ವೀಡಿಯೊ..| ತನ್ನ ಮರಿಯನ್ನು ಕಾಪಾಡಿದ ಅರಣ್ಯ ಸಿಬ್ಬಂದಿಗೆ ‘ಕೃತಜ್ಞತೆ’ ಸಲ್ಲಿಸಿದ ಕಾಡಾನೆ

ಚೆನ್ನೈ: ಕಾಡು ಪ್ರಾಣಿಗಳಿಗೆ ಭಾವನೆಗಳು ಇರುತ್ತವೆ ಎಂಬುದುಕ್ಕೆ ಆನೆಯ ವರ್ತನೆಯೊಂದು ಪುಷ್ಟೀಕರಿಸಿದೆ. ಆನೆ ಮರಿ ಜತೆ ಇರುವಾಗ ಬಹಳ ಅಪಾಯಕಾರಿ. ಆದರೆ, ಇಲ್ಲಿ ಕಾಡಾನೆ ತನ್ನ ಮಗುವನ್ನು ಕಾಪಾಡಿದ ವ್ಯಕ್ತಿಗೆ ಧನ್ಯವಾದ ಸಲ್ಲಿಸಿದ ವಿಶಿಷ್ಟ ಹಾಗೂ ಹೃದಯಸ್ಪರ್ಶಿ ಘಟನೆ ವೀಡಿಯೊದಲ್ಲಿ ಸೆರೆಯಾಗಿದೆ.
ಮರಿಯಾನೆ ರಕ್ಷಿಸಿ, ಅದರ ತಾಯಿ ಜತೆ ಸೇರಿಸುವ ಅಸಾಧಾರಣ ಬದ್ಧತೆ ಹಾಗೂ ಧೈರ್ಯ ಪ್ರದರ್ಶಿಸಿದ ಅರಣ್ಯ ಅಧಿಕಾರಿಗಳ ಸ್ಫೂರ್ತಿದಾಯಕ ಕಥೆಯನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಎಂಬವರು ಹಂಚಿಕೊಂಡಿದ್ದಾರೆ.
ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿಯಲ್ಲಿ ಎಂಬಲ್ಲಿ ಈ ಘಟನೆ ನಡೆದಿದ್ದು, ಕಾಡಾನೆಯ ಮರಿಯನ್ನು ರಕ್ಷಿಸುವ ಕಾರ್ಯಾಚರಣೆ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗೆ ತಾಯಿ ಆನೆ ‘ಧನ್ಯವಾದ’ ಸಲ್ಲಿಸುವ ವೀಡಿಯೊವನ್ನು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಮರಿ ಆನೆಯೊಂದು ಆಕಸ್ಮಿಕವಾಗಿ ಕಾಲುವೆಯೊಂದಕ್ಕೆ ಜಾರಿ ಬಿದ್ದಿತ್ತು. ಅದನ್ನು ಮೇಲೆತ್ತಲು ತಾಯಿ ಆನೆ ಸಾಕಷ್ಟು ಪ್ರಯತ್ನ ನಡೆಸಿದರೂ ಅದು ಸಫಲವಾಗಿರಲಿಲ್ಲ. ಕಾಲುವೆಯಲ್ಲಿನ ನೀರಿನ ಹರಿವಿನ ವೇಗ ಬಹಳ ರಭಸವಾಗಿದ್ದರಿಂದ ಅದರ ಪ್ರಯತ್ನಗಳು ಫಲ ನೀಡಿರಲಿಲ್ಲ. ಮರಿಯಾನೆಗೆ ಕಾಲುವೆಯಿಂದ ಹೊರಬರಲು ಸಾಧ್ಯವಾಗದೆ ಕಂಗಾಲಾಗಿತ್ತು.
ವಿಷಯ ಗೊತ್ತಾಗಿ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ಮುಂದಾದರು. ಅರಣ್ಯ ಸಿಬ್ಬಂದಿ ಧೈರ್ಯಶಾಲಿ ತಂಡ ಸಾಹಸಕ್ಕೆ ಇಳಿಯಿತು. ಆದರೆ ಆನೆ ಮರಿಯ ರಕ್ಷಣಾ ಕಾರ್ಯಾಚರಣೆ ಕಠಿಣ ಸವಾಲಿನ ಕೆಲಸವಾಗಿತ್ತು. ಸತತ ಪ್ರಯತ್ನದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಮರಿಯನ್ನು ಕಾಲುವೆಯಿಂದ ಹೊರಗೆ ತಂದಿದ್ದಾರೆ.

ಪ್ರಮುಖ ಸುದ್ದಿ :-   ಪವಿತ್ರಾ ಜಯರಾಮ ಸಾವಿನ ಬೆನ್ನಲ್ಲೇ ಗೆಳೆಯ-ಕಿರುತೆರೆ ನಟ ಚಂದು ಆತ್ಮಹತ್ಯೆ

ನಂತರ ಮರಿಯಾನೆ ತನ್ನ ತಾಯಿಯ ಮಡಿಲಿಗೆ ಬಂದಿದೆ. ಮರಿಯಾನೆ ಕೂಡಿಕೊಂಡ ತಾಯಿ ಆನೆ, ಅರಣ್ಯ ಇಲಾಖೆ ಸಿಬ್ಬಂದಿ ಕಡೆಗೆ ತನ್ನ ಸೊಂಡಿಲು ಎತ್ತಿ ಕೃತಜ್ಞತೆ ವ್ಯಕ್ತಪಡಿಸುವ ಹೃದಯಸ್ಪರ್ಶಿ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದ್ದು, ಅದನ್ನು ಸುಪ್ರಿಯಾ ಸಾಹು ಹಂಚಿಕೊಂಡಿದ್ದಾರೆ.
ವನ್ಯಜೀವಿಗಳ ಕುರಿತು ಆಸಕ್ತಿ ಉಳ್ಳವರು, ಸಿಬ್ಬಂದಿಯ ಶ್ರಮ ಹಾಗೂ ಆನೆಯ ಬುದ್ಧಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement