ಆಸ್ಪತ್ರೆಯಲ್ಲಿ ಎಡವಟ್ಟು : 4 ವರ್ಷದ ಮಗುವಿನ ಬೆರಳಿಗೆ ಶಸ್ತ್ರಚಿಕಿತ್ಸೆ ಮಾಡುವುದರ ಬದಲು ನಾಲಿಗೆಗೆ ಆಪರೇಶನ್‌ ಮಾಡಿದ ವೈದ್ಯರು…!

ಕೋಝಿಕ್ಕೋಡ್: ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರು ಗುರುವಾರ ಎಡವಟ್ಟು ಮಾಡಿದ್ದು, 4 ವರ್ಷದ ಬಾಲಕಿಗೆ ಬೆರಳಿನ ಶಸ್ತ್ರಚಿಕಿತ್ಸೆ ಮಾಡುವ ಬದಲಿಗೆ ನಾಲಿಗೆಗೆ ಶಸ್ತ್ರಚಿಕಿತ್ಸೆಯನ್ನು ಮಾಡಿದ ಘಟನೆ ವರದಿಯಾಗಿದೆ.
ವೈದ್ಯಕೀಯ ಕಾಲೇಜು ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರದಲ್ಲಿ ಮಗುವಿನ ಕೈಯಲ್ಲಿರುವ ಆರನೇ ಬೆರಳನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ನಿಗದಿ ಪಡಿಸಲಾಗಿತ್ತು. ಆದರೆ, ಶಸ್ತ್ರಚಿಕಿತ್ಸೆಯ ನಂತರ ಮಗುವಿನ ಬಾಯಿಯಲ್ಲಿ ಹತ್ತಿ ತುಂಬಿರುವುದು ಪತ್ತೆಯಾದಾಗ ಈ ದೋಷವು ಬೆಳಕಿಗೆ ಬಂದಿದೆ ಎಂದು ಬಾಲಕಿಯ ಕುಟುಂಬದವರು ಆರೋಪಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆಗೆ ಆದೇಶಿಸಲಾಗಿದೆ.

ನಾಲ್ಕು ವರ್ಷದ ಬಾಲಕಿಯ ಒಂದು ಕೈಯಲ್ಲಿ ಆರು ಬೆರಳುಗಳಿದ್ದವು. ಅದರಲ್ಲಿ ಒಂದು ಬೆರಳನ್ನು ತೆಗೆಸಲು ಶಸ್ತ್ರಚಿಕಿತ್ಸೆಗೆ ನಿಗದಿ ಮಾಡಲಾಗಿತ್ತು. ಅದಕ್ಕಾಗಿ ಬಾಲಕಿಯ ಕುಟುಂಬಸ್ಥರು ಆಸ್ಪತ್ರೆಗೆ ಬಂದಿದ್ದರು. ಆದರೆ, ಆಪರೇಷನ್‌ ಥಿಯೇಟರ್‌ನಲ್ಲಿ ಯಡವಟ್ಟಾಗಿದೆ. ಬಾಲಕಿಯ ಕೈನಲ್ಲಿದ್ದ ಆರನೇ ಬೆರಳಿನ ಶಸ್ತ್ರ ಚಿಕಿತ್ಸೆ ಮಾಡುವುದರ ಬದಲಿಗೆ ನಾಲಿಗೆಯಲ್ಲಿ ಸಮಸ್ಯೆಯಿದೆ ಎಂದು ಅಂದುಕೊಂಡ ವೈದ್ಯರು ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಮಗುವಿನ ಬಾಯಿಯಲ್ಲಿ ಹತ್ತಿ ತುಂಬಿರುವುದನ್ನು ಪರಿಶೀಲಿಸಿದಾಗ ಹಾಗೂ ಕೈಯಲ್ಲಿ ಆರನೇ ಬೆರಳು ಹಾಗೆಯೇ ಇದ್ದುದನ್ನು ಕಂಡುಕೊಂಡ ನಂತರ ಶಸ್ತ್ರಚಿಕಿತ್ಸೆ ಕೈ ಬದಲಿಗೆ ಮಗುವಿನ ನಾಲಿಗೆಗೆ ನಡೆದಿದೆ ಎಂಬುದು ಕುಟುಂಬಸ್ಥರಿಗೆ ಗೊತ್ತಾಗಿದೆ.

ಪ್ರಮುಖ ಸುದ್ದಿ :-   ರಂಜಾನ್ ಮಾಸದಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಕಚೇರಿಯಿಂದ ಬೇಗನೆ ಹೊರಡಲು ಅನುಮತಿ ನೀಡಿದ ತೆಲಂಗಾಣ ಸರ್ಕಾರ

ಬಾಲಕಿಯ ಕುಟುಂಬಸ್ಥರು ಘಟನೆ ಕುರಿತು ವೈದ್ಯಕೀಯ ಕಾಲೇಜು ಠಾಣೆಗೆ ದೂರು ನೀಡಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಮಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ದೂರಿನಲ್ಲಿ ಕುಟುಂಬದವರು ತಿಳಿಸಿದ್ದಾರೆ.
‘ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮತ್ತೆ ಯಾರಿಗೂ ಇಂತಹ ಅನುಭವ ಆಗಬಾರದು’ ಎಂದು ಮಗುವಿನ ಮನೆಯವರು ಹೇಳಿದ್ದಾರೆ. ಮಗುವಿಗೆ ನಾಲಿಗೆಗೆ ಯಾವುದೇ ತೊಂದರೆ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ಇದರಿಂದ ಮಗುವಿಗೆ ಯಾವುದೇ ವ್ಯತಿರಿಕ್ತ ಪರಿಣಾಮಗಳು ಉಂಟಾದರೆ ಆಸ್ಪತ್ರೆಯ ಅಧಿಕಾರಿಗಳು ಜವಾಬ್ದಾರರು ಎಂದು ಕುಟುಂಬ ಹೇಳಿದೆ.
ಒಂದೇ ದಿನಾಂಕದಂದು ಇಬ್ಬರು ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದರಿಂದ ತಪ್ಪಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಈ ಘಟನೆಯ ವರದಿಯಾಗುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಅವರು, ಘಟನೆಯ ಕುರಿತು ತಕ್ಷಣ ತನಿಖೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಸೂಚಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement