ಸರ್ವರಿಗೂ ಕ್ರೋಧಿ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು

ದೆಹಲಿ ಸಿಎಂ ಕೇಜ್ರಿವಾಲಗೆ ಏಪ್ರಿಲ್ 15ರ ವರೆಗೆ ನ್ಯಾಯಾಂಗ ಬಂಧನ

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಏಪ್ರಿಲ್ 15ರ ವರೆಗೆ ದೆಹಲಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಈ ಆದೇಶ ನೀಡಿದ್ದಾರೆ.
ಜೈಲಿನಲ್ಲಿ ಭಗವದ್ಗೀತೆ, ರಾಮಾಯಣ ಹಾಗೂ ನೀರಜಾ ಚೌಧರಿ ಅವರ ಕೃತಿ ಹೌ ಪ್ರೈಮ್‌ ಮಿನಿಸ್ಟರ್ಸ್‌ ಡಿಸೈಡ್‌ ಎಂಬ ಮೂರು ಕೃತಿಗಳನ್ನು ಓದಲು ಕೇಜ್ರಿವಾಲ್ ಅವರಿಗೆ ಅವಕಾಶ ನೀಡುವಂತೆ ಅವರ ಪರ ವಕೀಲರು ಅರ್ಜಿ ಸಲ್ಲಿಸಿದರು. ಜೊತೆಗೆ ವಿಶೇಷ ಆಹಾರ ಸೇವನೆಗೆ ಮತ್ತು ಧಾರ್ಮಿಕ ಲಾಕೆಟ್ ಧರಿಸಲು ಅನುಮತಿ ಕೋರಿದರು.

ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಬಂಧಿಸಲಾಗಿತ್ತು. ಆ ಮೂಲಕ ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಹಾಲಿ ಮುಖ್ಯಮಂತ್ರಿಯೊಬ್ಬರನ್ನು ಜೈಲಿಗೆ ಕಳುಹಿಸಲಾಗಿತ್ತು. ಬಿಆರ್‌ಎಸ್‌ ಪಕ್ಷದ ನಾಯಕಿ ಕೆ ಕವಿತಾ, ಎಎಪಿ ನಾಯಕರಾದ ಸತ್ಯೇಂದ್ರ ಜೈನ್, ಮನೀಶ ಸಿಸೋಡಿಯಾ, ಸಂಜಯ್ ಸಿಂಗ್ ಕೂಡ ಈ ಹಗರಣದಲ್ಲಿ ಆರೋಪಿಗಳಾಗಿದ್ದಾರೆ.
ಇ,ಡಿ. ಕಸ್ಟಡಿ ಅವಧಿ ಇಂದು, ಸೋಮವಾರ ಮುಗಿಯಲಿದ್ದ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ಅವರನ್ನು ರೌಸ್‌ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಪ್ರಮುಖ ಸುದ್ದಿ :-   ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಹೊರಗೆ ಗುಂಡಿನ ದಾಳಿ

ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, ಮುಖ್ಯಮಂತ್ರಿ ಕೇಜ್ರಿವಾಲ್‌ ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಹೇಳಿದರು. ಆದರೆ “ನ್ಯಾಯಾಂಗ ಬಂಧನದ ಅರ್ಜಿಗೆ ಸಂಬಂಧಿಸಿದಂತೆ ಈ ವಾದ ಎಷ್ಟು ಪ್ರಸ್ತುತ” ಎಂದು ನ್ಯಾಯಾಲಯ ಪ್ರಶ್ನಿಸಿತು. ನಂತರದ ಹಂತದಲ್ಲಿ ಕೇಜ್ರಿವಾಲ್‌ ಅವರನ್ನು ಇ ಡಿ ವಶಕ್ಕೆ ನೀಡುವಂತೆ ಕೇಳುತ್ತಿರುವುದಾಗಿ ರಾಜುಅವರು ಉತ್ತರಿಸಿದರು.
ತಮ್ಮ ಬಂಧನ ಹಾಗೂ ವಿಚಾರಣಾ ನ್ಯಾಯಲಯ ತಮ್ಮನ್ನು ಇ.ಡಿ. ವಶಕ್ಕೆ ಒಪ್ಪಿಸಿದ್ದ ಆದೇಶ ಪ್ರಶ್ನಿಸಿ ಕೇಜ್ರಿವಾಲ್‌ ಅವರು ಸಲ್ಲಿಸಿದ್ದ ಅರ್ಜಿಗೆ ದೆಹಲಿ ಹೈಕೋರ್ಟ್‌ ಮಧ್ಯಂತರ ಪರಿಹಾರ ನೀಡಲು ಕಳೆದ ಬುಧವಾರ ನಿರಾಕರಿಸಿತ್ತು. ಅಲ್ಲದೆ ಏಪ್ರಿಲ್ 2ರೊಳಗೆ ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ಇ.ಡಿ.ಗೆ ಸೂಚಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement