ಸಮ ಸಮಾಜ ನಿರ್ಮಾಣ, ಅಂತರಂಗ-ಬಹಿರಂಗ ಶುದ್ಧಿಯಿಂದ ಜಗಜ್ಯೋತಿಯಾದ ಕಾಯಕಯೋಗಿ ವಿಶ್ವಗುರು ಬಸವಣ್ಣ…

ವಿಶ್ವ ಗುರು ಮತ್ತು ಕರ್ನಾಟಕದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವಣ್ಣನವರ ೮೯೧ನೇ ಜಯಂತಿಯನ್ನು ೧೦-೦೫-೨೦೨೪ ರಂದು ಆಚರಿಸಲಾಗುತ್ತಿದ್ದು, ತನ್ನಿಮಿತ್ತ ಲೇಖನ)
ನಡೆಯನ್ನೇ ನುಡಿಯಾಗಿಸಿದ ಪುಣ್ಯ ಪುರುಷರಲ್ಲಿ ಬಸವಣ್ಣನವರು ಅಗ್ರಗಣ್ಯರು. ತಮ್ಮ ನಡೆ-ನುಡಿಯಗಳನ್ನು ಸ್ಪಟಿಕದ ಸಲಾಖೆಯಂತೆ ನೇರ ಹಾಗೂ ಪಾರದರ್ಶಕವಾಗಿಸಿಕೊಂಡು, ತಮ್ಮ ನಡೆಯಿಂದ ಸಮಾಜಕ್ಕೆ ಚೇತನ ತುಂಬಿದವರು ಅಣ್ಣ ಬಸವಣ್ಣನವರು ; ತಮ್ಮ ನುಡಿಯಿಂದ ಲಿಂಗವನ್ನು ಮೆಚ್ಚಿಸಿ, ಅಹುದಹುದು ಎನ್ನುವಂತೆ ಮಾಡಿದವರು. ಅಂತರಂಗ ಹಾಗೂ ಬಹಿರಂಗಗಳೆರಡನ್ನೂ ಪರಿಶುದ್ಧವಾಗಿಸಿಕೊಂಡು ಮಾನವತ್ವದಿಂದ ದೈತ್ವಕ್ಕೇರಿ, ಮಾನವನ ಬದುಕಿಗೆ ಜ್ಯೊತಿಯಾಗಿ ಜಗಜ್ಯೋತಿಯಾದವರು ಅಣ್ಣ ಬಸವಣ್ಣವರು.
 ಬಸವಕಲ್ಯಾಣದಲ್ಲಿ ಸಕಲ ಜೀವಾತ್ಮರಿಗೆ ಲೇಸಾಗಲೆಂದು ನಡೆಸಿದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ಚಳುವಳಿಯ ಮೂಲಕ ಎಲ್ಲ ಪ್ರಕಾರದ  ಕಾಯಕ ಜೀವಿಗಳನ್ನು ಒಂದು ಗೂಡಿಸಿ ಇಂದಿನ ಸಂಸತ್ತುಗಳಿಗೆ ಮಾದರಿಯಾದ ಅನುಭವ ಮಂಟಪದ ಮೂಲಕ ಶರಣ ಸಂಕುಲವೆಂಬ ನಮ ಸಮಾಜ ನಿರ್ಮಾಣ ಮಾಡಿದರು.
 ಬಸವಣ್ಣನವರ ಈ ಶರಣ ಸಂಕುಲದಲ್ಲಿ ಈವರೆಗೆ ಜನತೆಯನ್ನು ಕೂಪದತ್ತ ತಳ್ಳಿದ್ದ ಜಾತಿಗಳು ನಿರ್ನಾಮವಾಗಿ ಕಾಯಕಗಳು ಉಳಿದುಕೊಂಡವು.  ಯಾವುದೇ ಕಾಯಕವಿರಲಿ ಆ ಕಾಯಕದಲ್ಲಿ ಭೇದ ಎಣಿಸದೇ ಶ್ರದ್ಧೆಯಿಂದ ಮಾಡಿದಲ್ಲಿ ಕೈಲಾಸವನ್ನು ಕಾಣಬಹುದು ಎಂದು ಲೋಕಕ್ಕೆ ಸಾರಿದರು. ಎಲ್ಲ ಕಾಯಕ ಜೀವಿಗಳ ಬದುಕಿನಲ್ಲಿ ಅರಿವು  ಮೂಡಿಸಿದ ಅಕ್ಷರ ಕ್ರಾಂತಿಯ ಮೂಲಕ ಸಾಕ್ಷರತೆಗೆ ನಾದಿಹಾಡಿದ ಫಲವಾಗಿ ಅವರೆಲ್ಲ ಅಕ್ಷರ ಕಲಿತು ತಮ್ಮ ಕಾಯಕದಲ್ಲಿ ಕಂಡು ಕೊಂಡ ಅನುಭವವನ್ನು ಅನುಭಾವದ ಮಟ್ಟಕ್ಕೇರಿಸಿ ಅತ್ಯಮೂಲ್ಯವಾದ ವಚನಗಳನ್ನು ರಚಿಸಿದರು.  ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶರಣರಿಂದ ಕೂಡಿದ್ದ ಶರಣ ಸಂಕುಲವೆಂಬ ಸಮಾಜ ಹೊಸ ಜೀವನ ವಿಧಾನದಿಂದ ಕೂಡಿತ್ತು.
ಕ್ರಿ.ಶ. ೧೧೩೪ರಲ್ಲಿಈಗಿನ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರದಲ್ಲಿ  ಮಾದರಸ-ಮಾದಲಾಂಬಿಕೆ ದಂಪತಿ ಉದರದಲ್ಲಿ ಜನಿಸಿದ ಇವರದು ಶಿವಭಕ್ತ ಬ್ರಾಹ್ಮಣ ಕುಟುಂಬ.  ಚಿಕ್ಕಂದಿನಿಂದಲೂ ವೈದಿಕ ಸಂಸ್ಕೃತಿಯ ಕರ್ಮಾರಚರಣೆಗಳ ವಿರೋಧಿಯಾಗಿದ್ದ ಬಸವಣ್ಣ ತನಗೆ ಹಾಕಿದ ಜನಿವಾರವನ್ನು ಕಿತ್ತೆಸೆದು, ಅಕ್ಕನಾಗಮ್ಮ, ಭಾವ ಶಿವಸ್ವಾಮಿಯವರೊಂದಿಗೆ ಗುರುಜಾತ ವೇದ ಮುನಿಗಳ ಆಶ್ರಮಕ್ಕೆ ಆಗಮಿಸಿದರು. ಸಮಾಜದ ಗೊಡ್ಡು ಸಂಪ್ರದಾಯಗಳಿಗೆ ವಿದಾಯ ಹೇಳಿ, ಜಾತಿ, ಮತ, ಪಂಥಗಳಿಂದ ಹೊರಬಂದ ಅಪಾರ ಜ್ಞಾನಿಗಳ ಕೂಟ ನಿರ್ಮಿಸಿ, ವೈಚಾರಿಕ ಮನೋಭಾವದ ಪ್ರಗತಿಶೀಲರನ್ನು ಒಂದೆಡೆ ಕಲೆ ಹಾಕಿದ ಮಹಾನ್ ಅನುಭಾವಿ ಬಸವಣ್ಣನವರು.
 ಬಸವೇಶ್ವರರು ತಮ್ಮ ತಾಯಿಯ ಸಂಬಂಧಿಯಾದ ಗಂಗಾಂಬಿಕೆ ಹಾಗೂ ಅವರ ಸಖಿ ನೀಲಾಂಬಿಕೆಯನ್ನು ವಿವಾಹವಾದ ನಂತರ, ಕಲಚೂರಿ ವಂಶದ ದೊರೆಯಾದ ಬಿಜ್ಜಳನದ ಆಸ್ಥಾನದಲ್ಲಿ ಲೆಕ್ಕಿಗರಾಗಿ ಸೇರಿಕೊಂಡು, ತಮ್ಮ ನಿಷ್ಠೆಯಿಂದ ರಾಜನ ಮನಸ್ಸು ಗೆದ್ದು ನಂತರ ಮಂತ್ರಿಯಾದರು. ಬಸವೇಶ್ವರರು ರಾಜ್ಯದ ಖಜಾನೆಯನ್ನು ಅನೇಕ ಒಳ್ಳೆಯ ಕಾರ‍್ಯಗಳಿಗೆ ಉಪಯೋಗಿಸಿದರು.  ಸಮಾಜದಲ್ಲಿ ಅನೇಕ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಫಲದಿಂದ ಮೇಲ್ಜಾತಿ ಜನರ ಅವಕೃಪೆಗೆ ಒಳಗಾಗಿ ಅನಿವಾರ‍್ಯವಾಗಿ, ಬಸವೇಶ್ವರರು ಮಂತ್ರಿ ಪದವಿಯನ್ನು ತ್ಯಜಿಸಬೇಕಾಯಿತು.
 ಬಸವಣ್ಣನವರ ಒಂದೊಂದು ವಚನಗಳು ಅನೇಕ ಸೂತ್ರಗಳನ್ನು, ಉಪದೇಶಗಳನ್ನು, ತತ್ವಗಳನ್ನೊಳಗೊಂಡಿವೆ.  ಸಮಾಜದಲ್ಲಿಯ ನ್ಯೂನ್ಯತೆಗಳನ್ನು ಎತ್ತಿ ತೋರಿಸಿದ ಬಸವಣ್ಣನವರ ಚಿಂತನೆ ನಿಜಕ್ಕೂ ಮನುಕುಲಕ್ಕೆ ಭಂಡಾರವಾಗಿದೆ.  ಮನುಕುಲ ಈ ಭೂಮಿಯಲ್ಲಿ ಯಾವ ರೀತಿ ಜೀವಿಸಿಬೇಕು ಎಂಬುದಕ್ಕೆ ತಮ್ಮ ಅರಾಧ್ಯ ದೈವ ಕೂಡಲಸಂಗಮನ ಮೇಲೆ ಪ್ರಮಾಣ ಮಾಡುತ್ತ ಜನತೆಗೆ ಮಾರ್ಗದರ್ಶಿಯಾಗಿ ಜೀವನ ಮೌಲ್ಯಗಳ ಅಳವಡಿಕೆಗೆ ಕರೆ ಅವರು ನೀಡುತ್ತಾರೆ.
ಜೀವನದ ಮೌಲ್ಯಗಳನ್ನು ಯಾವ ರೀತಿ ಚಲಾವಣೆಗೆ ತರಬೇಕು ಎನ್ನುವ ಬಗ್ಗೆ, ಅವರದೇ ಆದ ವಚನದಲ್ಲಿ ಸಪ್ತ ಸೂತ್ರವನ್ನು ಕಾಣಬಹುದಾಗಿದೆ.
“ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ,
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ,
ಇದೇ ನಮ್ಮ ಕೂಡಲ ಸಂಗಮನೊಲಿಸುವ ಪರಿ ||
ಇದೊಂದು ವಚನ ಸಾಕು ನಾವು ಉತ್ತಮ ಸುಸಂಸ್ಕೃತ ಮನುಷ್ಯರಾಗಲು ಇದರಲ್ಲಿ ಏಳು ಸೂತ್ರಗಳು ಅಡಗಿವೆ.
೧) ಕಳಬೇಡ, ೨) ಕೊಲಬೇಡ, ೩) ಹುಸಿಯ ನುಡಿಯಲು ಬೇಡ, ೪) ಮುನಿಯ ಬೇಡ,   ೫) ಅನ್ಯರಿಗೆ ಅಸಹ್ಯ ಪಡಬೇಡ,   ೬) ತನ್ನ ಬಣ್ಣಿಸಬೇಡ,   ೭) ಇದಿರು ಹಳಿಯಲು ಬೇಡ.
ಈ ಎಲ್ಲ ತತ್ವಗಳನ್ನು ಒಬ್ಬ ಸಾಮಾನ್ಯ ಮಾನವ ತನ್ನ ಜೀವನದಲ್ಲಿ ಮೌಲ್ಯಗಳನ್ನಾಗಿ ಅಳವಡಿಸಿ ಕೊಂಡಾಗ ಆತ ಮಹಾಮಾನವ ಅಥವಾ ಶರಣನಾಗುತ್ತಾನೆ.  ಜಾತಿ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಅಂತರ್ಜಾತಿಯ ವಿವಾಹಗಳನ್ನು ಏರ್ಪಡಿಸುತ್ತ ಸಮಾಜದಲ್ಲಿ ಜನಾನುರಾಗಿಯಾದ ವೇಳೆ ಕೆಲ ಅಭಿಜಾತ ವರ್ಗದವರು ರಾಜ ಬಿಜ್ಜಳನ ಬಳಿ ತೆರಳಿ ತಮ್ಮ ಸ್ವಾರ್ಥ ಸಾಧನೆಗಾಗಿ ಬಸವೇಶ್ವರರ ಮೇಲೆ ಹಲವಾರು ಅಪಾದನೆಗಳನ್ನು ಮಾಡಿ ಬಿಜ್ಜಳನ ಮನಸ್ಸು ಕೆಡಿಸಿದರು. ಅವರ ಮಾತು ಕೇಳಿದ ಬಿಜ್ಜಳ ಯಾವುದೇ ಪೂರ್ವಾಪರ ವಿಚಾರ ಮಾಡದೇ ಕೆಲ ಶರಣರಿಗೆ ಚಿತ್ರ ಹಿಂಸೆ ನೀಡತೊಡಗಿದಾಗ ಶರಣರ ಕ್ರಾಂತಿ ಆರಂಭವಾಗುತ್ತದೆ.  ಇದರಿಂದ ಮನನೊಂದು ಬಸವೇಶ್ವರರು ಕಲ್ಯಾಣ ಬಿಟ್ಟು ಕೂಡಲಸಂಗಮದತ್ತ ಪಯಣಿಸಿ ಅಲ್ಲಿಯೇ ಐಕ್ಯರಾದರು.
ಮನುಕುಲದ ಶ್ರೇಯಸ್ಸಿಗಾಗಿ ಹಾಗೂ ಜಾತಿಗಳ ಮುಕ್ತ ಸಮಾಜಕ್ಕಾಗಿ ತಮ್ಮ ವಚನಗಳ ಮೂಲಕ ಹಗಲಿರಳು ಶ್ರಮಿಸಿದ ಭಕ್ತಿ ಭಂಡಾರಿ ಬಸವಣ್ಣನವರ ನೆನಪಿಗಾಗಿ ಬಸವ ಜಯಂತಿಯ ಆಚರಣೆ ಮಾಡುತ್ತಿದ್ದು, ಇವತ್ತಿನ ಪೀಳಿಗೆಯವರು ನೈಜವಾಗಿ ಬಸವ ತತ್ವಗಳನ್ನು ಅಳವಡಿಸಿಕೊಂಡಲ್ಲಿ ಸಮಾಜದಲ್ಲಿ ಯಾವುದೇ ಸಮಸ್ಯೆಗಳು ಉಲ್ಬಣಗೊಳ್ಳಲಾರವು. ಇಂತಹ ಮಹಾನ್ ದಾರ್ಶನಿಕ ಬಸವಣ್ಣವರ ವಿಚಾರಗಳನ್ನು ಆಚರಣೆಗೆ ತರುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ.
 ಬಸವಣ್ಣನವರು ಕಾಯಕ, ದಾಸೋಹಕ್ಕೆ ಹೊಸ ಸ್ವರೂಪ ನೀಡಿ ಶಿವಯೋಗದ ಮೂಲಕ ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸಿದ್ದಾರೆ.  ಸಾಮಾಜಿಕ, ಧಾರ್ಮಿಕ, ಅಧ್ಯಾತ್ಮಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವವರಿಗೆ ಅವರ ಜೀವನ ಮತ್ತು ಆದರ್ಶಗಳು ದಾರಿದೀಪವಾಗಿವೆ.  ಅವರ ವಚನಗಳು ಜೀವನದ ಎಲ್ಲ ಅಂಶಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಸಹಾಯಕಾರಿಯಾಗಿವೆ.
ವ್ಯಕ್ತಿ ಜನ್ಮತಃ ದೊಡ್ಡವನಾಗುವುದಿಲ್ಲ, ತನ್ನ ಸಾಧನೆಯಿಂದ ದೊಡ್ಡವನಾಗುತ್ತಾನೆ ಎನ್ನುವ ಸಂದೇಶ ನೀಡಿರುವ ಬಸವಣ್ಣನವರು ಅರಿವೆ ನಮ್ಮ ಗುರು ಎನ್ನುವ ಮೂಲಕ ಅರಿವು, ಸ್ವತಂತ್ರ ವಿಚಾರಶೀಲತೆ, ಸ್ವಾಲಂಬನ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತಿದ್ದಾರೆ. ಕಾಯಕದಲ್ಲಿ ವೈವಿಧ್ಯತೆ ಇದೆಯೇ ವಿನಃ ತಾರತಮ್ಯ ಇಲ್ಲ, ಕಾಯಕ ಎಂದರೆ ಉತ್ಪತ್ತಿ ಹಾಗೂ ದಾಸೋಹ ಎಂದರೆ ವಿತರಣೆ, ಇದು ಬಸವಣ್ಣನವರ ಆರ್ಥಿಕ ನೀತಿ ಈ ತತ್ವದ ಮೇಲೆ ನಿಂತಿದೆ. ಭಾವೈಕ್ಯತೆ, ಭಾವ ಸಾಮರಸ್ಯಕ್ಕೆ, ಪ್ರಗತಿಗೆ ಶಿಕ್ಷಣ ಆಧಾರ ಎಂದು ಸಾರ್ವಜನಿಕ ಸಮೂಹ ಶಿಕ್ಷಣ ಜಾರಿಗೆ ತಂದವರು ಬಸವಣ್ಣವರು.
 “ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ”, ದಯೆಯೇ ಧರ್ಮದ ಮೂಲ, ಅಚಾರವೇ ಸ್ವರ್ಗ, ಅನಾಚಾರವೇ ನರಕ, ಸತ್ಯವ ನುಡಿಯುವುದೇ ದೇವಲೋಕ, ಮಿಥ್ಯವ ನುಡಿಯವುದೇ ಮೃತ್ಯುಲೋಕ.  ಅಯ್ಯ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಮುಂತಾದ ವಚನಗಳ ಮೂಲಕ ಭಕ್ತಿ ಭಂಡಾರಿ ಬಸವಣ್ಣನವರು ಸದಾ ಸ್ಮರಣಿಯರಾಗಿದ್ದಾರೆ. ಬಸವಣ್ಣನವರ ವಚನಗಳು ಸಾರ್ವಕಾಲಿಕವಾಗಿವೆ.
 ಕೂಡಲ ಸಂಗಮದೇವ ಅಂಕಿತದ ಬಸವಣ್ಣನವರ ವಚನಗಳು ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ.  ಬಸವಣ್ಣನನವರು ಆಡಳಿತಗಾರರಾಗಿ, ದಾರ್ಶನಿಕರಾಗಿ, ತತ್ವಜ್ಞಾನಿಯಾಗಿ, ಅರ್ಥಶಾಸ್ತ್ರಜ್ಞರಾಗಿ, ರಾಜನೀತಿಜ್ಞರಾಗಿ, ಆಧ್ಯಾತ್ಮ ಜೀವಿಯಾಗಿ ಸಮಾಜ ಸುಧಾರಕರಾಗಿ  ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ.
– ಬಿ.ಎಸ್. ಮಾಳವಾಡ ನಿವೃತ್ತ  ಗ್ರಂಥಪಾಲಕರು ಹುಬ್ಬಳ್ಳಿ
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement