ಜಿಲ್ಲಾ ನಿಬಂಧಕರ ನ್ಯಾಯಾಲಯದ ಆದೇಶಕ್ಕೆ ಸಂಯುಕ್ತ ನಿಬಂಧಕರ ನ್ಯಾಯಾಲಯ ತಡೆಯಾಜ್ಞೆ : ಟಿಎಸ್‌ಎಸ್‌ ಅಧ್ಯಕ್ಷರಾಗಿ ಗೋಪಾಲಕೃಷ್ಣ ವೈದ್ಯ ಪುನಃ ಅಧಿಕಾರ ಸ್ವೀಕಾರ

ಶಿರಸಿ: ಟಿಎಸ್‌ಎಸ್ ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿ ರದ್ದತಿ ಹಾಗೂ ಆಡಳಿತ ಅಧಿಕಾರಿ ನೇಮಕದ ಕುರಿತು ಸಹಕಾರ ಸಂಘಗಳ ಜಿಲ್ಲಾ ನಿಬಂಧಕರ ನ್ಯಾಯಾಲಯ ನೀಡಿದ ಆದೇಶಕ್ಕೆ ಇಲಾಖೆಯ ಬೆಳಗಾವಿಯ ಸಂಯುಕ್ತ ನಿಬಂಧಕರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಗೋಪಾಲಕೃಷ್ಣ ವೈದ್ಯ ಅವರು ಹೇಳಿದ್ದು, ಈ ಹಿನ್ನೆಲೆಯಲ್ಲಿ ಅವರು ಪುನಃ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಟಿಎಸ್‌ಎಸ್ ಸಹಕಾರಿ ಸಂಸ್ಥೆಗೆ ನಡೆದ ಚುನಾವಣೆ ಅಕ್ರಮ ಎಂದು ಸದಸ್ಯರಿಬ್ಬರು ಸಹಕಾರ ಇಲಾಖೆಯ ಜಿಲ್ಲಾ ನಿಬಂಧಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ದೂರಿನ ನಂತರ ಆರು ತಿಂಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ನಿಬಂಧಕರು ಚುನಾವಣಾ ಪ್ರಕ್ರಿಯೆಯಲ್ಲಿ ಲೋಪದೋಷವಾಗಿದೆ ಎಂದು ಹೇಳಿ ಆಡಳಿತ ಮಂಡಳಿಯನ್ನು ಅಸಿಂಧುಗೊಳಿಸಿ ಆಡಳಿತಾಧಿಕಾರಿ ನೇಮಕ ಮಾಡಿದ್ದರು. ತಕ್ಷಣವೇ ಆಡಳಿತಾಧಿಕಾರಿ ಅಧಿಕಾರವನ್ನೂ ಸ್ವೀಕಾರ ಮಾಡಿದ್ದರು.

ಇದರ ಬೆನ್ನಲೇ ವಜಾಗೊಂಡ ಆಡಳಿತ ಮಂಡಳಿ ಪ್ರಮುಖರು ಬೆಳಗಾವಿಯ ಸಂಯುಕ್ತ ನಿಬಂಧಕರು ಬಳಿ ನ್ಯಾಯಕ್ಕೆ ಮೊರೆ ಹೋಗಿತ್ತು. ಸೋಮವಾರ ಇದಕ್ಕೆ ಸಂಬಂಧಿಸಿದಂತೆ ಸಂಯುಕ್ತ ನಿಬಂಧಕರ ನ್ಯಾಯಾಲಯ ಜಿಲ್ಲಾ ನಿಬಂಧಕರ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದಾರೆ. ಅಲ್ಲದೇ ಹಿಂದೆ ಚುನಾವಣಾ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಮಂಡಳಿಗೆ ಅಧಿಕಾರ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬೆಳಗಾವಿಯ ಜಂಟಿ ನಿಬಂಧಕರ ನ್ಯಾಯಾಲಯ ತಡೆಯಾಜ್ಞೆ ನೀಡಿದ ನಂತರ ಮಂಗಳವಾರ ವೈದ್ಯ ನೇತೃತ್ವದ ಆಡಳಿತ ಮಂಡಳಿ ಮತ್ತೆ ಅಧಿಕಾರ ವಹಿಸಿಕೊಂಡಿತು. ಸಂಯುಕ್ತ ನಿಬಂಧಕರ ನ್ಯಾಯಾಲಯದ ಆದೇಶ ಪ್ರತಿ ಹಿಡಿದು ಟಿಎಸ್‌ಎಸ್ ಆಗಮಿಸಿದ ಗೋಪಾಲಕೃಷ್ಣ ವೈದ್ಯ ನೇತೃತ್ವದ ತಂಡ ಆಡಳಿತಾಧಿಕಾರಿಯನ್ನು ಭೇಟಿಯಾಗಿ ಆದೇಶಪತ್ರ ನೀಡಿದರು. ನಂತರ ಅಧಿಕಾರದ ಹಸ್ತಾಂತರ ನಡೆಯಿತು.

ಪ್ರತಿಭಟನೆಗೆ ಸೇರಿದ್ದ ರೈತರು….
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಆಡಳಿತಾಧಿಕಾರಿ ನೇಮಕ ವಿರೋಧಿಸಿ ಪ್ರತಿಭಟನೆ ನಡೆಸಲು ದೊಡ್ಡ ಸಂಖ್ಯೆಯಲ್ಲಿ ರೈತ ಸದಸ್ಯರು ಟಿಎಸ್‌ಎಸ್ ಆವಾರಕ್ಕೆ ಆಗಮಿಸಿದ್ದರು. ಆಡಳಿತಾಧಿಕಾರಿ ನೇಮಕಕ್ಕೆ ಜಂಟಿ ನಿಬಂಧಕರು ತಡೆಯಾಜ್ಞೆ ನೀಡಿದ್ದಾರೆ ಎನ್ನುವ ವಿಷಯ ಗೊತ್ತಾಗುತ್ತಿದ್ದಂತೆ ಹರ್ಷೊದ್ಘಾರ ಮೊಳಗಿಸಿದರು. ನಂತರವೂ ಸಹಕಾರ ಕ್ಷೇತ್ರದ ಉಳಿವಿಗೆ ಮೆರವಣಿಗೆ ಮೂಲಕ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಪ್ರಮುಖ ಸುದ್ದಿ :-   ಬೆಂಗಳೂರು | ಸೂಟ್‌ಕೇಸ್‌ ನಲ್ಲಿ ಹುಡುಗಿಯ ಶವ ಪತ್ತೆ, ಚಲಿಸುತ್ತಿರುವ ರೈಲಿನಿಂದ ಎಸೆದಿರುವ ಶಂಕೆ

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement