
ನವದೆಹಲಿ : ರೈತರಿಂದ ನಡೆಯುತ್ತಿರುವ ‘ದೆಹಲಿ ಚಲೋ’ ಪ್ರತಿಭಟನೆಯು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ರೈತರು ಅಶ್ರುವಾಯು ಸಿಡಿಸಲು ಸರ್ಕಾರ ನಿಯೋಜನೆ ಮಾಡಿರುವ ಡ್ರೋನ್‌ಗಳಿಗೆ ಠಕ್ಕರ್ ಕೊಡಲು ಗಾಳಿಪಟಗಳನ್ನು ಹಾರಿಸಿದ್ದಾರೆ…
ವಿಶೇಷವಾಗಿ ಪಂಜಾಬ್‌ನ ರೈತರು, ಕನಿಷ್ಠ ಬೆಂಬಲ ಬೆಲೆ (MSP) ಮತ್ತು ಇತರ ಕೃಷಿ ಸುಧಾರಣೆಗಳಿಗೆ ಕಾನೂನು ಖಾತರಿ ನೀಡಬೇಕಂದು ಒತ್ತಾಯಿಸಿ ದೆಹಲಿಯತ್ತ ಮೆರವಣಿಗೆ ಹೊರಟಿದ್ದಾರೆ. ಅಂಬಾಲಾ ಬಳಿಯ ಶಂಭು ಗಡಿಯಲ್ಲಿ ಭದ್ರತಾ ಸಿಬ್ಬಂದಿ ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತು.
ಡ್ರೋನ್‌ಗಳಿಗೆ ಠಕ್ಕರ್ ಕೊಡಲು ರೈತರು ಗಾಳಿಪಟ ಹಾರಿಸುವ ತಂತ್ರ ಬಳಸುತ್ತಿದ್ದು, ಈ ತಂತ್ರವು ಡ್ರೋನ್‌ಗಳ ರೋಟಾರ್‌ಗಳಿಗೆ ಸಿಕ್ಕಿಹಾಕಿಕೊಳ್ಳಲು ಗಾಳಿಪಟಗಳಿಗೆ ಉದ್ದನೆಯ ತಂತಿಗಳನ್ನು ಬಳಸಲಾಗುತ್ತಿದೆ. ಡ್ರೋನ್‌ಗಳಿಗೆ ತಂತಿ ಸಿಲುಕಿದರೆ ಅವುಗಳ ಪತನವಾಗಬಹುದು. ಅವುಗಳು ಕ್ರ್ಯಾಶ್‌ಗೆ ಕಾರಣವಾಗಬಹುದು.

ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಅವರು ಇಂದು, ಗುರುವಾರ ಬೆಳಿಗ್ಗೆ ರೈತರಲ್ಲಿ ಮತ್ತೆ ಮನವಿ ಮಾಡಿದ್ದು, ರಚನಾತ್ಮಕ ಸಂವಾದದ ಬಗ್ಗೆ ಒತ್ತಿ ಹೇಳಿದ್ದಾರೆ ಮತ್ತು ಜನಸಾಮಾನ್ಯರ ಜೀವನಕ್ಕೆ ಅಡ್ಡಿಪಡಿಸಬೇಡಿ ಎಂದು ಮನವಿ ಮಾಡಿದ್ದಾರೆ.
ರೈತರು ಶಂಭು ಗಡಿಯಲ್ಲಿ ಜಮಾಯಿಸಿದ್ದು, ಹಲವು ಹಂತದ ಬ್ಯಾರಿಕೇಡ್‌ಗಳನ್ನು ಭೇದಿಸಲು ಯುವ ರೈತರು ತಮ್ಮ ಟ್ರ್ಯಾಕ್ಟರ್‌ಗಳನ್ನು ಸಿದ್ಧಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಪ್ರತಿಭಟನಾಕಾರರನ್ನು ಚದುರಿಸಲು ಹರಿಯಾಣ ಭದ್ರತಾ ಸಿಬ್ಬಂದಿ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದರಿಂದ ಘರ್ಷಣೆ ತೀವ್ರಗೊಂಡಿತು. ಅಶ್ರುವಾಯುವಿನ ಪ್ರಭಾವವನ್ನು ಕಡಿಮೆ ಮಾಡಲು ರೈತರು ನೀರಿನ ಬಾಟಲಿಗಳು, ಒದ್ದೆಯಾದ ಬಟ್ಟೆಗಳು ಮತ್ತು ರಕ್ಷಣಾತ್ಮಕ ಗೇರ್‌ಗಳೊಂದಿಗೆ ತಮ್ಮನ್ನು ತಾವು ಸಜ್ಜುಗೊಳಿಸಿಕೊಂಡರು.
ಪ್ರಮುಖ ರೈತ ನಾಯಕ ಸರ್ವಾನ್ ಸಿಂಗ್ ಪಂಧೇರ್ ಅವರು, ಸರ್ಕಾರದ ನೀತಿ-ವಿಧಾನವನ್ನು ಟೀಕಿಸಿದ್ದಾರೆ, ಸರ್ಕಾರವು ರೈತರ ಬೇಡಿಕೆಗಳಿಗಿಂತ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿದರು. ಇದೆಲ್ಲವನ್ನೂ ನಿಲ್ಲಿಸಲು ಮತ್ತು ಸಕಾರಾತ್ಮಕ ವಾತಾವರಣ ಮೂಡಿಸಲು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ. ನಾವು ನಿನ್ನೆಯೂ ಮಾತುಕತೆಗೆ ಸಿದ್ಧರಿದ್ದೆವು ಮತ್ತು ನಾವು ಇಂದಿಗೂ ಅದಕ್ಕೆ ಸಿದ್ಧರಿದ್ದೇವೆ ಎಂದು ಪಂಧರ್ ಹೇಳಿದರು.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸುವ ಕಾನೂನನ್ನು ಜಾರಿಗೊಳಿಸುವುದು ಈ ಬೇಡಿಕೆಗಳಲ್ಲಿ ಪ್ರಮುಖವಾಗಿದೆ. ವಿವಾದದ ಇತರ ಪ್ರಮುಖ ಅಂಶಗಳೆಂದರೆ ವಿದ್ಯುತ್ ಕಾಯ್ದೆ 2020 ರ ರದ್ದತಿ, ಲಖಿಂಪುರ ಖೇರಿಯಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ಮತ್ತು ರೈತರ ಚಳವಳಿಯಲ್ಲಿ ತೊಡಗಿರುವವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವುದು ಸೇರಿದೆ.


ನಿಮ್ಮ ಕಾಮೆಂಟ್ ಬರೆಯಿರಿ