ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿ ಗ್ರಾಮದಲ್ಲಿ ಹನುಮ ಧ್ವಜ ತೆರವು ಮಾಡಿದ ಸ್ಥಳದಲ್ಲೇ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಸಮ್ಮುಖದಲ್ಲಿ ಮತ್ತೆ ಹನುಮ ಧ್ವಜವನ್ನು ಹಾರಿಸಲಾಗಿದೆ ಎಂದು ವರದಿಯಾಗಿದೆ. ಸೋಮವಾರ ಕಾರ್ಯಕರ್ತರ ಸಭೆಗೆ ಸಂಸದ ಅನಂತಕುಮಾರ ಹೆಗಡೆ ಅವರು ತೆಂಗಿನಗುಂಡಿ ಗ್ರಾಮಕ್ಕೆ ಭೇಟಿ ನೀಡಿದ ಸಮಯದಲ್ಲಿ ಅವರ ನೇತೃತ್ವದಲ್ಲಿ ಹನುಮ ಧ್ವಜವನ್ನು ಮತ್ತೆ ಹಾರಿಸಲಾಗಿದೆ.
ಅನಧಿಕೃತವಾಗಿ ಧ್ವಜ ಕಟ್ಟೆಯನ್ನು ನಿರ್ಮಾಣ ಮಾಡಲಾಗಿದೆ ಎಂದು ತೆಂಗಿನಗುಂಡಿ ಗ್ರಾಮದಲ್ಲಿ ಕಟ್ಟಲಾಗಿದ್ದ ಧ್ವಜ ಕಟ್ಟೆ ಹಾಗೂ ವೀರ ಸಾವರ್ಕರ ಅವರ ನಾಮಫಲಕವನ್ನು ಆಡಳಿತದ ವತಿಯಿಂದ ತೆರವು ಮಾಡಲಾಗಿತ್ತು. ಇದಕ್ಕೆ ಸ್ಥಳೀಯ ಹಿಂದೂ ಕಾರ್ಯಕರ್ತರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಸೋಮವಾರ ಕಾರ್ಯಕರ್ತರ ಸಭೆಗೆ ಸಂಸದ ಅನಂತಕುಮಾರ ಹೆಗಡೆ ಅವರು ತೆಂಗಿನಗುಂಡಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಅನಂತಕುಮಾರ ಹೆಗಡೆ ಅವರ ನೇತೃತ್ವದಲ್ಲಿ ಈ ಮೊದಲು ತೆರವು ಮಾಡಲಾಗಿದ್ದ ಸ್ಥಳದಲ್ಲೇ ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂ ಪರ ಸಂಘಟನೆಗಳು ಕಾರ್ಯಕರ್ತರು ಹನುಮ ಧ್ವಜವನ್ನು ಹಾರಿಸಿದರು. ಅಲ್ಲದೇ ಕಟ್ಟೆಗೆ ವೀರ ಸಾವರ್ಕರ ನಾಮಫಲಕ ಸಹ ಹಾಕಲಾಗಿದೆ ಎಂದು ವರದಿಯಾಗಿದೆ. ಇದರ ವೀಡಿಯೊ ವೈರಲ್ ಆಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ