ಆಘಾತಕಾರಿ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ಚಲಿಸುವ ರೈಲಿನಲ್ಲಿಯೇ ತನ್ನ ಹೆಂಡತಿಗೆ ತ್ರಿವಳಿ ತಲಾಖ್ ನೀಡಿ ನಂತರ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ 29 ರಂದು ಮೊಹಮ್ಮದ್ ಅರ್ಷದ್ (28) ಎಂಬಾತ ತನ್ನ ಪತ್ನಿ ಅಫ್ಸಾನಾ (26) ಅವರೊಂದಿಗೆ ಪ್ರಯಾಣಿಸುತ್ತಿದ್ದಾಗ ಝಾನ್ಸಿ ಜಂಕ್ಷನ್‌ಗೆ ಸ್ವಲ್ಪ ಮೊದಲು ಈ ಘಟನೆ ಸಂಭವಿಸಿದೆ. ರೈಲು ಝಾನ್ಸಿ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಅರ್ಷದ್ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿ ರೈಲಿನಿಂದ ಇಳಿದಿದ್ದಾನೆ. ಹಾಗೂ ಅಲ್ಲಿಂದ ಪರಾರಿಯಾಗುವ ಮುನ್ನ ಪತ್ನಿಗೆ ಥಳಿಸಿದ್ದಾನೆ.
ಹಠಾತ್ ನಡೆದ ಈ ಘಟನೆಗಳಿಂದಾಗಿ ಆಘಾತಕ್ಕೊಳಗಾದ ಅಫ್ಸಾನಾ ಸರ್ಕಾರಿ ರೈಲ್ವೇ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಎಫ್‌ಐಆರ್ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ.
ಭೋಪಾಲದ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ಕಂಪ್ಯೂಟರ್ ಎಂಜಿನಿಯರ್ ಅರ್ಷದ್, ಈ ವರ್ಷ ಜನವರಿ 12 ರಂದು ರಾಜಸ್ಥಾನದ ಕೋಟಾ ಮೂಲದ ಪದವೀಧರ ಅಫ್ಸಾನಾ ಅವರನ್ನು ವಿವಾಹವಾಗಿದ್ದರು. ಮ್ಯಾಟ್ರಿಮೋನಿಯಲ್ ಜಾಹೀರಾತಿನ ಮೂಲಕ ಮದುವೆ ನಿಶ್ಚಯವಾಗಿತ್ತು.
ದಂಪತಿ ಕಳೆದ ವಾರ ಪುಖ್ರಾಯನ್‌ನಲ್ಲಿರುವ ಅರ್ಷದ್ ಅವರ ಪೂರ್ವಜರ ಮನೆಗೆ ಭೇಟಿ ನೀಡಿದಾಗ, ಅರ್ಷದ್ ಗೆ ಈಗಾಗಲೇ ಮದುವೆಯಾಗಿದೆ ಎಂಬುದು ಗೊತ್ತಾಯಿತು ಹಾಗೂ ಅಫ್ಸಾನಾ ಆಘಾತಕ್ಕೊಳಗಾಗಿದ್ದರು. ಈ ಬಗ್ಗೆ ಆತನನ್ನು ಪ್ರಶ್ನಿಸಿದಾಗ ಆತ ಮತ್ತು ಆತನ ತಾಯಿ ವರದಕ್ಷಿಣೆಗಾಗಿ ಕಿರುಕುಳ ನೀಡಲು ಪ್ರಾರಂಭಿಸಿದರು ಎಂದು ಅಫ್ಸಾನಾ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಅರ್ಷದ್ ಅಂತಿಮವಾಗಿ ಚಲಿಸುತ್ತಿರುವ ರೈಲಿನಲ್ಲಿಯೇ ತ್ರಿವಳಿ ತಲಾಖ್ ಘೋಷಿಸಿದ್ದಾನೆ ಹಾಗೂ ಅಲ್ಲಿಂದ ಪರಾರಿಯಾಗುವ ಮುನ್ನ ಅಫ್ಸಾನಾಗೆ ಥಳಿಸಿದ್ದಾನೆ.
ವೈರಲ್ ಆಗಿರುವ ವೀಡಿಯೊದಲ್ಲಿ, ಅಫ್ಸಾನಾ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಮತ್ತು ಮಹಿಳೆಯರಿಗೆ ತ್ರಿವಳಿ ತಲಾಖ್ ನೀಡಿ ಪತ್ನಿಯನ್ನು ತ್ಯಜಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಮಹಿಳೆಯ ದೂರಿನ ಆಧಾರದ ಮೇಲೆ ಆಕೆಯ ಪತಿ ಅರ್ಷದ್, ಆತನ ತಾಯಿ ಪರ್ವೀನ್, ತಾಯಿಯ ಚಿಕ್ಕಪ್ಪ ಅಖೀಲ್, ತಂದೆ ನಫೀಸುಲ್ ಹಸನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸರ್ಕಲ್ ಆಫೀಸರ್ (ಸಿಒ) ಪ್ರಿಯಾ ಸಿಂಗ್ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ