
ನವದೆಹಲಿ: ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, ಪಂಜಾಬ್‌ನ ಎಲ್ಲಾ 13 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವುದಾಗಿ ಆಮ್ ಆದ್ಮಿ ಪಕ್ಷ ಹೇಳಿದೆ ಹಾಗೂ ಪಂಜಾಬಿನಲ್ಲಿ ಕಾಂಗ್ರೆಸ್‌ನೊಂದಿಗೆ ಯಾವುದೇ ಮೈತ್ರಿ ಇಲ್ಲ ಎಂದು ಸೂಚಿಸಿದೆ.
ಎಎಪಿ ಪಂಜಾಬ್ ರಾಜ್ಯದ ಎಲ್ಲಾ 13 ಲೋಕಸಭಾ ಸ್ಥಾನಗಳು ಮತ್ತು ಚಂಡೀಗಢದಲ್ಲಿ 1 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂಬ ಘೋಷಣೆಯನ್ನು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಮಾಡಿದ್ದಾರೆ. ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ವಿಧಾನಸಭೆ ಚುನಾವಣೆಯಲ್ಲಿ ಎಎಪಿ ರಾಜ್ಯದ 117 ಸ್ಥಾನಗಳ ಪೈಕಿ 92 ಸ್ಥಾನಗಳನ್ನು ಗೆದ್ದಿತ್ತು.
ದೆಹಲಿ ಮುಖ್ಯಮಂತ್ರಿಯವರ ಹೇಳಿಕೆಯು ವಿರೋಧ ಪಕ್ಷದ ಗುಂಪಿನಲ್ಲಿ ಗೊಂದಲವನ್ನು ಹೆಚ್ಚಿಸಲಿದೆ, ಈಗಾಗಲೇ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಪಕ್ಷವು ಪಶ್ಚಿಮ ಬಂಗಾಳದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂಬ ಘೋಷಿಸಿದೆ.

ಇಂಡಿಯಾ ಮೈತ್ರಿಕೂಟದ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾದ ನಿತೀಶಕುಮಾರ ಅವರ ಜನತಾದಳ (ಯುನೈಟೆಡ್) ಕಳೆದ ತಿಂಗಳು ಇಂಡಿಯಾ ಮೈತ್ರಿಕೂಟದಿಂದ ಹೊರಬಿದ್ದು, ಪುನಃ ಬಿಜೆಪಿ ನೇತೃತ್ವದ ಎನ್‌ಡಿಎ ಸೇರಿ ಬಿಹಾರದಲ್ಲಿ ಸರ್ಕಾರ ರಚಿಸಿದೆ.
ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಒಪ್ಪಂದದ ಲಕ್ಷಣಗಳು ಕಂಡುಬಂದರೂ ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಇನ್ನೂ ಅಸ್ಪಷ್ಟವಾಗಿದೆ, ಇದೇವೇಳೆ ಇಂಡಿಯಾ ಮೈತ್ರಿಕೂಟದ ಮತ್ತೊಂದು ಅಂಗಪಕ್ಷವಾಗಿರುವ ಜಯಂತ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳವು ಎನ್‌ಡಿಎ ಜೊತೆ ಕೈಜೋಡಿಸುವ ಬಲವಾದ ಊಹಾಪೋಹಗಳಿವೆ. ಸ್ಥಾನ ಹೊಂದಾಣಿಕಯ ಮಾತುಕತೆಗಳು ಸಹ ಮುಗಿದಿದೆ ಎಂಬ ವರದಿಗಳಿವೆ.


ನಿಮ್ಮ ಕಾಮೆಂಟ್ ಬರೆಯಿರಿ