ಮಹಾರಾಷ್ಟ್ರದ ಮಾಜಿ ಸಿಎಂ ಮನೋಹರ ಜೋಶಿ ನಿಧನ

ಮುಂಬೈ : ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭೆ ಮಾಜಿ ಸ್ಪೀಕರ್‌ ಮನೋಹರ ಜೋಶಿ ಅವರು ಮುಂಬೈ ಆಸ್ಪತ್ರೆಯಲ್ಲಿ ಇಂದು, ಶುಕ್ರವಾರ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಜೋಶಿ ಅವರ ಅಂತ್ಯಕ್ರಿಯೆ ಮುಂಬೈನ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ಇಂದು, ಶುಕ್ರವಾರ ನಡೆಯಲಿದೆ.
ಜೋಶಿ ಅವರನ್ನು ಹೃದಯಾಘಾತದ ಕಾರಣಕ್ಕೆ ಎರಡು ದಿನಗಳ ಹಿಂದೆ ಬುಧವಾರ ಮುಂಬೈನ ಪಿಡಿ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರು 1995 ರಿಂದ 1999ರ ವರೆಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು ಮತ್ತು ಅವಿಭಜಿತ ಶಿವಸೇನೆಯಿಂದ ರಾಜ್ಯದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ನಾಯಕರಾಗಿದ್ದರು.ಮನೋಹರ ಜೋಶಿ ಅವರು ಸಂಸತ್ ಸದಸ್ಯರಾಗಿಯೂ ಚುನಾಯಿತರಾಗಿದ್ದರು ಮತ್ತು 2002 ರಿಂದ 2004 ರವರೆಗೆ ಲೋಕಸಭಾ ಸ್ಪೀಕರ್ ಆಗಿದ್ದರು.
ಡಿಸೆಂಬರ್ 2, 1937 ರಂದು ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ನಂದಿವಿಯಲ್ಲಿ ಜನಿಸಿದ ಜೋಶಿಯವರು ಮುಂಬೈನಲ್ಲಿ ಶಿಕ್ಷಣ ಪಡೆದರು. ಅವರು 75 ನೇ ವಯಸ್ಸಿನಲ್ಲಿ 2020 ರಲ್ಲಿ ನಿಧನರಾದ ಅನಘಾ ಮನೋಹರ್ ಜೋಶಿ ಅವರನ್ನು ವಿವಾಹವಾದರು. ಅವರು ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಪ್ರಮುಖ ಸುದ್ದಿ :-   ರೈತರಿಗೆ ಪಿಸ್ತೂಲ್ ತೋರಿಸಿದ ವೀಡಿಯೊ ವೈರಲ್‌ ; ವಿವಾದಿತ ಟ್ರೇನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ ತಾಯಿ ಬಂಧನ

ಮನೋಹರ ಜೋಶಿಯವರ ರಾಜಕೀಯ ಜೀವನ
ಮನೋಹರ್ ಜೋಶಿ ಅವರು ಶಿಕ್ಷಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು 1967 ರಲ್ಲಿ ರಾಜಕೀಯ ಪ್ರವೇಶಿಸಿದರು. ಅವರು 40 ವರ್ಷಗಳ ಕಾಲ ಶಿವಸೇನೆಯಲ್ಲಿ ಸಕ್ರಿಯವಾಗಿದ್ದರು. ಜೋಶಿ ಅವರು 1968-70ರ ಅವಧಿಯಲ್ಲಿ ಮುಂಬೈನಲ್ಲಿ ಮುನ್ಸಿಪಲ್ ಕೌನ್ಸಿಲರ್ ಆಗಿದ್ದರು ಮತ್ತು 1970 ರಲ್ಲಿ ಸ್ಥಾಯಿ ಸಮಿತಿ (ಮುನ್ಸಿಪಲ್ ಕಾರ್ಪೊರೇಷನ್) ಅಧ್ಯಕ್ಷರಾಗಿದ್ದರು. ಅವರು 1976 ರಿಂದ 1977 ರವರೆಗೆ ಒಂದು ವರ್ಷ ಮುಂಬೈ ಮೇಯರ್ ಆಗಿ ಸೇವೆ ಸಲ್ಲಿಸಿದರು.
ನಂತರ ಅವರು 1972ರಲ್ಲಿ ಮಹಾರಾಷ್ಟ್ರ ಲೆಜಿಸ್ಲೇಟಿವ್ ಕೌನ್ಸಿಲ್‌ಗೆ ಚುನಾಯಿತರಾದರು. ವಿಧಾನ ಪರಿಷತ್ತಿನಲ್ಲಿ ಮೂರು ಅವಧಿಗೆ ಸೇವೆ ಸಲ್ಲಿಸಿದ ನಂತರ, ಜೋಶಿ ಅವರು 1990 ರಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾಯಿತರಾದರು.
1990-91ರ ಅವಧಿಯಲ್ಲಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರು.
1999 ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಮುಂಬೈ ಉತ್ತರ-ಮಧ್ಯ ಲೋಕಸಭಾ ಕ್ಷೇತ್ರದಿಂದ ಶಿವಸೇನೆ ಟಿಕೆಟ್‌ನಲ್ಲಿ ಗೆದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement