ಪ್ರಯಾಣಿಕರ ಚಿನ್ನಾಭರಣ ಕಳ್ಳತನ ಮಾಡಲು 110 ದಿನಗಳಲ್ಲಿ 200 ವಿಮಾನಗಳಲ್ಲಿ ಪ್ರಯಾಣಿಸಿದ್ದ ಈ ಮಹಾಕಳ್ಳ…!

ನವದೆಹಲಿ: ವಿವಿಧ ವಿಮಾನಗಳಲ್ಲಿ ಸಹ ಪ್ರಯಾಣಿಕರ ಬ್ಯಾಗ್‌ಗಳಿಂದ ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದ ಆರೋಪದ ಮೇಲೆ 40 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಈತ ವಿಮಾನದಲ್ಲಿ ಕದ್ದ ಹಣದಿಂದ ಕೇಂದ್ರ ದೆಹಲಿಯಲ್ಲಿ ಹೋಟೆಲ್ ಅನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದ ಎಂಬ ವರದಿಯೂ ಇದೆ…!
ಆರೋಪಿ ರಾಜೇಶ ಕಪೂರ್ ಎಂಬಾತ ಕಳ್ಳತನ ಮಾಡಲು ಕಳೆದ ವರ್ಷ ಕನಿಷ್ಠ 200 ವಿಮಾನಗಳಲ್ಲಿ ಪ್ರಯಾಣಿಸಿದ್ದಾನೆ ಹಾಗೂ ವರ್ಷದಲ್ಲಿ 110 ದಿನಗಳಿಗಿಂತ ಹೆಚ್ಚು ಕಾಲ ವಿಮಾನದಲ್ಲೇ ಪ್ರಯಾಣಿಸಿದ್ದಾನೆ…! ಹೀಗೆಂದು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ. ಹಲವಾರು ಸಂದರ್ಭಗಳಲ್ಲಿ, ತಾನು ಯಾರನ್ನು ಟಾರ್ಗೆಟ್‌ ಮಾಡುತ್ತಿದ್ದೇನೆಯೋ ಅವರ ಬಳಿ ಕುಳಿತುಕೊಳ್ಳಲು ವಿಮಾನಯಾನ ಸಂಸ್ಥೆಯಿಂದ ತನ್ನ ಸ್ಥಾನ ಬದಲಾಯಿಸಿಕೊಳ್ಳುತ್ತಿದ್ದ ಎಂದು ಅವರು ಹೇಳಿದರು. ರಾಜೇಶ ಕಪೂರ್ ವಿಮಾನಯಾನ ಸಂಸ್ಥೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳು ತನ್ನನ್ನು ಪತ್ತೆ ಹಚ್ಚುವುದಿಂದ ತಪ್ಪಿಸಿಕೊಳ್ಳಲು ತನ್ನ ಮೃತ ಸಹೋದರನ ಹೆಸರಿನಲ್ಲಿ ಟಿಕೆಟ್‌ಗಳನ್ನು ಬುಕಿಂಗ್‌ ಮಾಡುತ್ತಿದ್ದ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ, ಪೊಲೀಸ್ ಉಪ ಕಮಿಷನರ್ (ಐಜಿಐ) ಉಷಾ ರಂಗ್ನಾನಿ ಅವರು ಮಾತನಾಡಿ, ರಾಜೇಶ ಕಪೂರನನ್ನು ಪಹರ್‌ಗಂಜ್‌ನಿಂದ ಬಂಧಿಸಲಾಗಿದೆ ಎಂದು ಹೇಳಿದರು, ಕದ್ದ ಆಭರಣಗಳನ್ನು ಆತ ಅಲ್ಲಿ ಇಟ್ಟುಕೊಂಡಿದ್ದ.
ಆತ ಅವುಗಳನ್ನು ಕರೋಲ್ ಬಾಗ್‌ ನಲ್ಲಿ ಬಂಧಿಸಲ್ಪಟ್ಟ 46 ವರ್ಷದ ಶರದ್ ಜೈನ್‌ ಎಂಬಾತನಿಗೆ ಮಾರಾಟ ಮಾಡಲು ಯೋಜಿಸಿದ್ದ ಎಂದು ಅವರು ಹೇಳಿದರು.
ಕಳೆದ ಮೂರು ತಿಂಗಳಲ್ಲಿ ಪ್ರತ್ಯೇಕ ವಿಮಾನಗಳಲ್ಲಿ ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳು ವರದಿಯಾಗಿವೆ ಎಂದು ರಂಗ್ನಾನಿ ಹೇಳಿದ್ದಾರೆ, ನಂತರ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಐಜಿಐ) ವಿಮಾನ ನಿಲ್ದಾಣದಲ್ಲಿ ಅಪರಾಧಿಗಳನ್ನು ಹಿಡಿಯಲು ವಿಶೇಷ ತಂಡ ರಚಿಸಲಾಗಿತ್ತು ಎಂದರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಚುನಾವಣಾ ಆಯೋಗದಿಂದ 8,889 ಕೋಟಿ ರೂ.ಮೌಲ್ಯದ ವಸ್ತುಗಳ ವಶ

ಏಪ್ರಿಲ್ 11 ರಂದು ಹೈದರಾಬಾದ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಪ್ರಯಾಣಿಕರೊಬ್ಬರು 7 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳೆದುಕೊಂಡಿದ್ದರು. ಫೆಬ್ರವರಿ 2 ರಂದು ಮತ್ತೊಂದು ಕಳ್ಳತನ ವರದಿಯಾಗಿದ್ದು, ಅಮೃತಸರದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಪ್ರಯಾಣಿಕರೊಬ್ಬರು 20 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಕಳೆದುಕೊಂಡಿದ್ದರು.ತನಿಖೆಯ ಸಂದರ್ಭದಲ್ಲಿ ದೆಹಲಿ ಮತ್ತು ಅಮೃತಸರ ವಿಮಾನ ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಫ್ಲೈಟ್ ಮ್ಯಾನಿಫೆಸ್ಟ್‌ಗಳನ್ನು ವಿಶ್ಲೇಷಿಸಲಾಯಿತು ಹಾಗೂ ಕಳ್ಳತನದ ಘಟನೆಗಳು ವರದಿಯಾದ ಎರಡೂ ವಿಮಾನಗಳಲ್ಲಿ ಕಾಣಿಸಿಕೊಂಡಿದ್ದರಿಂದ ಶಂಕಿತನನ್ನು ಶಾರ್ಟ್‌ಲಿಸ್ಟ್ ಮಾಡಲಾಯಿತು ಎಂದು ಅವರು ಹೇಳಿದರು.

ಶಂಕಿತ ಪ್ರಯಾಣಿಕನ ಫೋನ್ ಸಂಖ್ಯೆಯನ್ನು ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳಿಂದ ಪಡೆಯಲಾಗಿದೆ, ಆದರೆ ಬುಕ್ಕಿಂಗ್ ಸಮಯದಲ್ಲಿ ಆತ ನಕಲಿ ಸಂಖ್ಯೆ ನೀಡಿದ್ದ. ತಾಂತ್ರಿಕ ಕಣ್ಗಾವಲಿನ ನಂತರ, ರಾಜೇಶ ಕಪೂರನ ಮೂಲ ಫೋನ್ ಸಂಖ್ಯೆಯನ್ನು ಪತ್ತೆಹಚ್ಚಲಾಯಿತು ಮತ್ತು ನಂತರ ಆತ ಸಿಕ್ಕಿಬಿದ್ದ ಎಂದು ಉಷಾ ರಂಗ್ನಾನಿ ಹೇಳಿದ್ದಾರೆ.
ನಿರಂತರ ವಿಚಾರಣೆಯಲ್ಲಿ, ಹೈದರಾಬಾದ್‌ನ ಒಂದು ಪ್ರಕರಣ ಸೇರಿದಂತೆ ಐದು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಆತ ಹೆಚ್ಚಿನ ಹಣವನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಜೂಜಿಗೆ ಖರ್ಚು ಮಾಡಿರುವುದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

ಕಪೂರ್ ಕಳ್ಳತನ, ಜೂಜು ಮತ್ತು ಕ್ರಿಮಿನಲ್ ನಂಬಿಕೆ ದ್ರೋಹದ 11 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ, ಈ ಪೈಕಿ ಐದು ಪ್ರಕರಣಗಳು ವಿಮಾನ ನಿಲ್ದಾಣಗಳಲ್ಲಿನದಾಗಿವೆ. ಕಪೂರ್ ದುರ್ಬಲ ಪ್ರಯಾಣಿಕರನ್ನು, ವಿಶೇಷವಾಗಿ ಅಂತಾರಾಷ್ಟ್ರೀಯವಾಗಿ ಪ್ರಯಾಣಿಸುವ ವಯಸ್ಸಾದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಎಂದು ಇನ್ನೊಬ್ಬ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
“ಅಂತಹ ಪ್ರಯಾಣಿಕರು ತಮ್ಮ ಹ್ಯಾಂಡ್‌ ಬ್ಯಾಗ್‌ಗಳಲ್ಲಿ ಬೆಲೆಬಾಳುವ ವಸ್ತುಗಳನ್ನು ಸಾಗಿಸುವುದನ್ನು ಗುರುತಿಸಿ, ಆತ ದೆಹಲಿ, ಚಂಡೀಗಢ ಮತ್ತು ಹೈದರಾಬಾದ್‌ನಂತಹ ಸ್ಥಳಗಳಿಗೆ ಹೋಗುವ ಪ್ರೀಮಿಯಂ ದೇಶೀಯ ವಿಮಾನಗಳಲ್ಲಿ ವಿಶೇಷವಾಗಿ ಏರ್ ಇಂಡಿಯಾ ಮತ್ತು ವಿಸ್ತಾರಾದಲ್ಲಿ ಪ್ರಯಾಣಿಸುತ್ತಿದ್ದ.
ಪ್ರಯಾಣಿಕರು ತಮ್ಮ ಆಸನಗಳಲ್ಲಿ ಕುಳಿತುಕೊಂಡಿದ್ದಾಗ ಅವರು ಹ್ಯಾಂಡ್‌ ಬ್ಯಾಗ್‌ಗಳಿಂದ ಬೆಲೆಬಾಳುವ ವಸ್ತುಗಳನ್ನು ಎಚ್ಚರಿಕೆಯಿಂದ ಕದಿಯುತ್ತಿದ್ದ ಎಂದು ಅಧಿಕಾರಿ ಹೇಳಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement