ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ : ಪೊಲೀಸರಿಂದ ಸ್ವಯಂಪ್ರೇರಿತ ದೂರು ದಾಖಲು, ಸಯ್ಯದ್ ನಾಸೀರ್ ಹುಸೇನ್ ಹೇಳಿದ್ದೇನು?

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ ಸಂಜೆ ಪ್ರಕಟವಾಗಿದ್ದು, ಕಾಂಗ್ರೆಸ್‌ ನಿಂದ ಮೂವರು ಹಾಗೂ ಬಿಜೆಪಿಯಿಂದ ಒಬ್ಬರು ಜಯಗಳಿಸಿದ್ದಾರೆ.
ಗೆಲುವಿನ ಬಳಿಕ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ.

ವಿಧಾನಸೌಧದಲ್ಲಿ ಕರ್ತವ್ಯದಲ್ಲಿದ್ದ ಸಹಾಯಕ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಶಿವಕುಮಾರ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 153 ಬಿ(ರಾಷ್ಟ್ರೀಯ ಸಮಗ್ರತೆ ಧಕ್ಕೆ ತರುವ ಹೇಳಿಕೆ) 505 (ಸಾರ್ವಜನಿಕ ಕೇಡಿಗೆ ಕಾರಣವಾಗುವ ಹೇಳಿಕೆ) ಆರೋಪದ ಅಡಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಅಲ್ಲದೆ, ಬಿಜೆಪಿ ನಿಯೋಗ ಈ ಸಂಬಂಧ ವಿಧಾ‌ನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಪಾಕ್​ ಪರ ಘೋಷಣೆ ಕೂಗಿದವರನ್ನು ಕೂಡಲೇ ಬಂಧಿಸಬೇಕೆಂದು ಠಾಣೆ ಮುಂದೆಯೇ ಪ್ರತಿಭಟನೆ ನಡೆಸಿದರು.

ಸಯ್ಯದ್ ನಾಸಿರ್ ಹುಸೇನ್ ಸ್ಪಷ್ಟನೆ
ರಾಜ್ಯಸಭೆ ಚುನಾವಣೆ ಗೆಲುವಿನ ಸಂಭ್ರಮಾಚರಣೆ ವೇಳೆ ತಮ್ಮ ಬೆಂಬಲಿಗರೊಬ್ಬರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಎಂಬ ಆರೋಪಕ್ಕೆ ರಾಜ್ಯಸಭಾ ಸದಸ್ಯ ಸಯ್ಯದ್ ನಾಸಿರ್ ಹುಸೇನ್ ಸ್ಪಷ್ಟನೆ ನೀಡಿದ್ದು, ನಾನು ಕಾಂಗ್ರೆಸ್ ಜಿಂದಾಬಾದ್​​, ನಾಸಿರ್​ ಹುಸೇನ್​​ ಜಿಂದಾಬಾದ್​​​ ಎಂದು ಘೋ​ಷಣೆಯನ್ನಷ್ಟೇ ಕೇಳಿದ್ದೇನೆ. ಪಾಕಿಸ್ತಾನ್​ ಜಿಂದಾಬಾದ್​ ಎಂಬ ಘೋಷಣೆ ನಾನು ಕೇಳಿಲ್ಲ. ಒಂದು ವೇಳೆ ಹಾಗೆ ಯಾರಾದರೂ ಘೋಷಣೆ ಕೂಗಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಲಿ” ಎಂದು ಹೇಳಿದ್ದಾರೆ.

ಈ ಬಗ್ಗೆ ನಾಸಿರ್​ ಹುಸೇನ್​​ ಸಾಮಾಜಿಕ ಜಾಲತಾಣ ಎಕ್ಸ್​ (ಟ್ವಿಟರ್​)ನಲ್ಲಿ ಸ್ಪಷ್ಟನೆ ನೀಡಿದ್ದು, ನಾನು ಆ ಸ್ಥಳದಲ್ಲಿದ್ದಾಗ ಪಾಕಿಸ್ತಾನ ಜಿಂದಾಬಾದ್​ ಘೋಷಣೆ ಕೇಳಿಲ್ಲ. ಈಗಾಗಲೆ ನಾನು ಪೊಲೀಸರ ಬಳಿ ಮಾಹಿತಿ ಪಡೆದಿದ್ದೇನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದು ವೇಳೆ ಯಾರಾದರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದರೇ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಘೋಷಣೆ ಕೂಗಿದ್ದು ಸತ್ಯವಾಗಿದ್ದರೇ, ಆ ವ್ಯಕ್ತಿ ವಿಧಾನಸೌಧ ಒಳಗೆ ಹೇಗೆ ಬಂದ ? ಯಾಕೆ ಬಂದ ? ಎಂಬ ಎಲ್ಲದರ ಕುರಿತು ಸಮಗ್ರ ತನಿಖೆಯಾಗುತ್ತದೆ. ಒಂದು ವೇಳೆ ಯಾರಾದರೂ ವೀಡಿಯೊ ತಿರುಚಿ, ಸುಳ್ಳು ಸುದ್ದಿ ಹಬ್ಬಿಸಿದ್ದರೆ ಅವರ ವಿರುದ್ಧವೂ ತನಿಖೆಯಾಗಲಿದೆ ಎಂದು ಅವರು ವೀಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವ ವ್ಯಕ್ತಿಯ ಪುತ್ರಿಗೆ ಉದ್ಯೋಗ ಕೊಡಿಸಿದ ಎಚ್‌ಡಿಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement