ಮೈಸೂರು: ಕೌಟುಂಬಿಕ ಕಲಹದಿಂದ ಸ್ಯಾಂಡಲ್ ವುಡ್ ಸಿನಿಮಾ ನಟಿ, ಕಾಂಗ್ರೆಸ್ ನಾಯಕಿಯನ್ನು ಭೀಕರವಾಗಿ ಹತ್ಯೆಗೈದ ಘಟನೆ ಮೈಸೂರು ಜಿಲ್ಲೆಯ ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಆಕೆಯ ಪತಿಯೇ ಅವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಆತ ಪರಾರಿಯಾಗಿದ್ದಾನೆ.
ಕೊಲೆಯಾದ ನಟಿಯನ್ನು ವಿದ್ಯಾ ನಂದೀಶ ಎಂದು ಗುರುತಿಸಲಾಗಿದೆ. ಸೋಮವಾರ ತಡರಾತ್ರಿ ವಿದ್ಯಾ ಬನ್ನೂರಿನ ತುರಗನೂರಿನಲ್ಲಿದ್ದ ಪತಿ ಮನೆಗೆ ತೆರಳಿದ್ದಾಗ ದಂಪತಿ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಪತಿ ನಂದೀಶ ಪತ್ನಿ ವಿದ್ಯಾ ಅವರಿಗೆ ಆಯುಧದಿಂದ ತಲೆಗೆ ಹೊಡೆದಿದ್ದರಿಂದ ಗಂಭೀರವಾಗಿ ಗಾಯಗೊಂಡು ವಿದ್ಯಾ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಪತಿ ನಂದೀಶ ಪರಾರಿಯಾಗಿದ್ದು, ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ. ವಿದ್ಯಾ ಮೈಸೂರಿನ ಶ್ರೀರಾಂಪುರ ನಿವಾಸಿಯಾಗಿದ್ದು, ಬನ್ನೂರಿನ ತುರಗನೂರಿನ ನಂದೀಶ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರಿಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ವಿದ್ಯಾ ಅವರು ಸಿನಿಮಾ ಹಾಗೂ ರಾಜಕೀಯದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಅವರು ಕನ್ನಡದ ಹಲವಾರು ಸಿನಿಮಾದಲ್ಲಿ ಪೋಷಕರ ಪಾತ್ರವನ್ನು ಮಾಡಿದ್ದಾರೆ. ʼಭಜರಂಗಿʼ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೆ, ʼಅಜಿತ್ʼ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅವರು, ಕಾಂಗ್ರೆಸ್ ಪಕ್ಷದ ಮೈಸೂರು ನಗರ ಪ್ರಧಾನ ಕಾರ್ಯದರ್ಶಿಯಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ