ವೀಡಿಯೊಗಳು…| ಅದ್ಧೂರಿಯಿಂದ ನಡೆದ ಶಿರಸಿ ಮಾರಿಕಾಂಬಾ ರಥೋತ್ಸವ ; ಭಕ್ತ ಸಾಗರದ ಮಧ್ಯೆ ಜಾತ್ರಾ ಗದ್ದುಗೆಗೆ ಆಗಮಿಸಿದ ಮಾರಿಕಾಂಬಾ ದೇವಿ

ಶಿರಸಿ: ರಾಜ್ಯದ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾದ ಶಿರಸಿಯ ಮಾರಿಕಾಂಬಾ ಜಾತ್ರೆಯ ಮಾರಿಕಾಂಬಾ ದೇವಿಯ ರಥೋತ್ಸವ ಜನಸ್ತೋಮದ ಮಧ್ಯೆ ಬುಧವಾರ ನಡೆಯಿತು.
ಭಕ್ತಿ ಭಾವ ಹಾಗೂ ಭಕ್ತರ ಭಾವೋನ್ಮಾದ, ಜಯ ಘೋಷದ ಮಧ್ಯೆ ಬುಧವಾರ ಬೆಳಿಗ್ಗೆ ರಥೋತ್ಸವ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ನಸುಕಿನಲ್ಲಿ ರಥಾರೂಢಳಾದ ಸರ್ವಾಲಂಕಾರಭೂಷಿತೆ ಮಾರಿಕಾಂಬಾ ದೇವಿಯ ಶೋಭಾಯಾತ್ರೆ ಮೂಲಕ ಬಿಡಕಿಬೈಲಿನಲ್ಲಿ ಜಾತ್ರಾ ಗದ್ದುಗೆಗೆ ತೆರಳಿದಳು.
ಬುಧವಾರ ಬೆಳಿಗ್ಗೆ ನಗರದ ಬನವಾಸಿ ರಸ್ತೆಯಲ್ಲಿನ ಮಾರಿಕಾಂಬಾ ದೇವಸ್ಥಾನದಿಂದ ಹೊರಟ ದೇವಿಯ ರಥಕ್ಕೆ ರಸ್ತೆಯ ಇಕ್ಕೆಲದಲ್ಲಿ ನಿಂತು ಭಕ್ತರು ವೀಕ್ಷಿಸಿ ಬಾಳೆ ಹಣ್ಣು, ಹರಕೆ ಕೋಳಿ, ಕಡಲೆ‌ ಎಸೆದು ಹರಕೆ ಸಲ್ಲಿಸಿದರು.

ವಿವಿಧ ಧಾರ್ಮಿಕ ಕಾರ್ಯಗಳ ಬಳಿಕ ಮಾರಿಕಾಂಬಾ ದೇವಿಯನ್ನು 7:25ಕ್ಕೆ ರಥದಲ್ಲಿ ಕುಳ್ಳಿರಿಸಲಾಯಿತು. ಬೆಳಿಗ್ಗೆ 8.59ರ ವೇಳೆಗೆ ರಥೋತ್ಸವದ ಶೋಭಾಯಾತ್ರೆ ಆರಂಭವಾಯಿತು. ಮಾರಿಕಾಂಬಾ ದೇವಾಲಯದ ಎದುರಿನಿಂದ ಪ್ರಾರಂಭವಾದ ಶೋಭಾಯಾತ್ರೆಯಲ್ಲಿ ನಾಡಿನ ವಿವಿಧೆಡೆಯ ಅಸಂಖ್ಯಾತ ಭಕ್ತರು ಪಾಲ್ಗೊಂಡಿದ್ದರು. ಮಾರಿಕಾಂಬೆ ದೇವಿ ಸಕಲ ಆಭರಣಗಳನ್ನು ತೊಟ್ಟು ಕಲ್ಯಾಣಿಯಾಗಿ, ರಥದಲ್ಲಿ ಕುಳಿತು ಕಿಕ್ಕಿರಿದು ಸೇರುವ ಭಕ್ತರ ನಡುವೆ ನಿಧಾನವಾಗಿ ಸಾಗಿದಳು.

ಮಾರಿಕಾಂಬಾ ದೇವಿ ಮೆರವಣಿಗೆಯಲ್ಲಿ ಸಾಗುವಾಗ ಜನರು ದುಡ್ಡು, ಬಾಳೆಹಣ್ಣನ್ನು ರಥಕ್ಕೆ ಎಸೆದು ಕೃತಾರ್ಥರಾದರೆ, ಲಂಬಾಣಿ ಮಹಿಳೆಯರು ಸೋಬಾನೆ ಪದ ಹೇಳುತ್ತ ಸಾಗಿದರು. ಮಧ್ಯಾಹ್ನ ದೇವಿ ಬಿಡಕಿ ಬಯಲಿನಲ್ಲಿ ಗದ್ದುಗೆ ಆಗಮಿಸಿ ಅಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಾಳೆ.

ಮಾರ್ಚ್‌ 21 ರಂದು ಬೆಳಗ್ಗೆ 5 ರಿಂದ ಜಾತ್ರಾ ಗದ್ದುಗೆಯಲ್ಲಿ ದೇವಿ ದರ್ಶನಕ್ಕೆ ಸೇವಾ ಸ್ವೀಕಾರ ಆರಂಭವಾಗಲಿದೆ. 27ರಂದು ಬೆಳಗ್ಗೆ 10:15ಕ್ಕೆ ಸೇವೆ ಮುಗಿಯಲಿದೆ. ಹಾಗೂ 10:41ಕ್ಕೆ ಜಾತ್ರೆ ಮುಗಿಯಲಿದೆ. ಏ.9ರಂದು ಬೆಳಗ್ಗೆ 7.51ರಿಂದ 8.03 ಯುಗಾದಿಗೆ ದೇವಾಲಯದಲ್ಲಿ ದೇವಿಯ ಪುನರ್‌ ಪ್ರತಿಷ್ಠೆ ಆಗಲಿದೆ.

ಪ್ರಮುಖ ಸುದ್ದಿ :-   ಅಂಜಲಿ ಹತ್ಯೆ ಪ್ರಕರಣ : ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಸಹೋದರಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement