ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ನಿಧನ

ಧಾರವಾಡ: ಹಿರಿಯ ಸಾಹಿತಿ ಗುರುಲಿಂಗ ಕಾಪಸೆ (96 ವರ್ಷ) ಮಂಗಳವಾರ ತಡರಾತ್ರಿ ನಗರದ ನಿರ್ಮಲಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಕನ್ನಡ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾಗಿದ್ದರು. ಗುರುಲಿಂಗ ಕಾಪಸೆ ಅವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
1928ರ ಎಪ್ರಿಲ್ 2ರಂದು ಜನಿಸಿದ ಗುರುಲಿಂಗ ಕಾಪಸೆ ಅವರು ಮೂಲತಃ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲೋಣಿ ಬಿಕೆ ಗ್ರಾಮದವರು. ತಮ್ಮ ಬಡತನದ ಪರಿಸ್ಥಿತಿಯಲ್ಲೇ ಗುರುಲಿಂಗ ಕಾಪಸೆಯವರು “ರೇಲೋಣಿಯಲ್ಲಿ ನಾಲ್ಕನೇ ತರಗತಿಯವರೆಗೆ ಶಿಕ್ಷಣವನ್ನು ಪೂರೈಸಿದರು. ನಂತರ ಎರಡು ವರ್ಷ ಹೊಲ-ಮನೆ ಕೆಲಸದಲ್ಲಿ ತೊಡಗಿದರು. ಪ್ರತಿಭಾವಂತ “ವಿದ್ಯಾರ್ಥಿಯಾಗಿದ್ದರಿಂದ ಗುರುಗಳ ಪ್ರೋತ್ಸಾಹದಿಂದ ಕಾಪಸೆಯವರು ಚಡಚಣ ಮತ್ತು ಬರಡೋಲಗಳಲ್ಲಿ ಶಿಕ್ಷಣ ಮುಂದುವರೆಸಿದರು. 1945ರಲ್ಲಿ ಮುಲ್ಕಿ ಪರೀಕ್ಷೆಯನ್ನು ಪಾಸು ಮಾಡಿದರು. 1953ರಲ್ಲಿ ಹಿಂದಿ ಭಾಷೆ ತೆಗೆದುಕೊಂಡು ಪೂನಾ ಬೋರ್ಡಿನಿಂದ ಮೆಟ್ರಿಕ್‌ ಪೂರ್ಣಗೊಳಿಸಿದರು.

1945ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿಯೇ ತಮ್ಮೂರಿನಲ್ಲಿ ಶಿಕ್ಷಕರಾಗಿ ಸೇವೆ ಆರಂಭ ಮಾಡಿದ ಕಾಪಸೆ ನಂತರ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದರು. ಧಾರವಾಡದ ಸಪ್ತಾಪುರ ದುರ್ಗಾ ಕಾಲೋನಿಯಲ್ಲಿ ನೆಲೆಸಿದ್ದರು.
ಮಕ್ಕಳ ಸಾಹಿತ್ಯದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದರು. ಮಧುರ ಚೆನ್ನರ ಜೀವನ ಹಾಗೂ ಕೃತಿಗಳ ಕುರಿತ ಮಹಾಪ್ರಬಂಧ ರಚಿಸಿದ್ದರು. ಮಧುರ ಚೆನ್ನ, ಅಕ್ಕಮಹಾದೇವಿ, ಅರವಿಂದರು, ಬಸವೇಶ್ವರ, ಹಲಸಂಗಿ ಗೆಳೆಯರು, ಶಾಲ್ಮಲೆಯಿಂದ ಗೋದಾವರಿ ವರೆಗೆ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಮರಾಠಿಯಿಂದ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಕವಿ ರವಿಂದ್ರರು, ಶಿ.ಶಿ.ಬಸವನಾಳ ಎಂಬ ಕೃತಿಗಳು ಸೇರಿದಂತೆ ಮಕ್ಕಳ ಸಾಹಿತ್ಯದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ದ.ರಾ.ಬೇಂದ್ರೆ, ಮಧುರ ಚೆನ್ನ ಸೇರಿ ಹಲವು ಸಾಹಿತಿಗಳ ಒಡನಾಡಿಯಾಗಿದ್ದ ಅವರು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಗುರುಲಿಂಗ ಕಾಪಸೆಯವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ವರದರಾಜ ಆದ್ಯ ಪ್ರಶಸ್ತಿ, ಆನಂದಕಂದ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement