ಸರ್ವರಿಗೂ ಕ್ರೋಧಿ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು

ಮಂಡ್ಯ : ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಸುಮಲತಾ ಘೋಷಣೆ ; ಮುಂದಿನ ನಡೆ ಬಗ್ಗೆ ಹೇಳಿದ್ದೇನು..?

ಮಂಡ್ಯ : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಿಲ್ಲ ಎಂದು ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ ಘೋಷಣೆ ಮಾಡಿದ್ದಾರೆ. ಹಾಗೂ ಇದೇ ವೇಳೆ ಬಿಜೆಪಿ ಸೇರುವುದಾಗಿ ಪ್ರಕಟಿಸಿದ್ದಾರೆ.
ಮೈತ್ರಿ ಧರ್ಮ ಪಾಲನೆಗೆ ಮುಂದಾಗಿರುವ ಸುಮಲತಾ ಅಂಬರೀಶ ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಬೆಂಬಲ ಘೋಷಿಸಿದ್ದಾರೆ.
ಮಂಡ್ಯದಲ್ಲಿ ಬುಧವಾರ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಬುಧವಾರ ಬೆಂಬಲಿಗರ ಸಭೆ ನಡೆಸಿ ಮಾತನಾಡಿದ ಅವರು, ಎಂಪಿ, ಎಂಎಲ್‌ಎಗೆ ಟಿಕೆಟ್‌ ಸಿಗದಿದ್ದರೆ ಅನೇಕರು ಪಕ್ಷ ಬಿಟ್ಟು ಹೋಗುತ್ತಾರೆ. ಆದರೆ ಎಂಪಿ ಕ್ಷೇತ್ರ ಬಿಟ್ಟುಕೊಟ್ಟು ಬಿಜೆಪಿ ಸೇರುವ ನಿರ್ಧಾರ ಮಾಡಿದ್ದೇನೆ. ಮೋದಿ ಅವರ ಕಾರ್ಯಕ್ಷಮತೆ ಮೆಚ್ಚಿ ನಾನು ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದು ತಿಳಿಸಿದರು. 2019ರಲ್ಲಿ ಯಾವ ರೀತಿ ಸವಾಲುಗಳು ಹಾಗೂ ಗೊಂದಲಗಳಿತ್ತೋ ಅದಕ್ಕಿಂತ ಹೆಚ್ಚಿನ ಸವಾಲುಗಳು ಹಾಗೂ ಗೊಂದಲಗಳು ಇವೆ. ಬಿಜೆಪಿಯವರು ನನ್ನ ಬೆಂಬಲ ಕೇಳಿದ್ದರು, ಅದಕ್ಕಾಗಿ 2023ರ ವಿಧಾನಸಭಾ ಚುನಾವಣೆಯಲ್ಲಿ ನಾನು ಬಿಜೆಪಿಗೆ ಬೆಂಬಲ ನೀಡಿದ್ದೆ ಎಂದು ತಿಳಿಸಿದರು.

ನಾನು ಕೊನೆಯ ಗಳಿಗೆಯವರೆಗೂ ಬಿಜೆಪಿ ಮಂಡ್ಯ ಕ್ಷೇತ್ರವನ್ನು ಉಳಿಸಿಕೊಳ್ಳಲಿ ಎಂದು ಪ್ರಯತ್ನ ನಡೆಸಿದೆ. ಬಿಜೆಪಿ ಹೈಕಮಾಂಡ್‌ ಬೆಂಗಳೂರು ಉತ್ತರ, ಮೈಸೂರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ಆಯ್ಕೆಯ ಆಫರ್‌ ಅನ್ನು ನನ್ನ ಮುಂದೆ ಇಟ್ಟಿತು. ಆದರೆ, ನಾನು ಗೆದ್ದರೂ ಮಂಡ್ಯ, ಸೋತರೂ ಮಂಡ್ಯದಲ್ಲಿಯೇ ಎಂದು ಹೇಳಿದ್ದೆ. ನಾನು ಮಂಡ್ಯ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ನಾನು ಸ್ವಾರ್ಥ ರಾಜಕಾರಣವನ್ನು ಕಲಿತಿಲ್ಲ. ಅಂಬರೀಶ ಅವರು ಕೂಡ ಯಾವುದಕ್ಕೂ ಆಸೆ ಪಟ್ಟು ಹಿಂದೆ ಬಿದ್ದವರಲ್ಲ ಎಂದು ಹೇಳಿದರು. ನನ್ನ ರಾಜಕೀಯ ಪ್ರವೇಶ ಆಕಸ್ಮಿಕ. ಅಂಬರೀಶ ಅವರ ದಶಕಗಳ ರಾಜಕೀಯದ ಉದ್ದೇಶಗಳನ್ನು ಮುಂದುವರಿಸಬೇಕು ಎಂದು ನಾನು ರಾಜಕೀಯಕ್ಕೆ ಬಂದೆ. ನಾನು ಪಕ್ಷೇತರ ಆಗಿ ನಿಂತಾಗ ನನ್ನ ಬೆಂಬಲಕ್ಕೆ ನಿಂತು ನನ್ನ ಗೆಲ್ಲಿಸಿದೀರಿ ಎಂದರು.
ಬಿಜೆಪಿಯವರು ನನ್ನನ್ನು ಗೌರವದಿಂದ ಹಾಗೂ ವಿಶ್ವಾಸದಿಂದ ನಡೆಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರೇ ಸ್ವತಃ ನನ್ನನ್ನು ಪಕ್ಷಕ್ಕೆ ಕರೆದಿದ್ದಾರೆ. ಆದ್ದರಿಂದಲೇ ನಾನು ಬಿಜೆಪಿಗೆ ಸೇರುತ್ತಿದ್ದೇನೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಿಲ್ಲ. ನಾನು ಮಂಡ್ಯವನ್ನು ಎಂದಿಗೂ ಬಿಡುವುದಿಲ್ಲ. ನನ್ನ ಜೊತೆ ಮುಂದೆಯೂ ನಿಲ್ಲುತ್ತೀರಿ ಎಂದು ಭಾವಿಸುತ್ತೇನೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ವಿಶ್ವದ ಅತ್ಯಂತ ಹಿರಿಯ ಸಂಯೋಜಿತ ಅವಳಿಗಳು 62ನೇ ವಯಸ್ಸಿನಲ್ಲಿ ನಿಧನ

ಮೊನ್ನೆ ಬೆಂಗಳೂರಿನಲ್ಲಿ ಸಭೆಯಲ್ಲಿ ಹಲವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಂದು ಹೇಳಿದ್ದರು. ಹಲವರು ಕಾಂಗ್ರೆಸ್‌ಗೆ ಬೆಂಬಲ ಕೊಡಿ ಎಂದು ಹೇಳಿದ್ದರು, ಕೆಲವರು ನಾನು ಯಾವುದೇ ನಿರ್ಧಾರ ತೆಗೆದುಕೊಂಡರು ಬೆಂಬಲ ಕೊಡುತ್ತೇವೆ ಎಂದು ಹೇಳಿದ್ದರು. ನನಗೆ ಬೇರೆ ಕಡೆ ಆಫರ್‌ ನೀಡಿದರೂ ನಾನು ಒಪ್ಪಲಿಲ್ಲ.
ಕಾಂಗ್ರೆಸ್‌ನ ಪ್ರಮುಖರೊಬ್ಬರು ಸುಮಲತಾ ಅವರ ಅವಶ್ಯಕತೆ ನಿನ್ನೆಯೂ ಇರಲಿಲ್ಲ, ಇವತ್ತಿಗೂ ಇಲ್ಲ, ನಾಳೆಯೂ ಇರುವುದಿಲ್ಲ ಎಂದು ಹೇಳಿದ್ದಾರೆ. ನಮಗೆ ಬೆಲೆ ಇಲ್ಲದ ಜಾಗಕ್ಕೆ ಹೋಗುವುದು ಹೇಗೆ..? ನನಗೆ ಗೌರವ ಇಲ್ಲದ ಕಡೆ ಹೋಗಿ ಎಂದು ಒತ್ತಾಯಿಸಬೇಡಿ ಎಂದು ನಾನು ಮನವಿ ಮಾಡುತ್ತೇವೆ. ಮಂಡ್ಯದ ಗಂಡು ಅಂಬರೀಶ ಸ್ವಾಭಿಮಾನದ ಪ್ರತೀಕ, ಅವರಂತೆ ನಾನು ಕೂಡ ಸ್ವಾಭಿಮಾನಿ ಎಂದು ಹೇಳಿದರು.
ಅಂಬರೀಶ ಅವರು ಎಲ್ಲಿದ್ದಾರೋ ಅಲ್ಲಿಂದಲೇ ನನ್ನ ನಿರ್ಧಾರ ಒಪ್ಪುತ್ತಾರೆ ಎಂದು ನಂಬಿದ್ದೇನೆ. ಮಂಡ್ಯದ ಎಲ್ಲರ ಋಣವನ್ನು ನಾನು ತೀರಿಸಲು ಸಂಸದೆಯಾಗಿ ಐದು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ನನ್ನ ಮನೆ ಮಕ್ಕಳಾದ ದರ್ಶನ್‌ ಹಾಗೂ ಯಶ ಅವತ್ತು ನನ್ನ ಪರ ಹೋರಾಟ ಮಾಡಿದ್ದಾರೆ. ಅವರ ಕೆಲಸವನ್ನು ನಾನು ಸ್ಮರಿಸಲೇಬೇಕು ಎಂದು ಹೇಳಿದರು.

ಪ್ರಮುಖ ಸುದ್ದಿ :-   ಬಿಜೆಪಿ ಪ್ರಣಾಳಿಕೆ ಬಿಡುಗಡೆ : ವೃದ್ಧರಿಗೆ ಉಚಿತ ಚಿಕಿತ್ಸೆ, ಬಡವರಿಗೆ ಉಚಿತ ಪಡಿತರ, ಏಕರೂಪ ನಾಗರಿಕ ಸಂಹಿತೆ ಜಾರಿ, ಮುದ್ರಾ ಸಾಲ ಯೋಜನೆ ಮೊತ್ತ ಹೆಚ್ಚಳ, ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ ...

 

4.8 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement