ಬಾಗಲಕೋಟೆ : ಐದು ವರ್ಷದ ಹಿಂದೆ ಪಾಕಿಸ್ತಾನದ ಬಾಲಾಕೋಟ್ ಮೇಲೆ ಭಾರತದ ವಾಯುದಾಳಿ (Balakot airstrike) ನಡೆದ ಘಟನೆಯ ಬಗ್ಗೆ ನರೇಂದ್ರ ಮೋದಿ ರಹಸ್ಯ ವಿಚಾರ ಬಹಿರಂಗ ಪಡಿಸಿದ್ದಾರೆ. 2019ರ ಬಾಲಾಕೋಟ್ ಏರ್ಸ್ಟ್ರೈಕ್ ನಡೆದ ಬಳಿಕ ಆ ಘಟನೆ ಬಗ್ಗೆ ಪ್ರಪಂಚಕ್ಕೆ ತಿಳಿಸುವ ಮೊದಲು ಅಧಿಕೃತವಾಗಿ ಮೊದಲು ತಿಳಿಸಿದ್ದು ಪಾಕಿಸ್ತಾನಕ್ಕೆ ಎಂದು ಪ್ರಧಾನಿ ನರೇಂದ್ರ ಮೋದಿ ಬಹಿರಂಗಪಡಿಸಿದ್ದಾರೆ.
“ನಾವು ವೈಮಾನಿಕ ದಾಳಿ ನಡೆಸಿದ್ದೇವೆ, ಇಷ್ಟು ಜನರನ್ನು ಕೊಂದಿದ್ದೇವೆ ಮತ್ತು ಇಷ್ಟು ವಿನಾಶಕ್ಕೆ ಕಾರಣವಾಗಿದ್ದೇವೆ ಎಂದು ನಾನು ಪಾಕಿಸ್ತಾನದ ಅಧಿಕಾರಿಗಳಿಗೆ ದೂರವಾಣಿಯಲ್ಲಿ ತಿಳಿಸಿದ ನಂತರವೇ ವೈಮಾನಿಕ ದಾಳಿಯ ಬಗ್ಗೆ ಮಾಧ್ಯಮಗಳಿಗೆ ತಿಳಿಸಲು ನಾನು ನಮ್ಮ ಪಡೆಗಳಿಗೆ ಸೂಚನೆ ನೀಡಿದ್ದೆ ಎಂದು ಪ್ರಧಾನಿ ಹೇಳಿದರು.
ಬಾಗಲಕೋಟೆಯ ನವನಗರದಲ್ಲಿ ಸೋಮವಾರ ನಡೆದ ರ್ಯಾಲಿಯಲ್ಲಿ ಈ ವಿಷಯ ಬಹಿರಂಗಪಡಿಸಿದ ಅವರು, ಪಾಕಿಸ್ತಾನಕ್ಕೆ ಫೋನ್ ಮಾಡಿದಾಗ ಅವರು ಫೋನ್ ತೆಗೆದುಕೊಂಡಿರಲಿಲ್ಲ. ಹೀಗಾಗಿ ಪಾಕಿಸ್ತಾನದವರನ್ನು ಸಂಪರ್ಕಿಸುವವರೆಗೆ ಬಾಲಾಕೋಟ್ ವೈಮಾನಿಕ ದಾಳಿಯ ಬಗ್ಗೆ ಬಹಿರಂಗ ಮಾಡುವುದನ್ನು ಮುಂದೂಡಿ ಎಂದು ನಾನು ಪಡೆಗಳಿಗೆ ನಿರ್ದೇಶನ ನೀಡಿದ್ದೆ …ಪಾಕಿಸ್ತಾನಕ್ಕೆ ತಿಳಿಸಿದ ನಂತರವೇ ನಾವು ರಾತ್ರಿಯಲ್ಲಿ ನಡೆದ ಬಾಲಾಕೋಟ್ ವಾಯುದಾಳಿಗಳ ಬಗ್ಗೆ ಜಗತ್ತಿಗೆ ಬಹಿರಂಗಪಡಿಸಿದ್ದೇವೆ. ಮೋದಿಗೆ ಹಿಂದಿನಿಂದ ದಾಳಿ ಮಾಡುವುದರಲ್ಲಿ ನಂಬಿಕೆಯಿಲ್ಲ, ಬಹಿರಂಗವಾಗಿ ಮುಖಾಮುಖಿಯಾಗಿ ಹೋರಾಡಬೇಕು” ಎಂದು ಮೋದಿ ಹೇಳಿದರು.
ದೇಶದಲ್ಲಿ ಅಮಾಯಕರನ್ನು ಕೊಲ್ಲಲು ಪ್ರಯತ್ನಿಸುವವರಿಗೆ ಎಚ್ಚರಿಕೆ ನೀಡಿದ ಅವರು, ʼಇದು ನವ ಭಾರತ, ಶತ್ರುಗಳನ್ನು ಮನೆಯೊಳಗೆ ಹೊಕ್ಕಿ ಹೊಡೆಯುತ್ತೇವೆ ಎಂದು ಹೇಳಿದರು.
“ನಾವು ಬಾಲಾಕೋಟ್ ದಾಳಿಯ ಬಗ್ಗೆ ನಂತರ ಪತ್ರಿಕಾಗೋಷ್ಠಿಯನ್ನು ನಡೆಸಿದ್ದೇವೆ ಮತ್ತು ದಾಳಿಯ ನಂತರ ಶತ್ರುಗಳಿಗೆ ಉಂಟಾದ ವಿನಾಶದ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದ್ದೇವೆ” ಎಂದು ಅವರು ಸಭೆಗೆ ತಿಳಿಸಿದರು.
ನಾನು ಅಂದು ಶೃಂಗಸಭೆಯಲ್ಲಿದ್ದೆ, ಎಲ್ಲರೊಂದಿಗೂ ಶುಭಾಶಯ ವಿನಿಮಯ ಮಾಡಿಕೊಂಡು ಶಾಂತವಾಗಿ ಹೊರಟೆ. ತದನಂತರ ಭಾರತವು ಬಾಲಾಕೋಟ್‌ನಲ್ಲಿ ರಾತ್ರಿಯಲ್ಲಿ ವೈಮಾನಿಕ ದಾಳಿ ನಡೆಸಿತು ಎಂದು ಅವರು ಹೇಳಿದರು.
2019ರ ಫೆಬ್ರುವರಿ 14ರಂದು ಕಾಶ್ಮೀರದ ಪುಲ್ವಾಮ ಬಳಿ ಸಿಆರ್ಪಿಎಫ್ ಯೋಧರನ್ನು ಹೊತ್ತೊಯ್ಯುತ್ತಿದ್ದ ಟ್ರಕ್ಗಳ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದ ದುರ್ಘಟನೆಯಲ್ಲಿ 40 ಮಂದಿ ಯೋಧರು ಸಾವಿಗೀಡಾಗಿದ್ದರು. ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಫೆಬ್ರವರಿ 26, 2019 ರಂದು ಬಾಲಾಕೋಟ್‌ನಲ್ಲಿರುವ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ಭಾರತದ ಯುದ್ಧ ವಿಮಾನಗಳು ದಾಳಿ ನಡೆಸಿದ್ದವು.
ಬಾಲಾಕೋಟ್ ದಾಳಿಯ ನಂತರ, ರಾತ್ರೋರಾತ್ರಿ ನಡೆದ ಕಾರ್ಯಾಚರಣೆಯಲ್ಲಿ “ಬಹಳ ಸಂಖ್ಯೆಯ ಜೆಇಎಂ ಭಯೋತ್ಪಾದಕರು, ತರಬೇತುದಾರರು, ಹಿರಿಯ ಕಮಾಂಡರ್‌ಗಳು ಮತ್ತು ಜಿಹಾದಿಗಳ ಗುಂಪುಗಳು” ಕೊಲ್ಲಲ್ಪಟ್ಟರು ಎಂದು ಭಾರತ ಹೇಳಿತ್ತು.
ಅವರು “ಆತ್ಮಾಹುತಿ ದಾಳಿ”ಗಾಗಿ ತರಬೇತಿ ಪಡೆಯುತ್ತಿದ್ದರು ಮತ್ತು ಬಾಲಾಕೋಟ್‌ನಲ್ಲಿನ ಅದನ್ನು ಜೆಎಂ ಮುಖ್ಯಸ್ಥ ಮಸೂದ್ ಅಜರ್ ಸೋದರ ಮಾವ ಮೌಲಾನಾ ಯೂಸುಫ್ ಅಜರ್ ಅಲಿಯಾಸ್ ಉಸ್ತಾದ್ ಘೌರಿ ನೇತೃತ್ವ ವಹಿಸಿದ್ದ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ