ನವದೆಹಲಿ: 2019 ರ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಗೆ ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದ್ದರೂ ಸಹ, ತಮ್ಮ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಕೇರಳ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ಚುನಾವಣೆಗೂ ಮುನ್ನ ಪೌರತ್ವ ತಿದ್ದುಪಡಿ ಕಾಯ್ದೆಯ ನಿಬಂಧನೆಗಳ ಜಾರಿಗೆ ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರದ ಕ್ರಮ ದೇಶವನ್ನು ಕದಡುವಂತಿದೆ ಎಂದು ಹೇಳಿದ್ದಾರೆ.
“ಇದು ಜನರನ್ನು ವಿಭಜಿಸುವುದು, ಕೋಮು ಭಾವನೆಗಳನ್ನು ಕೆರಳಿಸುವುದು ಮತ್ತು ಸಂವಿಧಾನದ ಮೂಲ ತತ್ವಗಳನ್ನು ದುರ್ಬಲಗೊಳಿಸುವುದು. ಭಾರತೀಯ ನಾಗರಿಕರನ್ನು ವಿಭಜಿಸುವ ಈ ಕ್ರಮವನ್ನು ಒಗ್ಗಟ್ಟಿನಿಂದ ವಿರೋಧಿಸಬೇಕು” ಎಂದು ಅವರು ಹೇಳಿದ್ದಾರೆ. ಸಿಪಿಐ(ಎಂ) ನಾಯಕರ ಪ್ರಕಾರ, ಸಿಎಎ ಮುಸ್ಲಿಮರಿಗೆ ಪೌರತ್ವವನ್ನು ನಿರಾಕರಿಸುವುದರಿಂದ ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಹೊರಡಿಸಿದ ಪ್ರಕಟಣೆಯಲ್ಲಿ, “ಕೇರಳದಲ್ಲಿ ಇದನ್ನು ಜಾರಿಗೊಳಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದೆ, ಯಾವುದೇ ಕಾರಣಕ್ಕೂ ಈ ಕಾನೂನನ್ನು ಕೇರಳದಲ್ಲಿ ಜಾರಿಗೊಳಿಸುವುದಿಲ್ಲ” ಎಂದು ಹೇಳಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ಇದು ಬಿಜೆಪಿಯ ಕೆಲಸ, ಅವರು ಚುನಾವಣೆ ಹತ್ತಿರವಾದ ತಕ್ಷಣ ಸುದ್ದಿ ವಾಹಿನಿಗಳ ಮೂಲಕ ಮಾಹಿತಿಯನ್ನು ಹರಡಲು ಪ್ರಾರಂಭಿಸುತ್ತಾರೆ ಮತ್ತು ನಂತರ ಅದನ್ನು ಜನರಿಗೆ ತಲುಪಿಸುತ್ತಾರೆ ಎಂದು ಹೇಳಿದ್ದಾರೆ.
“ಭಯಪಡಬೇಡಿ. ನಾವು ಇಲ್ಲಿ ಸಿಎಎಗೆ ಅವಕಾಶ ನೀಡುವುದಿಲ್ಲ. ಇದು ಬಂಗಾಳ” ಎಂದು ಅವರು ಹೇಳಿದರು.
ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ನಾಲ್ಕು ವರ್ಷಗಳ ನಂತರ ಕೇಂದ್ರವು ಸೋಮವಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಜಾರಿಗೆ ತಂದಿದೆ. ಡಿಸೆಂಬರ್ 11, 2019 ರಂದು ಸಂಸತ್ತು ಜಾರಿಗೊಳಿಸಿದ ಸಿಎಎ, ಭಾರತದಾದ್ಯಂತ ತೀವ್ರ ಚರ್ಚೆ ಮತ್ತು ವ್ಯಾಪಕ ಪ್ರತಿಭಟನೆಗಳಿಗೆ ವಿಷಯವಾಗಿದೆ.
ಹಿಂದೂ, ಸಿಖ್, ಜೈನ್, ಪಾರ್ಸಿ, ಬೌದ್ಧ ಮತ್ತು ಕ್ರೈಸ್ತ ಸಮುದಾಯಗಳಿಗೆ ಸೇರಿದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ವಲಸಿಗರಿಗೆ ಡಿಸೆಂಬರ್ 31, 2014ರ ಮೊದಲು ತಮ್ಮ ತಾಯ್ನಾಡಿನಲ್ಲಿ ಧಾರ್ಮಿಕ ಕಿರುಕುಳ ಎದುರಿಸಿ ಭಾರತಕ್ಕೆ ಪ್ರವೇಶಿಸಿದವರಿಗೆ ಭಾರತೀಯ ಪೌರತ್ವಕ್ಕೆ ತ್ವರಿತ ವಾಗಿ ನೀಡಲು ಸಿಎಎ 1955 ರ ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ