ಸಿಎಎ ಕಾನೂನಿನ ಅಡಿ ಮುಸ್ಲಿಮರು ಯಾಕೆ ಪೌರತ್ವಕ್ಕೆ ಅರ್ಹರಲ್ಲ? : ವಿವರಣೆ ನೀಡಿದ ಅಮಿತ್‌ ಶಾ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನದ ಸುತ್ತಲಿನ ವಿವಾದದ ಮಧ್ಯೆ, ಗೃಹ ಸಚಿವ ಅಮಿತ್ ಶಾ ಪ್ರಮುಖ ಪ್ರಶ್ನೆಗೆ ಇಂದು ಗುರುವಾರ ಉತ್ತರಿಸಿದ್ದಾರೆ.
ಪಾರ್ಸಿಗಳು ಮತ್ತು ಕ್ರೈಸ್ತರು ಸಿಎಎ ಅಡಿಯಲ್ಲಿ ಏಕೆ ಅರ್ಹರು, ಆದರೆ ಮುಸ್ಲಿಮರುಯಾಕೆ ಅರ್ಹರಲ್ಲ? ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯು ಡಿಸೆಂಬರ್ 31, 2014 ರ ಮೊದಲು ಭಾರತಕ್ಕೆ ಆಗಮಿಸಿದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕಿರುಕುಳಕ್ಕೊಳಗಾದ ಆ ದೇಶದ ಅಲ್ಪಸಂಖ್ಯಾತರಿಗೆ ಪೌರತ್ವವನ್ನು ನೀಡುವ ಉದ್ದೇಶ ಹೊಂದಿದೆ.
ಸುದ್ದಿ ಸಂಸ್ಥೆ ಎಎನ್‌ಐ (ANI)ಗೆ ನೀಡಿದ ಸಂದರ್ಶನದಲ್ಲಿ ಭಾರತದಲ್ಲಿ ಜನ್ಮತಳೆಯದ ಧರ್ಮಗಳಾದ ಕ್ರೈಸ್ತರು ಮತ್ತು ಪಾರ್ಸಿಗಳಿಗೆ ಕಾಯ್ದೆಯಲ್ಲಿ ಅವಕಾಶ ನೀಡಿರುವಾಗ ಮುಸ್ಲಿಮರಿಗೆ ಏಕಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅಮಿತ್‌ ಶಾ ಅವರು, “ಆ ಪ್ರದೇಶವು ಮುಸ್ಲಿಂ ಜನಸಂಖ್ಯೆಯ ಕಾರಣದಿಂದ ಇಂದು ಭಾರತದ ಉಳಿದಿಲ್ಲ. ಮುಸ್ಲಿಂ ಜನಸಂಖ್ಯೆಯ ಕಾರಣಕ್ಕಾಗಿಯೇ ಅದನ್ನು ಅವರಿಗೆ ನೀಡಲಾಗಿದೆ. ಅಖಂಡ ಭಾರತದ ಭಾಗವಾಗಿದ್ದ ಹಾಗೂ ಧಾರ್ಮಿಕ ದೌರ್ಜನ್ಯದಿಂದ ಕಿರುಕುಳ, ಸಂಕಷ್ಟ ಅನುಭವಿಸಿದವರಿಗೆ ಆಶ್ರಯ ನೀಡುವುದು ನಮ್ಮ ನೈತಿಕ ಹಾಗೂ ಸಾಂವಿಧಾನಿಕ ಜವಾಬ್ದಾರಿ ಎಂದು ಭಾವಿಸುತ್ತೇನೆ” ಎಂದು ಅವರು ಹೇಳಿದರು.

ವಿಭಜನೆಯ ಸಮಯದಲ್ಲಿ ಪಾಕಿಸ್ತಾನದ ಜನಸಂಖ್ಯೆಯಲ್ಲಿ ಹಿಂದೂಗಳು ಶೇಕಡಾ 23 ರಷ್ಟಿದ್ದರು ಎಂದು ಗೃಹ ಸಚಿವರು ಹೇಳಿದರು. “ಈಗ ಅದು ಶೇಕಡಾ 3.7 ಕ್ಕೆ ಇಳಿದಿದೆ. ಅವರು ಎಲ್ಲಿಗೆ ಹೋದರು? ಇಷ್ಟು ಜನರು ಇಲ್ಲಿಗೆ ಬಂದಿಲ್ಲ. ಬಲವಂತದ ಮತಾಂತರ ನಡೆಯಿತು, ಅವರನ್ನು ಅವಮಾನಿಸಲಾಗಿದೆ, ಅವರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನಡೆಸಲಾಯಿತು, ಅವರು ಎಲ್ಲಿಗೆ ಹೋಗುತ್ತಾರೆ? ನಮ್ಮ ಸಂಸತ್ತು ಹಾಗೂ ರಾಜಕೀಯ ಪಕ್ಷಗಳು ಈ ಬಗ್ಗೆ ನಿರ್ಧಾರ ಕೈಗೊಳ್ಳಬಾರದೇ?” ಎಂದು ಅಮಿತ್‌ ಶಾ ಪ್ರಶ್ನಿಸಿದರು.
1951 ರಲ್ಲಿ ಬಾಂಗ್ಲಾದೇಶದ ಜನಸಂಖ್ಯೆಯಲ್ಲಿ 22 ಪ್ರತಿಶತದಷ್ಟು ಹಿಂದೂಗಳು ಇದ್ದರು. “2011 ರಲ್ಲಿ ಇದು ಶೇಕಡಾ 10 ಕ್ಕೆ ಇಳಿಯಿತು. ಅವರು ಎಲ್ಲಿಗೆ ಹೋದರು?””ಅಫ್ಘಾನಿಸ್ತಾನದಲ್ಲಿ 1992 ರಲ್ಲಿ ಸುಮಾರು 2 ಲಕ್ಷ ಸಿಖ್ ಮತ್ತು ಹಿಂದೂಗಳು ಇದ್ದರು. ಈಗ 500 ಉಳಿದಿದ್ದಾರೆ. ಅವರಿಗೆ ಅವರ (ಧಾರ್ಮಿಕ) ನಂಬಿಕೆಗಳ ಪ್ರಕಾರ ಬದುಕುವ ಹಕ್ಕಿಲ್ಲವೇ? ಭಾರತವು ಒಂದಾಗಿರುವಾಗ ಅವರು ನಮ್ಮವರಾಗಿದ್ದರು. ಅವರು ನಮ್ಮ ಸಹೋದರರು ಮತ್ತು ಸಹೋದರಿಯರು ಮತ್ತು ತಾಯಂದಿರು. ಮೂರು ದೇಶಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿ ಯಾವುದೇ ಮಾನ್ಯ ದಾಖಲೆಯಿಲ್ಲದೆ ಗಡಿ ದಾಟಿದ ಅಲ್ಪಸಂಖ್ಯಾತರಿಗೆ ಸಿಎಎ “ವಿಶೇಷ ಕಾಯಿದೆ” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಕೇಜ್ರಿವಾಲ್ ವಿರುದ್ಧ ಎನ್‌ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಶಿಫಾರಸು: ಇದು ಬಿಜೆಪಿಯ ಮತ್ತೊಂದು ಪಿತೂರಿ ಎಂದ ಎಎಪಿ

ಈ ಕಾನೂನನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. 1947ರ ಆಗಸ್ಟ್ 15ರಂದು ಭಾರತ ಧರ್ಮದ ಆಧಾರದ ಮೇಲೆ ಮೂರು ಭಾಗಗಳಾಗಿ ವಿಭಜನೆಯಾಯಿತು. ಹಿಂದಿನ ಜನಸಂಘ ಮತ್ತು ಈಗಿನ ಬಿಜೆಪಿ ಧರ್ಮದ ಆಧಾರದ ಮೇಲೆ ದೇಶ ವಿಭಜನೆಗೆ ಯಾವಾಗಲೂ ವಿರುದ್ಧವಾಗಿದ್ದವು. ಧರ್ಮದ ಆಧಾರದಲ್ಲಿ ದೇಶ ವಿಭಜನೆಯಾದಾಗ ಭಾರತದಿಂದ ಪ್ರತ್ಯೇಕವಾದ ಪ್ರದೇಶದ ಅಲ್ಪಸಂಖ್ಯಾತರು ದೌರ್ಜನ್ಯ ಎದುರಿಸಿದರು. ಅವರನ್ನು ಮತಾಂತರ ಮಾಡಲಾಯಿತು. ಅಲ್ಪಸಂಖ್ಯಾತ ವರ್ಗದ ಮಹಿಳೆಯರಿಗೆ ಚಿತ್ರಹಿಂಸೆ ನೀಡಲಾಯಿತು. ಅವರು ಆಶ್ರಯಕ್ಕಾಗಿ ಭಾರತಕ್ಕೆ ಬಂದರು. ಆದರೆ ಅವರಿಗೆ ನಮ್ಮ ಪೌರತ್ವದ ಹಕ್ಕು ಸಿಕ್ಕಿದೆಯೇ? ಎಂದು ಪ್ರಶ್ನಿಸಿದರು.
ಶೋಷಿತ ಸಮುದಾಯಗಳಾದ ಶಿಯಾ, ಬಲೂಚ್ ಮತ್ತು ಅಹ್ಮದೀಯ ಮುಸ್ಲಿಮರ ಬಗ್ಗೆ ಕೇಳಿದಾಗ, “ವಿಶ್ವದಾದ್ಯಂತ, ಈ ಬಣವನ್ನು ಮುಸ್ಲಿಂ ಬಣ ಎಂದು ಪರಿಗಣಿಸಲಾಗಿದೆ. ಅಲ್ಲದೆ, ಮುಸ್ಲಿಮರು ಸಹ ಇಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು. ಸಂವಿಧಾನದಲ್ಲಿ ಇದಕ್ಕೆ ಅವಕಾಶವಿದೆ. ಅವರು ಅರ್ಜಿ ಸಲ್ಲಿಸಬಹುದು ಎಂದರು.
ಯಾವುದೇ ದಾಖಲೆಗಳಿಲ್ಲದವರ ಬಗ್ಗೆ ಏನು ಎಂದು ಕೇಳಿದಾಗ “ದಾಖಲೆಗಳಿಲ್ಲದವರಿಗೆ ನಾವು ಪರಿಹಾರವನ್ನು ಕಂಡುಕೊಳ್ಳುತ್ತೇವೆ. ಆದರೆ ನನ್ನ ಅಂದಾಜಿನ ಪ್ರಕಾರ, ಅವರಲ್ಲಿ ಶೇಕಡಾ 85 ಕ್ಕಿಂತ ಹೆಚ್ಚು ಜನರ ಬಳಿ ದಾಖಲೆಗಳಿವೆ” ಎಂದು ಹೇಳಿದರು.

ಸಿಎಎ ಕುರಿತಾದ ವಿಪಕ್ಷಗಳ ಆರೋಪಗಳ ಬಗ್ಗೆ ಹರಿಹಾಯ್ದ ಅಮಿತ್ ಶಾ, ಸಿಎಎ ಮುಸ್ಲಿಮರ ವಿರುದ್ಧವಾಗಿಲ್ಲ. ನಾನು ವಿಭಿನ್ನ ವೇದಿಕೆಗಳಲ್ಲಿ ಕನಿಷ್ಠ 41 ಬಾರಿ ಸಿಎಎ ಕುರಿತು ಮಾತನಾಡಿದ್ದೇನೆ. ಯಾವುದೇ ಪೌರತ್ವದ ಹಕ್ಕುಗಳನ್ನು ಹಿಂದಕ್ಕೆ ಪಡೆಯುವ ಯಾವುದೇ ನಿಯಮ ಇಲ್ಲ. ಹೀಗಾಗಿ ದೇಶದಲ್ಲಿನ ಅಲ್ಪಸಂಖ್ಯಾತರು ಆತಂಕ ಪಡುವ ಅಗತ್ಯವಿಲ್ಲ ಎಂಬುದನ್ನು ವಿವರವಾಗಿ ತಿಳಿಸಿದ್ದೇನೆ” ಎಂದರು.
ಸಿಎಎ ಟೀಕೆಯೇ ಸಂವಿಧಾನಬಾಹಿರ ಎಂದು ಹೇಳಿದ ಅಮಿತ್‌ ಶಾ ಅವರು, “ಸಿಎಎ ಕಾನೂನು 14ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ. ವಿಭಜನೆ ಕಾರಣದಿಂದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಉಳಿದ, ಧಾರ್ಮಿಕ ದೌರ್ಜನ್ಯಕ್ಕೆ ತುತ್ತಾಗಿ ಭಾರತಕ್ಕೆ ಬರಲು ನಿರ್ಧರಿಸಿದವರಿಗಾಗಿ ಇರುವ ಕಾನೂನು ಇದಾಗಿದೆ. ಇದರಲ್ಲಿ ಸ್ಪಷ್ಟ ಸಕಾರಣದ ವರ್ಗೀಕರಣವಿದೆ ಎಂದು ಸಮರ್ಥಿಸಿಕೊಂಡರು.

ಪ್ರಮುಖ ಸುದ್ದಿ :-   ನಮ್ಮ ಗಾಯದ ಮೇಲೆ ಉಪ್ಪು ಸವರಬೇಡಿ, ಕಸಬ್ ಹೊಗಳುವುದಿದ್ದರೆ ಪಾಕಿಸ್ತಾನಕ್ಕೆ ಹೋಗಿ": 26/11 ದಾಳಿ ಬಗ್ಗೆ ಕಾಂಗ್ರೆಸ್‌ ನಾಯಕನ ಹೇಳಿಕೆಗೆ ಕಸಬ್ ವಿಚಾರಣೆ ಸಾಕ್ಷಿಯ ಆಕ್ಷೇಪ

ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಅಥವಾ ಅರವಿಂದ ಕೇಜ್ರಿವಾಲ್ ಸೇರಿ ಪ್ರತಿಪಕ್ಷ ನಾಯಕರು ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರೆ. ಸಿಎಎ ಜಾರಿಗೆ ತರುವುದಾಗಿ ಹಾಗೂ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡುವುದಾಗಿ 2019ರ ಪ್ರಣಾಳಿಕೆಯಲ್ಲಿ ಬಿಜೆಪಿ ಸ್ಪಷ್ಟಪಡಿಸಿತ್ತು. ಆ ಭರವಸೆಯಂತೆ 2019ರಲ್ಲಿ ಸಂಸತ್ತಿನ ಎರಡೂ ಸದನಗಳಲ್ಲಿ ಸಿಎಎ ಅಂಗೀಕರಿಸಲಾಗಿತ್ತು. ಆದರೆ ಕೋವಿಡ್ ಕಾರಣದಿಂದ ಅದರ ಜಾರಿ ವಿಳಂಬಗೊಂಡಿತ್ತು” ಎಂದು ಹೇಳಿದರು.
ಸಿಎಎ ಮೂಲಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದ ಮಮತಾ ಬ್ಯಾನರ್ಜಿ ಆರೋಪಕ್ಕೆ ತಿರುಗೇಟು ನೀಡಿದ ಅಮಿತ್‌ ಶಾ, “ರಾಜಕೀಯ ಮಾಡಲು ಸಾಕಷ್ಟು ವೇದಿಕೆಗಳಿವೆ. ಈ ಕಾನೂನಿನಲ್ಲಿ ಯಾವುದೇ ಭಾರತೀಯರ ಪೌರತ್ವ ಕಿತ್ತುಕೊಳ್ಳುವ ಒಂದೇ ಒಂದು ನಿಯಮವನ್ನು ತೋರಿಸುವಂತೆ ನಾನು ಅವರಿಗೆ ಸವಾಲು ಹಾಕುತ್ತೇನೆ ಎಂದು ವಾಗ್ದಾಳಿ ನಡೆಸಿದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement