ಯಾವಾಗಲೂ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ತೀವ್ರ ಹಣಾಹಣಿ ಏರ್ಪಡುವ ತಮಿಳುನಾಡಿನಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿಯು ಪ್ರಬಲ ಶಕ್ತಿಯಾಗಿ ಹೊರಹೊಮ್ಮುವ ಸಾಧ್ಯತೆಯಿದ್ದು, ರಾಜ್ಯ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ ಎಂದು ಫೆಡರಲ್-ಪುತಿಯಾತಲೈಮುರೈ ಲೋಕಸಭೆ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ.
ಫೆಡರಲ್-ಪುತಿಯಾತಲೈಮುರೈ ನಡೆಸಿದ 2024 ರ ಲೋಕಸಭೆ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ಅತ್ಯಧಿಕ ಸ್ಥಾನಗಳನ್ನು ಗೆಲ್ಲುತ್ತದೆ, ಆದರೆ ಅತ್ಯಂತ ವಿಸ್ಮಯಕಾರಿ ಭಾಗವೆಂದರೆ ಸಮೀಕ್ಷೆಯು ತಮಿಳುನಾಡಿನಲ್ಲಿ ಬಿಜೆಪಿ ಒಂದು ಶಕ್ತಿಯಾಗಿ ಬೆಳೆಯಲಿದೆ ಎಂದು ಹೇಳಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಖಾತೆ ತೆರೆಯಲು ವಿಫಲವಾಗಿದ್ದ ಬಿಜೆಪಿ ಸುಮಾರು 4-6 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ.
ಹೆಚ್ಚು ಮುಖ್ಯವಾಗಿ, ಬಿಜೆಪಿಯು ಎಐಎಡಿಎಂಕೆ ಪಕ್ಷಕ್ಕಿಂತ ಹೆಚ್ಚಿನ ಮತಗಳನ್ನು ಗಳಿಸುತ್ತಿದೆ. ಸಮೀಕ್ಷೆಯ ಪ್ರಕಾರ, 2019ರ ಲೋಕಸಭೆ ಚುನಾವಣೆಯಲ್ಲಿ ಶೇಕಡಾ 3.71 ಮತಗಳನ್ನು ಪಡೆದಿದ್ದ ಬಿಜೆಪಿಯು 2024 ರ ಲೋಕಸಭೆ ಚುನಾವಣೆಯಲ್ಲಿ 18.48% ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ಹೇಳಿದೆ. ಇದಕ್ಕೆ ವ್ಯತಿರಿಕ್ತವಾಗಿ, 2019ರ ಲೋಕಸಭೆ ಚುನಾವಣೆಯಲ್ಲಿ 18.72%ರಷ್ಟು ಮತಗಳನ್ನು ಪಡೆದಿದ್ದ 17.26% ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆಯಿದೆ. ಎಐಎಡಿಎಂಕೆ ಹಿಂದಿನ ಮಿತ್ರ ಪಕ್ಷವಾದ ಬಿಜೆಪಿಗಿಂತ ಕಡಿಮೆ ಮತಗಳನ್ನು ಪಡೆಯಲಿದೆ, ಆದರೂ ಸುಮಾರು 6 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಭವಿಷ್ಯ ನುಡಿದಿದೆ.
ಪಕ್ಷವಾರು ಮತ ಹಂಚಿಕೆ
ಡಿಎಂಕೆ ಫ್ರಂಟ್ 38.33%
ಬಿಜೆಪಿ 18.48%
ಎಐಎಡಿಎಂಕೆ 17.26%
ಎನ್‌ಟಿಕೆ 7.26%
ಪಿಎಂಕೆ 2.81%
ಇತರೆ 5.41%
ಹೇಳಲು ಸಾಧ್ಯವಿಲ್ಲ 6.96%
ತಮಿಳುನಾಡಿನ ದಕ್ಷಿಣ ವಲಯದಲ್ಲಿ, ಡಿಎಂಕೆ 37%ರಷ್ಟು ಮತಗಳೊಂದಿಗೆ ಕಮಾಂಡಿಂಗ್ ಮುನ್ನಡೆ ಕಾಯ್ದುಕೊಂಡಿದೆ, ಬಿಜೆಪಿ 19.5%ರಷ್ಟು ಮತ್ತು ಎಐಎಡಿಎಂಕೆ 12.5%ರಷ್ಟು ಮತಗಳಿಂದ ಹಿಂದುಳಿದಿದೆ ಎಂಬುದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಪಶ್ಚಿಮ ವಲಯದಲ್ಲಿ, ಡಿಎಂಕೆ 31%ರಷ್ಟು ಮತಗಳನ್ನು ಪಡೆಯಬಹುದು ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಬಿಜೆಪಿ 22%ರಷ್ಟು ಮತಗಳನ್ನು ಪಡೆಯುತ್ತದೆ ಮತ್ತು ಎಐಎಡಿಎಂಕೆ 21.4% ರಷ್ಟು ಮತಗಳನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದಿದೆ.
ಕೇಂದ್ರ ವಲಯದಲ್ಲಿ ಡಿಎಂಕೆ ಗಮನಾರ್ಹವಾಗಿ ಹೆಚ್ಚಿನ ಮತ ಅಂದರೆ 46% ರಷ್ಟು ಪಡೆಯುವ ನಿರೀಕ್ಷೆಯಿದೆ. ವಿಪಕ್ಷವಾದ ಎಐಎಡಿಎಂಕೆ 20.3% ರಷ್ಟು ಮತಗಳನ್ನು ಪಡೆಯಬಹುದು, ಬಿಜೆಪಿ 11%ರಷ್ಟು ಮತಗಳನ್ನು ಪಡೆಯಬಹುದು ಎಂದು ಅದು ಹೇಳಿದೆ. ಸಾಂಪ್ರದಾಯಿಕವಾಗಿ ಡಿಎಂಕೆಯ ಭದ್ರಕೋಟೆಯಾಗಿರುವ ಉತ್ತರ ವಲಯದಲ್ಲಿ, 35.5% ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆಯಿದ್ದು ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಎಐಎಡಿಎಂಕೆ 20% ರಷ್ಟು ಮತ ಹಾಗೂ ಬಿಜೆಪಿಯು 18% ರಷ್ಟು ಮತಗಳನ್ನು ಪಡೆಯಬಹುದಾಗಿದೆ. ಡಿಎಂಕೆಯ ಮತ್ತೊಂದು ಭದ್ರಕೋಟೆಯಾದ ಚೆನ್ನೈನಲ್ಲಿ, ಪಕ್ಷವು ಸುಮಾರು 47% ರಷ್ಟು ಮತಗಳನ್ನು ಪಡೆಯಬಹುದಾಗಿದ್ದು, ಇಲ್ಲಿ ಬಿಜೆಪಿ ಎರಡನೇ ಸ್ಥಾನ ಪಡೆಯಬಹುದಾಗಿದೆ. ಬಿಜೆಪಿ ಸುಮಾರು 22%ರಷ್ಟು, ಎಐಎಡಿಎಂಕೆ 10.4 ರಷ್ಟು ಮತ ಪಡೆಯುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ಹೇಳಿದೆ.
ಒಟ್ಟಾರೆಯಾಗಿ ಸಂಪೂರ್ಣ ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟ 38.33%, ಬಿಜೆಪಿ 18.48 %, ಎಐಎಡಿಎಂಕೆ 17.26%, ಎನ್‌ಟಿಕೆ 7.26%, ಪಿಎಂಕೆ 2.81% ಇತರೆ 5.41% ಮತಗಳನ್ನು ಪಡೆಯಬಹುದು ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಏನೂ ಹೇಳಲು ಸಾಧ್ಯವಿಲ್ಲ ಎನ್ನುವವರು 6.96% ರಷ್ಟಿದ್ದಾರೆ.
ಇತ್ತೀಚೆಗೆ ಟೈಮ್ಸ್ ನೌ-ಮ್ಯಾಟ್ರಿಜ್ ನ್ಯೂಸ್ ಸಮೀಕ್ಷೆಯು ಆಡಳಿತಾರೂಢ ಡಿಎಂಕೆ ಅಥವಾ ಇಂಡಿಯಾ ಮೈತ್ರಿಕೂಟ 59%ರಷ್ಟು ಮತಗಳನ್ನು ಪಡೆಯಬಹುದು ಹಾಗೂ ಬಿಜೆಪಿ 20.4% ರಷ್ಟು ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನ ಪಡೆಯಬಹುದು ಎಂದು ಹೇಳಿದೆ. ಎಐಎಡಿಎಂಕೆ 16.3%ರಷ್ಟು ಮತಗಳನ್ನು ಪಡೆಯಬಹುದು ಮತ್ತು ಇತರರು 3.6%ರಷ್ಟು ಮತಗಳನ್ನು ಪಡೆಯಬಹುದು ಎಂದು ಹೇಳಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎರಡಂಕಿಯ ಶೇಕಡಾ ಮತಗಳನ್ನು ದಾಟಲಿದೆ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ ಕಿಶೋರ ಸಹ ಭವಿಷ್ಯ ನುಡಿದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ