ಹಿಮಾಚಲ: ಪತನದ ಭೀತಿಯಲ್ಲಿ ಕಾಂಗ್ರೆಸ್​ ಸರ್ಕಾರ…! ಬಹುಮತವಿದ್ರೂ ರಾಜ್ಯಸಭೆ ಚುನಾವಣೆಯಲ್ಲಿ ಸೋಲು, ಪ್ರಬಲ ಸಚಿವ ರಾಜೀನಾಮೆ, 26 ಶಾಸಕರು ರೆಬೆಲ್..!!

ನವದೆಹಲಿ: ಹಿಮಾಚಲ ಪ್ರದೇಶದ ರಾಜ್ಯಸಭೆ ಚುನಾವಣೆಯಲ್ಲಿ ಅಚ್ಚರಿ ಎಂಬಂತೆ ಬಿಜೆಪಿ ಜಯಗಳಿಸಿದ್ದು, ಆಡಳಿತಾರೂಢ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ. ಕಾಂಗ್ರೆಸ್‌ ಶಾಸಕರಿಂದ ದೊಡ್ಡ ಪ್ರಮಾಣದಲ್ಲಿ ಅಡ್ಡಮತದಾನ ನಡೆದಿದ್ದು, ಇದು ಹಿಮಾಚಲದ ಕಾಂಗ್ರೆಸ್ ಸರ್ಕಾರವನ್ನೇ ಉರುಳಿಸುವ ಸುಳಿವನ್ನು ಕೂಡ ನೀಡಿದೆ. ಆಡಳಿತಾರೂಢ ಕಾಂಗ್ರೆಸ್​ ಶಾಸರು ಅಡ್ಡಮತದಾನ ಮಾಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸುಖ್ವಿಂದರ್​ ಸಿಂಗ್ ಸುಖು ಶಾಸಕರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಹೇಳಿರುವ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದೆ. ಇದರ ಮಧ್ಯೆಯೇ ಕಾಂಗ್ರೆಸ್‌ ಸರ್ಕಾರದ ತೊಂದರೆಗಳು ಹೆಚ್ಚಾಗಿವೆ. ಸಖು ಸಂಪುಟದ ಪ್ರಬಲ ಸಚಿವ ಹಾಗೂ ಆರು ಬಾರಿ ಹಿಮಾಚಲದ ಮುಖ್ಯಮಂತ್ರಿಯಾಗಿದ್ದ ವೀರಭದ್ರ ಸಿಂಗ್‌ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಆಡಳಿತಾರೂಢ ಕಾಂಗ್ರೆಸ್‌ಗೆ ಮತ್ತೊಂದು ಹೊಡೆತ ಬಿದ್ದಿದೆ. ಪಕ್ಷದ ಶಾಸಕರ ಅಭಿಪ್ರಾಯಗಳನ್ನು ಕಡೆಗಣಿಸಲಾಗಿದೆ. ಪಕ್ಷವು ತನ್ನ ತಂದೆ ದಿವಂಗತ ವೀರಭದ್ರ ಸಿಂಗ್‌ ಅವರ ಬಗ್ಗೆ ತೋರಿದ ತಾತ್ಸಾರ ಮನೋಭಾವದಿಂದ ತಾನು ನಿರಾಶೆಗೊಂಡಿದ್ದೇನೆ ಎಂದು ವಿಕ್ರಮಾದಿತ್ಯ ಸಿಂಗ್ ಹೇಳಿದ್ದಾರೆ.

ಅತೃಪ್ತ ಕಾಂಗ್ರೆಸ್ ಶಾಸಕರು ಬಂಡಾಯದ ಬೆದರಿಕೆ ಹಾಕಿದ್ದರಿಂದ ಮತ್ತು ಬಿಜೆಪಿಯು ಅವಿಶ್ವಾಸಮತ ನಿರ್ಣಯ ಮಂಡಿಸಲು ಮುಂದಾಗಿದ್ದರಿಂದ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬ ಊಹಾಪೋಹ ಜೋರಾಗಿದೆ. ಆದರೆ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಇದನ್ನು ನಿರಾಕರಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ ಸರ್ಕಾರವಿದ್ದು, 68 ಸದಸ್ಯರ ವಿಧಾನಸಭೆಯಲ್ಲಿ 40 ಶಾಸಕರ ಸಂಖ್ಯಾಬಲ ಹೊಂದಿದ್ದು, ಸ್ಪಷ್ಟ ಬಹುಮತ ಪಡೆದಿದೆ. ಅಲ್ಲದೆ ಮೂವರು ಪ್ಷೇತರರ ಬೆಂಬಲವೂ ಇದೆ. ಹೀಗಾಗಿ ಅಭ್ಯರ್ಥಿಯಾಗಿದ್ದ ಕಾಂಗ್ರೆಸ್‌ ಹಿರಿಯ ನಾಯಕ, ಸುಪ್ರೀಂಕೋರ್ಟ್ ವಕೀಲ ಅಭಿಷೇಕ ಮನು ಸಿಂಘ್ವಿವರಿಗೆ ಗೆಲುವು ಸುಲಭದ ತುತ್ತಾಗಬೇಕಿತ್ತು. ಆದರೆ, ಭಾರಿ ಕಾರ್ಯಾಚರಣೆ ನಡೆಸಿದ ಬಿಜೆಪಿ ನಾಯಕರು, 6 ಕಾಂಗ್ರೆಸ್ ಶಾಸಕರಿಂದ ಅಡ್ಡಮತದಾನ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, 3 ಪಕ್ಷೇತರ ಶಾಸಕರು ಕೂಡ ಬಿಜೆಪಿ ಅಭ್ಯರ್ಥಿಗೆ ಮತ ನೀಡಿದ್ದರಿಂದ ಬಿಜೆಪಿ ಹರ್ಷ ಮಹಾಜನ್ ಗೆಲುವು ಸಾಧಿಸಿದ್ದಾರೆ.

ಒಟ್ಟು 26 ಶಾಸಕರು ಮುಖ್ಯಮಂತ್ರಿ ಸುಖು ವಿರುದ್ಧ ಅಸಮಾಧಾನಗೊಂಡಿದ್ದು, ಅವರು ಮುಖ್ಯಮಂತ್ರಿ ಬದಲಾವಣೆ ಮಾಡುವುದನ್ನು ಬಯಸಿದ್ದಾರೆ ಎಂದು ಹೇಳಲಾಗಿದೆ. ಅಡ್ಡ ಮತದಾನ ಮಾಡಿದ ಶಾಸಕರೇ ಇದನ್ನು ಬಹಿರಂಗವಾಗಿ ಹೇಳಿದ್ದು, ಹಿಮಾಚಲ ಪ್ರದೇಶದ ಕಾಂಗ್ರೆಸ್​ ಸರ್ಕಾರದ ಬುಡ ಅಲುಗಾಡುತ್ತಿದೆ. ಸುಖು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಮತ್ತೊಬ್ಬ ಬಲಿಷ್ಠ ನಾಯಕನ್ನು ಆ ಸ್ಥಾನಕ್ಕೆ ಕೂರಿಸುವ ಸಾಧ್ಯತೆಯೂ ಇದೆ.
ಈ ಮಧ್ಯೆ ಮುಖ್ಯಮಂತ್ರಿ ಸಖು ತಾನು ರಾಜೀನಾಮೆ ನೀಡಿತ್ತಿಲ್ಲ ಎಂದು ಹೇಳಿದ್ದಾರೆ. ನಾನು ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಕಾಂಗ್ರೆಸ್ ಸರ್ಕಾರ ಐದು ವರ್ಷಗಳನ್ನು ಪೂರ್ಣಗೊಳಿಸುತ್ತದೆ. ನಾವು ಹೋರಾಟಗಾರರು ಮತ್ತು ನಾವು ನಮ್ಮ ಬಹುಮತವನ್ನು ಸಾಬೀತುಪಡಿಸುತ್ತೇವೆ” ಎಂದು ಹಿಮಾಚಲ ಮುಖ್ಯಮಂತ್ರಿ ಸುಖು ಸುದ್ದಿಗಾರರಿಗೆ ತಿಳಿಸಿದರು.
ಈ ಮಧ್ಯೆ ಹಿಮಾಚಲಪ್ರದೇಶದ ಆಡಳಿತಾರೂಢ ಕಾಂಗ್ರೆಸ್ ಚುನಾವಣೆಯಲ್ಲಿ ಏಕೈಕ ರಾಜ್ಯಸಭಾ ಸ್ಥಾನದಲ್ಲಿ ಸೋಲನುಭವಿಸಿದ ನಂತರ ನಂತರ ಬುಧವಾರ ಹಿಮಾಚಲ ಪ್ರದೇಶ ವಿಧಾನಸಭೆಯಿಂದ ವಿಪಕ್ಷ ನಾಯಕ ಜೈರಾಮ್ ಠಾಕೂರ್ ಸೇರಿದಂತೆ 15 ಬಿಜೆಪಿ ಶಾಸಕರನ್ನು ಉಚ್ಛಾಟಿಸಲಾಯಿತು. ಇದು ಗುಡ್ಡಗಾಡು ರಾಜ್ಯದಲ್ಲಿ ರಾಜಕೀಯ ಹೈಡ್ರಾಮಾ ಉಲ್ಬಣಗೊಳ್ಳಲು ಕಾರಣವಾಯಿತು.

ಪ್ರಮುಖ ಸುದ್ದಿ :-   ಶಾಕಿಂಗ್‌ ವೀಡಿಯೊ..| ಆಸ್ಪತ್ರೆ ಆವರಣದಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ದಂಪತಿ ಮೇಲೆ ಮರ ಬಿದ್ದು ಪತಿ ಸಾವು, ಪತ್ನಿಗೆ ಗಾಯ

ರಾಜ್ಯಸಭಾ ಚುನಾವಣೆ ನಂತರ ಹಿಮಾಚಲದಲ್ಲಿ ಬಿಕ್ಕಟ್ಟು:
ಬಿಜೆಪಿಯ ಹಿರಿಯ ನಾಯಕ ಮತ್ತು ಹಿಮಾಚಲ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜೈರಾಮ ಠಾಕೂರ್ ಅವರು ಪಕ್ಷದ ಶಾಸಕರೊಂದಿಗೆ ಬುಧವಾರ ರಾಜಭವನದಲ್ಲಿ ರಾಜ್ಯಪಾಲ ಶಿವಪ್ರತಾಪ ಶುಕ್ಲಾ ಅವರನ್ನು ಭೇಟಿ ಮಾಡಿದರು. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಆಡಳಿತವು ಜನಾದೇಶವನ್ನು ಕಳೆದುಕೊಂಡಿದೆ ಎಂದು ಪ್ರತಿಪಾದಿಸಿ ಅವರು ವಿಧಾನಸಭೆಯಲ್ಲಿ ವಿಶ್ವಾಸ ಮತದ ಪರೀಕ್ಷೆ ನಡೆಸುವಂತೆ ಕೋರಿದರು.
ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರ್ಷ ಮಹಾಜನ್ ಗೆಲುವು ಸಾಧಿಸಿದ್ದಾರೆ ಎಂದು ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೈರಾಮ ಠಾಕೂರ್, ಪ್ರಸ್ತುತ ಕಾಂಗ್ರೆಸ್ ಸರ್ಕಾರ ಅಲ್ಪಮತಕ್ಕೆ ಬಂದಿದ್ದು, ಅಧಿಕಾರದಲ್ಲಿ ಉಳಿಯುವ ನೈತಿಕ ಹಕ್ಕನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.

ಈ ಮಧ್ಯೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಕಾಂಗ್ರೆಸ್ ನಾಯಕ ವಿಕ್ರಮಾದಿತ್ಯ ಸಿಂಗ್ ಅವರು, ರಾಜ್ಯಸಭಾ ಚುನಾವಣೆಯ ಫಲಿತಾಂಶದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಬಿಜೆಪಿ ಎದುರು ಸೋತಿದೆ, ಇದು ಕಳೆದ ವರ್ಷ ಸರ್ಕಾರ ರಚನೆಯಾದಾಗಿನಿಂದ ಆಡಳಿತದಲ್ಲಿ ಚಾಲ್ತಿಯಲ್ಲಿರುವ ವ್ಯವಸ್ಥೆಯ ಪರಿಣಾಮವಾಗಿದೆ. ಪಕ್ಷವು ತನ್ನ ತಂದೆ ದಿವಂಗತ ವೀರಭದ್ರ ಸಿಂಗ್‌ ಅವರ ಬಗ್ಗೆ ತೋರಿದ ತಾತ್ಸಾರ ಮನೋಭಾವದಿಂದ ತಾನು ನಿರಾಶೆಗೊಂಡಿದ್ದೇನೆ. ರಾಜ್ಯದಲ್ಲಿ 6 ಬಾರಿ ಮುಖ್ಯಮಂತ್ರಿಯಾಗಿದ್ದವರಿಂದಾಗಿ ಹಿಮಾಚಲದಲ್ಲಿ ಈ ಸರ್ಕಾರ ರಚನೆಯಾಗಿದೆ – ಮಾಲ್ ರಸ್ತೆಯಲ್ಲಿ ಅವರ ಪ್ರತಿಮೆಗೆ ಒಂದು ಸಣ್ಣ ಜಾಗವೂ ಸಿಗಲಿಲ್ಲ. ಇದು ನನ್ನ ದಿವಂಗತ ತಂದೆಗೆ ಈ ಸರ್ಕಾರ ತೋರಿದ ಗೌರವ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿ :-   'ಅಜ್ಞಾನ, ಸೋಮಾರಿತನ, ದುರಹಂಕಾರ' ಇದುವೇ ಕಾಂಗ್ರೆಸ್‌ ಯಶಸ್ಸು ಪಡೆಯಲು ಇರುವ ಅಡ್ಡಿ : ರಾಜಕೀಯ ತಂತ್ರಜ್ಞ ಪ್ರಶಾಂತ ಕಿಶೋರ ಅಭಿಪ್ರಾಯ

ಹಿಮಾಚಲ ಪ್ರದೇಶದ ಬಿಕ್ಕಟ್ಟು ಪರಿಹರಿಸುವ ಹೊಣೆಗಾರಿಕೆಯನ್ನು ಪ್ರಿಯಾಂಕಾ ಗಾಂಧಿ ವಾದ್ರಾ ವಹಿಸಿಕೊಂಡಿದ್ದಾರೆ. ಅವರು ವಿಕ್ರಮಾದಿತ್ಯ ಸಿಂಗ್ ಸೇರಿದಂತೆ ಹಲವು ಶಾಸಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಗಾಂಧಿಯವರು ಬೆಳವಣಿಗೆಗಳನ್ನು ಸಕ್ರಿಯವಾಗಿ ಗಮನಿಸುತ್ತಿದ್ದಾರೆ ಮತ್ತು ಸುಖವಿಂದರ್ ಸುಖು ಮತ್ತು ರಾಜೀವ್ ಶುಕ್ಲಾ ಅವರೊಂದಿಗೆ ನಿಯಮಿತ ಸಂಪರ್ಕ ಹಾಗೂ ಸಂವಹನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ನಡೆದ ಬೆಳವಣಿಗೆಯು ಆಡಳಿತಾರೂಢ ಕಾಂಗ್ರೆಸ್‌ಗೆ ದಿಗ್ಭ್ರಮೆಯುಂಟು ಮಾಡಿದ್ದು, ರಾಜ್ಯಸಭೆ ಚುನಾವಣೆಯಲ್ಲಿ ಬಹುತದ ಸರ್ಕಾರವಿದ್ದರೂ ಕಾಂಗ್ರೆಸ್‌ ಪಕ್ಷವು ಬಿಜೆಪಿ ಎದುರು ಮಂಡಿಯೂರಿದೆ. ಬಿಜೆಪಿಯ ಹರ್ಷ ಮಹಾಜನ್ ಅವರು ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿ ಅವರನ್ನು ಸೋಲಿಸಿದರು. ಮತ ಎಣಿಕೆಯ ನಂತರ ಇಬ್ಬರು ಸಮ-ಸಮ ಮತಗಳನ್ನು ಪಡೆದಿದ್ದರಿಂದ ಅದು ಟೈನಲ್ಲಿ ಕೊನೆಗೊಂಡಿತು, ಇಬ್ಬರೂ ಅಭ್ಯರ್ಥಿಗಳು ತಲಾ 34 ಮತಗಳನ್ನು ಗಳಿಸಿದರು. ನಂತರ್‌ ಟಾಸ್‌ ಮೂಲಕ ಅಭ್ಯರ್ಥಿಯ ಗೆಲುವನ್ನು ನಿರ್ಧರಿಸಲಾಯಿತು ಹಾಗೂ ಇದರಲ್ಲಿ ಬಿಜೆಪಿ ಅಭ್ಯರ್ಥಿ ಹರ್ಷ ಮಹಾಜನ ಜಯಗಳಿಸಿದರು. ಇದು ಕಾಂಗ್ರೆಸ್ ಶಾಸಕರಿಂದ ನಡೆದ ಗಮನಾರ್ಹ ಅಡ್ಡ ಮತದಾನವನ್ನು ಸೂಚಿಸುತ್ತದೆ.

ಆರು ಕಾಂಗ್ರೆಸ್ ಶಾಸಕರು ಮತ್ತು ಈ ಹಿಂದೆ ಸರ್ಕಾರವನ್ನು ಬೆಂಬಲಿಸಿದ ಮೂವರು ಸ್ವತಂತ್ರ ಶಾಸಕರ ಅಡ್ಡಮತದಾನದಿಂದಾಗಿ ಬಿಜೆಪಿ ಅಭ್ಯರ್ಥಿ ಗೆಲುವು ಕಂಡಿದ್ದು, ಇದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರ ಬುಡವೇ ಅಲುಗಾಡುವಂತೆ ಮಾಡಿದೆ. ಅತೃಪ್ತ ಶಾಸಕರೊಂದಿಗೆ ಮಾತುಕತೆ ನಡೆಸಲು ಕಾಂಗ್ರೆಸ್ ಹೈಕಮಾಂಡ್ ಹಿರಿಯ ನಾಯಕರಾದ ಭೂಪಿಂದರ್ ಸಿಂಗ್ ಹೂಡಾ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರನ್ನು ಕಳುಹಿಸಿದೆ.
ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ ಆರು ಶಾಸಕರು ಶಿಮ್ಲಾದಿಂದ ಹರಿಯಾಣಕ್ಕೆ ತೆರಳಿದ್ದರು.ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ವದಂತಿಯಿರುವ ಶಾಸಕರನ್ನು ಬುಧವಾರ ಹೆಲಿಕಾಪ್ಟರ್ ಮೂಲಕ ಹಿಮಾಚಲ ರಾಜಧಾನಿಗೆ ಕರೆತರಲಾಗುತ್ತಿದೆ.
ಸುಖುವನ್ನು ಬದಲಾಯಿಸದ ಹೊರತು ನಮ್ಮ ಅಸಮಾಧಾನ ಹೋಗುವುದಿಲ್ಲ ಎಂದು ಭಿನ್ನಮತೀಯ ಕಾಂಗ್ರೆಸ್‌ ಶಾಸಕರು ಹೇಳಿದ್ದಾರೆ ಎಂದು ವರದಿಯಾಗಿದೆ. ಹಿಮಾಚಲ ಪ್ರದೇಶದ ಕಾಂಗ್ರೆಸ್‌ ಸರ್ಕಾರದಲ್ಲಿನ ಈ ಬಿಕ್ಕಟ್ಟು ಎಲ್ಲಿಗೆ ಬಂದು ತಲುಪುತ್ತದೆ ಎಂದು ಹೇಳುವುದು ಕಷ್ಟಸಾಧ್ಯವಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement