ಶಿರಸಿ : ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯಾದ್ಯಂತ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಸಮಾಜಘಾತುಕ ಶಕ್ತಿಗಳು ಹಾಗೂ ದೇಶದ್ರೋಹಿ ಚಟುವಟಿಕೆಗಳ ಮನಸ್ಥಿತಿಗೆ ಕಾಂಗ್ರೆಸ್ ಸರ್ಕಾರದ ನೀತಿಗಳು ಪುಷ್ಟಿ ನೀಡುತ್ತಿರುವಂತೆ ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
ಶಿರಸಿ ನಗರದ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಬಿಜೆಪಿಯ ಬೃಹತ್ ಚುನಾವಣಾ ಸಮಾವೇಶದಲ್ಲಿ ಮಾತನಾಡಿದರ ಅವರು, ಇತ್ತೀಚೆಗೆ ನಡೆದ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆ ಪ್ರಸ್ತಾಪಿಸಿ ಕರ್ನಾಟಕದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಲು ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂದು ವಾಗ್ದಾಳಿ ನಡೆಸಿದರು.
ಕಾಲೇಜು ಕ್ಯಾಂಪಸ್ ಒಳಗೇ ಹಾಡು ಹಗಲೇ ಅಂಥ ಹೇಯ ಕತ್ಯವನ್ನು ಮಾಡಲು ಅಪರಾಧಿಗೆ ಧೈರ್ಯ ಬಂದಿದ್ದಾರೂ ಹೇಗೆ..? ಯಾವ ಕಾರಣದಿಂದ ಬಂತು..? ವೋಟ್ ಬ್ಯಾಂಕ್ ಹಸಿವಿನ ಮನಸ್ಥಿತಿಯವರು ತನ್ನ ಬಂಬಲಕ್ಕೆ ಬರುತ್ತಾರೆ ಎಂದು ತಿಳಿದೇ ಆತ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದರು.
ದೇಶದಲ್ಲಿ ಬಿಜೆಪಿ ಸರಕಾದ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಎಲ್ಲಿ ನೋಡಿದರಲ್ಲಿ ಬಾಂಬ್ ಸ್ಫೋಟದ ಸುದ್ದಿ ಬರುತ್ತಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎಲ್ಲವನ್ನೂ ಬಂದ್ ಮಾಡಿಸಿದ್ದೇವೆ. ಅಂತಹ ಕೃತ್ಯ ಮಾಡಿದರೆ ನುಗ್ಗಿ ಹೊಡೆಯುತ್ತೇವೆ. ಶಾಂತಿ ಸುವ್ಯವಸ್ಥೆ ಕಾಪಾಡುವುದು ನಮ್ಮ ಮೊದಲ ಆದ್ಯತೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಲಾಯಿತು. ಇದಕ್ಕೆ ಕಾಂಗ್ರೆಸ್ ಮುಖಂಡರು ಸಿಲಿಂಡರ್ ಸ್ಫೋಟದಿಂದ ಆಗಿದೆ ಎನ್ನುವ ಬೇಜವಾಬ್ದಾರಿಯುವ ಹೇಳಿಕೆ ನೀಡುತ್ತಾರೆ. ವಿಧಾನ ಸೌಧದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಎನ್ನುವ ಘೋಷಣೆ ಕೂಗಲಾಯಿತು. ಇಂಥ ಕೃತ್ಯಗಳು ಹೆಚ್ಚು ಕಾಂಗ್ರೆಸ್ ಸರ್ಕಾರವೇ ಕಾರಣ. ಹೀಗಾಗಿ ಕಾಂಗೆಸ್ಸನ್ನು ಅಧಿಕಾರದಿಂದ ದೂರ ಇಡಬೇಕೋ ಬೇಡವೋ ಎಂದು ಮತದಾರರನ್ನು ಪ್ರಶ್ನಿಸಿದರು.
ನಮ್ಮ ಪೂರ್ವಜರು 500 ವರ್ಷಗಳು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಹೋರಾಡಿದ್ದಾರೆ. ಅನೇಕರು ತಮ್ಮ ಪ್ರಾಣವನ್ನೂ ತ್ಯಾಗ ಮಾಡಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಮರುದಿನವೇ ನಮ್ಮ ದೇಶದ ಅಸ್ಮಿತೆಯಾದ ಶ್ರೀರಾಮನ ಮಂದಿರ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಆದರೆ ರಾಮಮಂದಿರ ನಿರ್ಮಾಣವಾಗದಂತೆ ನೋಡಿಕೊಳ್ಳಲು ‘ಕೆಲವು ಶಕ್ತಿಗಳು’ ಕೊನೆಯ ಕ್ಷಣದವರೆಗೂ ಪ್ರಯತ್ನಿಸಿದವು. 500 ವರ್ಷಗಳ ಕನಸು ನಿಮ್ಮ ಮತದ ಶಕ್ತಿಯಿಂದ ನನಸಾಯಿತು ಎಂದು ಪ್ರಧಾನಿ ಮೋದಿ ಹೇಳಿದರು.
ಕಾಂಗ್ರೆಸ್ ಹಾಗೂ ಇಂಡಿಯಾ ಬಣದ ಮೈತ್ರಿಕೂಟ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮಂದಿರ ನಿರ್ಮಾಣವಾಗದಂತೆ ಕೆಲವು ಶಕ್ತಿಗಳು ಒಂದಾಗಿದ್ದವು. ಅದೇ ಶಕ್ತಿಗಳು ಕೊನೆಯ ದಿನವೂ ನ್ಯಾಯಾಲಯದ ಮೊರೆ ಹೋಗಿದ್ದವು. ರಾಮ ಮಂದಿಉರ ನಿರ್ಮಾಣದ ವಿರುದ್ಧ ಹೋರಾಟ ನಡೆಸಿದ್ದ ಕುಟುಂಬ ರಾಮ ಮಂದಿರ ಉದ್ಘಾಟನೆಗೆ ಆಮಂತ್ರಣ ನೀಡಿದಾಗ ಎಲ್ಲವನ್ನೂ ಮರೆತು ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ಆದರೆ ಅದೇ ಶಕ್ತಿಗಳು ಆಮಂತ್ರಣ ನೀಡಿದರೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಬಹಿಷ್ಕರಿಸಿ ಭಗವಾನ್ ರಾಮನಿಗೆ ಅವಮಾನ ಮಾಡಿದವು. ನೀವು ಅವರನ್ನು ನೀವು ಬಹಿಷ್ಕರಿಸಿ. ರಾಮಮಂದಿರದ ಆಹ್ವಾನವನ್ನು ತಿರಸ್ಕರಿಸಿದವರನ್ನು ದೇಶ ತಿರಸ್ಕರಿಸುತ್ತದೆ ಎಂಬುದನ್ನು ತೋರಿಸಿ ಎಂದು ಮತದಾರರಿಗೆ ಮನವಿ ಮಾಡಿದರು.
ನಮ್ಮ ಪರಂಪರೆ ರಕ್ಷಣೆ ಮಾಡಿದ ರಾಜ ಮಹಾರಾಜರು ಜನರನ್ನು ಲೂಟಿ ಮಾಡುತ್ತಿದ್ದರು ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ ಪ್ರತಾಪ ಅವರ ಇತಿಹಾಸ ತಿಳಿಯಬೇಕು. ಸಮಾಜದ ಉನ್ನತಿಗೆ ಶ್ರಮಿಸಿದ ಹಿಂದೂ ರಾಜಮಹಾರಾಜರನ್ನು ನಿಂದಿಸುತ್ತಾರೆ. ಆದರೆ ಕಾಂಗ್ರೆಸ್ ನಾಯಕರ ಬಾಯಿಂದ ಯಾವೊಬ್ಬ ನವಾಬರ ಬಗ್ಗೆ, ಸುಲ್ತಾನರ ಬಗ್ಗೆ ನಿಂದನಾತ್ಮಕ ಶಬ್ದ ಬರುವುದಿಲ್ಲ. ಇದೇ ವೋಟ್ ಬ್ಯಾಂಕ ರಾಜಕಾರಣ. ತುಷ್ಟೀಕರಣ ನೀತಿಯಿಂದಲೇ ಕಾಂಗ್ರೆಸ್ ಇನ್ನಷ್ಟು ಪತನಗೊಳ್ಳಲಿದೆ. ಕನ್ನಡ ಭಾಷೆ, ಸಂಸ್ಕೃತಿಗೆ ಕದಂಬರ ಕೊಡುಗೆಯನ್ನು ಮರೆಯಲಾಗುತ್ತದೆಯೇ? ಮೈಸೂರು ರಾಜರು ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮರೆಯಲಾದೀತೆ..? ಮೋದಿ, ವಡೋದರಾ ರಾಜ ಗಾಯಕ್ವಾಡ ಅವರು ಅಂಬೇಡ್ಕರ ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು. ಅಂಬೇಡ್ಕರ್ ಅವರನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಕಳುಹಿಸುವಲ್ಲಿ ವಡೋದರ ರಾಜ ನೆರವಾಗಿದ್ದ. ಆದರೆ ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ತಮ್ಮ ವೋಟ್ ಬ್ಯಾಂಕ್ ರಾಜಕೀಯ ಮಾಡಲು ಬಳಸಿಕೊಂಡು ಅವರಿಗೆ ದೆಹಲಿಯಲ್ಲಿ ಹತ್ತು ಸೆಂಟ್ಸ್ ಜಾಗ ಸಹ ನೀಡದೆ ಅಗೌರವ ತೋರಿದೆ ಎಂದು ಕಿಡಿಕಾರಿದರು.
ಮತ್ತೊಮ್ಮೆ ಮೋದಿ ಸರ್ಕಾರ
ಕರ್ನಾಟಕದ ಜನರ ಉತ್ಸಾಹ ನೋಡಿದರೆ ಮತ್ತೊಮ್ಮೆ ಮೋದಿ ಸರ್ಕಾರ ಎಂದು ಸಾರಿ ಹೇಳುತ್ತಿದೆ. ದೇಶದ ವಿಕಾಕಸದ ಜೊತೆಗೆ ಸ್ಥಳೀಯ ಆದ್ಯತೆಗಳ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಉತ್ತರ ಕನ್ನಡದಲ್ಲಿ ಮೀನುಗಾರರಿಗೆ ಅತ್ಯತ್ತಮ ಬಂದರು, ಧಾರವಾಡಕ್ಕೆ ಐಐಟಿ ಸಿಕ್ಕಿದೆ. ಬಹುತಮದಿಂದ ಕೂಡಿದ ಅತ್ಯತ್ತಮ ಸರ್ಕಾರ ಇದ್ದರೆ ಭಾರತಕ್ಕೆ ವಿಶ್ವದಲ್ಲೇ ಮಾನ್ಯತೆ ಸಿಗುತ್ತದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭಾರತಕ್ಕೆ ವಿಶ್ವ ಮಾನ್ಯತೆ ಸಿಕ್ಕಿದೆಯೋ ಇಲ್ಲವೋ ಎಂದು ಪ್ರಶ್ನಿಸಿದ ಮೋದಿ ಇದೆಲ್ಲ ಹೇಗಾಯಿತು ತಿಳಿದಿದೆಯೇ ಎಂದ ಮೋದಿ, ತಮ್ಮ ಅಮೂಲ್ಯ ಮತ ಮೋದಿ ಸರ್ಕಾರಕ್ಕೆ ನೀಡಿದ್ದರಿಂದಲೇ ಕಳೆದ 10 ವರ್ಷದಲ್ಲಿ ವಿಶ್ವಮಾನ್ಯತೆ ಹೊಂದಿರುವುದನ್ನು ದೇಶದ ಜನರು ನೋಡಿದ್ದಾರೆ. ವಿಶ್ವರ ಹಲವು ದೇಶಗಳಿಗೆ ಭೇಟಿ ನೀಡಿದಾಗ ನನ್ನ ಹಿಂದೆ ದೇಶ 140 ಕೋಟಿ ಜನರು ಇದ್ದಾರೆ ಎನ್ನುವ ಭಾವನೆ ನನಗೆ ಇರುತ್ತದೆ ಎಂದು ಮೋದಿ ಎಂದರು.
ಕಾಂಗ್ರೆಸ್‌ನಿಂದ ಲೂಟಿ :
ವಿದೇಶದಲ್ಲಿರುವ ಕಾಂಗ್ರೆಸ್ ಗುರು ಇತ್ತೀಚೆಗೆ ನೀಡಿದ ಹೇಳಿಕೆ ಭಯ ತರುವಂತಿದೆ. ದೇಶದ ಜನರು ತಮ್ಮ ಮಕ್ಕಳಿಗಾಗಿ ಕೂಡಿಟ್ಟ ಹಣ ಆಸ್ತಿಯ ಅರ್ಧಕ್ಕಿಂತ ಹೆಚ್ಚಿನದನ್ನು ಮುಟ್ಟುಗೋಲು ಹಾಕುವ ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ ಜನರನ್ನು ಇನ್ನಷ್ಟು ದೋಚಲಿದೆ ಎನ್ನುವುದು ಸ್ಪಷ್ಟವಾಗಿದೆ. ಇದರಿಂದ ಕಾಂಗ್ರೆಸ್‌ನ ಲೂಟಿ ಜೀವ ಇರುವವರೆಗಷ್ಟೇ ಅಲ್ಲ, ಜೀವ ಹೋದರೂ ಲೂಟಿ ಮುಂದುವರೆಯಲಿದೆ ಎಂದು ಮೋದಿ ಆರೋಪಿಸಿದರು.
ಶಿರಸಿ ಸುಪಾರಿಗೆ ಜಿಐ ಟ್ಯಾಗ್ ಪ್ರಸ್ತಾಪ
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದ ಆಯುರ್ವೇದವನ್ನು ಇಡೀ ವಿಶ್ವಕ್ಕೆ ಪ್ರಚಾರ ಮಾಡಿದೆ. ಈಗ ಇದು ವಿಶ್ವ ಮಾನ್ಯತೆ ಪಡೆದಿದೆ. ಪ್ರತ್ಯೇಕ ಆಯುಷ್ ಮಂತ್ರಾಲಯವನ್ನೂ ಮಾಡಿದ್ದೇವೆ ಎಂದರು. ಉತ್ತರ ಕನ್ನಡದ ಹೆಗ್ಗುರುತು ಎಂದೇ ಪ್ರಸಿದ್ಧಿ ಪಡೆದ ಶಿರಸಿ ಸುಪಾರಿಯನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಶಿರಸಿ ಸುಪಾರಿಗೂ ಜಿಐ ಟ್ಯಾಗ್ ಮಾನ್ಯತೆ ಲಭಿಸಿದೆ. ಅದೂ ಕೂಡ ಬಿಜೆಪಿ ಸರ್ಕಾರದಿಂದಲೇ ಸಾಧ್ಯವಾಗಿದೆ. ಕರ್ನಾಟಕದ ಸಿರಿಧಾನ್ಯ ಈಗ ಇಡೀ ವಿಶ್ವಮಾನ್ಯತೆ ಪಡೆದಿದೆ. ಕಳೆದ ವರ್ಷ ಅಮೇರಿಕಾದಲ್ಲಿ ಒಂದು ಸಭೆಯಲ್ಲಿ ಭಾಗವಹಿಸಿದ್ದಾಗ ಅಮೆರಿಕದಲ್ಲಿ ಇಲ್ಲಿನ ಮಿಲೆಟ್ ಕಂಡುಬಂತು. ಇಂಥ ಸೂಪರ್ ಫುಡ್ ಇಡೀ ವಿಶ್ವದಲ್ಲಿ ಪ್ರಸಿದ್ಧಿಯಾಗಿದ್ದು, ಅದರ ಶ್ರೇಯ ಕರ್ನಾಟಕಕ್ಕೆ ಸಲ್ಲಬೇಕು ಎಂದರು.
ಬಿಸಿಲಿನಲ್ಲೂ ನಿಂತು ಸಾವಿರಾರು ಮಂದಿ ಭಾಷಣ ಕೇಳುತ್ತಿದ್ದರು. ಅವರ ಕ್ಷಮೆಯಾಚಿಸಿದ ಪ್ರಧಾನಿ ಮೋದಿ, ‘ನಾನು ನಿಮ್ಮ ಈ ಶ್ರಮವನ್ನೂ ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ. ಇದು ಮೋದಿಯ ಗ್ಯಾರಂಟಿ ಎಂದು ಹೇಳಿದರು.
ಉತ್ತರಕನ್ನಡದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ, ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ದಾಖಲೆ ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ಪ್ರಧಾನಿ ಮೋದಿ ಅವರಿಗೆ ಗ್ರಾಮೀಣ, ಜಾನಪದ ಸಾಂಸ್ಕೃತಿಕ ಕಲೆ ಬೇಡರ ವೇಷದ ಕಿರೀಟ, ಮಲೆನಾಡು-ಉತ್ತರ ಕನ್ನಡದ ಪ್ರಮುಖ ಬೆಳೆಗಳಾದ ಅಡಿಕೆ, ಕಾಳುಮೆಣಸು ಮತ್ತು ಏಲಕ್ಕಿಯಿಂದ ಮಾಡಿದಂತಹ ವಿಶಿಷ್ಟ ಹಾರ, ಗ್ರಾಮದೇವತೆಯಾದ ಶ್ರೀ ಮಾರಿಕಾಂಬಾ ದೇವಿಯ ಪ್ರತಿಮೆ ನೀಡಿ ಸನ್ಮಾನಿಸಲಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ