ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

ನವದೆಹಲಿ: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾರ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102 ಸ್ಥಾನಗಳಿಗೆ ನಡೆಯಿತು. ಒಟ್ಟಾರೆ ಮತದಾನದ ಪ್ರಮಾಣವು ರಾತ್ರಿ 9 ಗಂಟೆಯವರೆಗೆ 62.37 ಪ್ರತಿಶತದಷ್ಟು ದಾಖಲಾಗಿದೆ. ಪಶ್ಚಿಮ ಬಂಗಾಳ ಮತ್ತು ಮಣಿಪುರದ ಕೆಲವು ಭಾಗಗಳಲ್ಲಿ ಹಿಂಸಾಚಾರ ವರದಿಯಾಗಿದೆ ಮತ್ತು ಮತದಾನದ ಪ್ರಮಾಣವು 2019 ರ ಲೋಕಸಭೆ ಚುನಾವಣೆಯಲ್ಲಿ ನಡೆದ ಮತದಾನದ ಪ್ರಮಾಣಕ್ಕಿಂತ ಕಡಿಮೆಯಾಗಿದೆ.
ಕೂಚ್ ಬೆಹಾರ್ ಜಿಲ್ಲೆಯ ಸಿತಾಲ್ಕುಚಿಯಲ್ಲಿ ಹಿಂಸಾಚಾರದ ವರದಿಯಾಗಿದೆ. ಮಣಿಪುರದ ಥಮನ್‌ಪೋಕ್ಪಿಯ ಮತಗಟ್ಟೆಯೊಂದರ ಬಳಿ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಮತ್ತು ಇರೋಸೆಂಬಾ ಮತಗಟ್ಟೆಯಲ್ಲೂ ಹಿಂಸಾಚಾರ ವರದಿಯಾಗಿದೆ. ಅದರ ಹೊರತಾಗಿಯೂ, ಮತದಾನವು ಮುಕ್ತಾಯವಾದಾಗ ಮಣಿಪುರ (68.62%) ಮತ್ತು ಪಶ್ಚಿಮ ಬಂಗಾಳ (77.57%)ದಲ್ಲಿ ಅತಿ ಹೆಚ್ಚು ಮತದಾನವಾಗಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸತತ ಮೂರನೇ ಅವಧಿಗೆ ಪ್ರಯತ್ನಿಸುತ್ತಿದೆ, ವಿಪಕ್ಷಗಳು ಇಂಡಿಯಾ ಮೈತ್ರಿಕೂಟದ ಅಡಿಯಲ್ಲಿ ಪೈಪೋಟಿ ನೀಡಲು ಪ್ರಯತ್ನಿಸುತ್ತಿವೆ. ಎಲ್ಲಾ 39 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದ ತಮಿಳುನಾಡಿನತ್ತ ಎಲ್ಲರ ಕಣ್ಣು ನೆಟ್ಟಿದೆ. ಪ್ರಧಾನಿ ಮೋದಿ ವ್ಯಾಪಕ ಪ್ರಚಾರ ನಡೆಸಿರುವ ದಕ್ಷಿಣ ರಾಜ್ಯದಲ್ಲಿ ಬಿಜೆಪಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದೆ.
21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟಾರೆ ಮತದಾನದ ಪ್ರಮಾಣವು ರಾತ್ರಿ 9 ಗಂಟೆಯವರೆಗೆ 62.37 ಪ್ರತಿಶತದಷ್ಟು ದಾಖಲಾಗಿದೆ ಮತ್ತು ತ್ರಿಪುರಾದಲ್ಲಿ ಅತಿ ಹೆಚ್ಚು ಶೇಕಡಾ 80.17 ರಷ್ಟು ಮತದಾನವಾಗಿದೆ. ಬಿಹಾರದಲ್ಲಿ ಅತಿ ಕಡಿಮೆ ಅಂದರೆ ಶೇ.48.5ರಷ್ಟು ಮತದಾನವಾಗಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಹಂತದ ಮತದಾನದ ಪ್ರಮಾಣಕ್ಕಿಂತ ಈಸಲದ ಮತದಾನದಲ್ಲಿ ಕುಸಿತವಾಗಿದೆ. 2019ರಲ್ಲಿ 69.43 ರಷ್ಟು ಮತದಾನವಾಗಿತ್ತು. ಆಗ ಕೆಲವು ಕ್ಷೇತ್ರಗಳು ಭಿನ್ನವಾಗಿದ್ದವು ಮತ್ತು ಚುನಾವಣೆಗೆ ಹೋದ ಒಟ್ಟು ಸ್ಥಾನಗಳ ಸಂಖ್ಯೆ 91 ಆಗಿತ್ತು.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ : ಸ್ವಾತಿ ಮಲಿವಾಲ್ ಹೊಸ ವೀಡಿಯೊ ಬಿಡುಗಡೆ ಮಾಡಿದ ಎಎಪಿ : ನಿಜವಾಗಿ ನಡೆದದ್ದು ಏನು..?

ಮೊದಲ ಹಂತದಲ್ಲಿ, ತಮಿಳುನಾಡು (39), ಉತ್ತರಾಖಂಡ (5), ಅರುಣಾಚಲ ಪ್ರದೇಶ (2), ಮೇಘಾಲಯ (2), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (1), ಮಿಜೋರಾಂ (1), ನಾಗಾಲ್ಯಾಂಡ್ (1), ಪುದುಚೇರಿ (1), ಸಿಕ್ಕಿಂ (1) ಮತ್ತು ಲಕ್ಷದ್ವೀಪ (1) ಎಲ್ಲಾ ಸ್ಥಾನಗಳಿಗೆ ಮತದಾನ ನಡೆದಿದೆ. ಅಲ್ಲದೆ, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5, ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಮಣಿಪುರದಲ್ಲಿ 2 ಮತ್ತು ತ್ರಿಪುರಾ, ಛತ್ತೀಸ್‌ಗಢ ಹಾಗೂ ಜಮ್ಮು ಮತ್ತು ಕಾಶ್ಮೀರದ ತಲಾ ಒಂದು ಸ್ಥಾನಗಳಲ್ಲಿ ಮತದಾನ ನಡೆದಿದೆ. ಅದೇ ಸಮಯದಲ್ಲಿ, ಅರುಣಾಚಲ ಪ್ರದೇಶದ 60 ಮತ್ತು ಸಿಕ್ಕಿಂನಲ್ಲಿ 32 ಸ್ಥಾನಗಳಿಗೆ ವಿಧಾನಸಭೆ ಚುನಾವಣೆಗಳು ನಡೆದವು.

ಶುಕ್ರವಾರ ಮತದಾನ ನಡೆದ 102 ಸ್ಥಾನಗಳಲ್ಲಿ, 2019 ರ ಚುನಾವಣೆಯಲ್ಲಿ ಎನ್‌ಡಿಎ 41 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ ನೇತೃತ್ವದ ಯುಪಿಎ 45 ಕ್ಷೇತ್ರಗಳಲ್ಲಿ ವಿಜಯಶಾಲಿಯಾಗಿತ್ತು.
ಒಟ್ಟಾರೆಯಾಗಿ, ಚುನಾವಣಾ ಆಯೋಗವು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102 ಸ್ಥಾನಗಳಲ್ಲಿ 1.87 ಲಕ್ಷ ಮತಗಟ್ಟೆಗಳಲ್ಲಿ 18 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿತ್ತು ಏಳು ಹಂತದ ಚುನಾವಣೆಗಳು ಜೂನ್ 1ರಂದು ಮುಕ್ತಾಯಗೊಳ್ಳಲಿದ್ದು, ಜೂನ್‌ 4 ರಂದು ಫಲಿತಾಂಶ ಪ್ರಕಟವಾಗಲಿದೆ.

ಪ್ರಮುಖ ಸುದ್ದಿ :-   ಪವಿತ್ರಾ ಜಯರಾಮ ಸಾವಿನ ಬೆನ್ನಲ್ಲೇ ಗೆಳೆಯ-ಕಿರುತೆರೆ ನಟ ಚಂದು ಆತ್ಮಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement