ತಿಳಿಸಿವೆ.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement