ಲಾಹೋರ್: ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಭಾರತದೊಂದಿಗೆ ನಾವು ಮಾಡಿಕೊಂಡಿದ್ದ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸಿದೆ ಎಂಬುದನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಒಪ್ಪಿಕೊಂಡಿದ್ದಾರೆ.
ಜನರಲ್ ಪರ್ವೇಜ್ ಮುಷರಫ್ ಅವರ ಕಾರ್ಗಿಲ್ ದುಸ್ಸಾಹಸವನ್ನು ಸ್ಪಷ್ಟವಾಗಿ ಉಲ್ಲೇಖಿಸಿ ನವಾಜ್ ಷರೀಫ್ ಈ ಹೇಳಿಕೆ ನೀಡಿದ್ದಾರೆ. “ಮೇ 28, 1998 ರಂದು ಪಾಕಿಸ್ತಾನವು ಐದು ಪರಮಾಣು ಪರೀಕ್ಷೆಗಳನ್ನು ನಡೆಸಿತು. ಅದರ ನಂತರ ವಾಜಪೇಯಿ ಸಾಹೇಬ್ ಇಲ್ಲಿಗೆ ಬಂದು ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡರು. ಆದರೆ ನಾವು ಆ ಒಪ್ಪಂದವನ್ನು ಉಲ್ಲಂಘಿಸಿದ್ದೇವೆ …ಅದು ನಮ್ಮ ತಪ್ಪು ” ಎಂದು ಪಾಕಿಸ್ತಾನದ ಆಡಳಿತ ಪಕ್ಷದ ಅಧ್ಯಕ್ಷರಾಗಿ ತಮ್ಮನ್ನು ಆಯ್ಕೆ ಮಾಡಿದ ಪಿಎಂಎಲ್-ಎನ್ ಜನರಲ್ ಕೌನ್ಸಿಲ್ ಸಭೆಯಲ್ಲಿ ಮಾತನಾಡುತ್ತಿದ್ದಾಗ ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.
ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯವು ಅವರನ್ನು ಅನರ್ಹಗೊಳಿಸಿದ ಆರು ವರ್ಷಗಳ ನಂತರ ಅವರನ್ನು ಆಡಳಿತ ಪಕ್ಷದ ಅಧ್ಯಕ್ಷರನ್ನಾಗಿ ಜನರಲ್ ಕೌನ್ಸಿಲ್ ಆಯ್ಕೆ ಮಾಡಿದೆ.
ಲಾಹೋರಿನಲ್ಲಿ ನಡೆದ ಐತಿಹಾಸಿಕ ಶೃಂಗಸಭೆಯ ನಂತರ, ನವಾಜ್ ಷರೀಫ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಫೆಬ್ರವರಿ 21, 1999 ರಂದು ಲಾಹೋರ್ ಘೋಷಣೆಗೆ ಸಹಿ ಹಾಕಿದರು. ಉಭಯ ದೇಶಗಳ ನಡುವಿನ ಶಾಂತಿ ಮತ್ತು ಸ್ಥಿರತೆಯ ದೃಷ್ಟಿಕೋನದ ಬಗ್ಗೆ ಒತ್ತಿ ಹೇಳಿತ್ತು. ಆದರೆ ಕೆಲವೇ ತಿಂಗಳ ನಂತರ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಪಾಕಿಸ್ತಾನದ ಸೈನಿಕರ ಒಳನುಗ್ಗುವಿಕೆಯು ಕಾರ್ಗಿಲ್ ಸಂಘರ್ಷಕ್ಕೆ ಕಾರಣವಾಯಿತು.
“ಅಧ್ಯಕ್ಷ ಬಿಲ್ ಕ್ಲಿಂಟನ್ ಪಾಕಿಸ್ತಾನಕ್ಕೆ ಪರಮಾಣು ಪರೀಕ್ಷೆಗಳನ್ನು ನಡೆಸದಂತೆ ತಡೆಯಲು 5 ಬಿಲಿಯನ್ ಅಮೆರಿಕನ್ ಡಾಲರ್ ಹಣ ನೀಡಿದ್ದರು ಆದರೆ ನಾನು ನಿರಾಕರಿಸಿದೆ. (ಮಾಜಿ ಪ್ರಧಾನಿ) ಇಮ್ರಾನ್ ಖಾನ್ ಅವರಂತಹ ಒಬ್ಬ ವ್ಯಕ್ತಿ ನನ್ನ ಸೀಟಿನಲ್ಲಿ ಕುಳಿತಿದ್ದರೆ ಅವರು ಕ್ಲಿಂಟನ್ ಅವರ ಪ್ರಸ್ತಾಪವನ್ನು ಸ್ವೀಕರಿಸುತ್ತಿದ್ದರು” ಎಂದು ಪಾಕಿಸ್ತಾನ ತನ್ನ ಮೊದಲ ಪರಮಾಣು ಪರೀಕ್ಷೆಯ 26 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಷರೀಫ್ ಹೇಳಿದರು. .
74 ವರ್ಷದ ಷರೀಫ್ ಅವರು, 2017 ರಲ್ಲಿ ಸುಳ್ಳು ಪ್ರಕರಣದಲ್ಲಿ ಪಾಕಿಸ್ತಾನದ ಆಗಿನ ಮುಖ್ಯ ನ್ಯಾಯಮೂರ್ತಿ ಸಾಕಿಬ್ ನಿಸಾರ್ ಅವರು ತಮ್ಮನ್ನು ಹೇಗೆ ಪ್ರಧಾನಿ ಹುದ್ದೆಯಿಂದ ತೆಗೆದುಹಾಕಿದರು ಎಂಬುದರ ಕುರಿತು ಮಾತನಾಡಿದರು. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಸಂಸ್ಥಾಪಕ ನಾಯಕ ಇಮ್ರಾನ್ ಖಾನ್ ವಿರುದ್ಧದ ಪ್ರಕರಣಗಳು ಎಲ್ಲವೂ ನಿಜವಾದ ಪ್ರಕರಣಗಳಾಗಿವೆ. ಆದರೆ ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳು ಸುಳ್ಳು ಪ್ರಕರಣಗಳಾಗಿವೆ ಎಂದು ಅವರು ಹೇಳಿದರು.
ಇಮ್ರಾನ್ ಖಾನ್ ಅವರನ್ನು ಅಧಿಕಾರಕ್ಕೆ ತರಲು 2017 ರಲ್ಲಿ ತಮ್ಮ ಸರ್ಕಾರವನ್ನು ಉರುಳಿಸುವಲ್ಲಿ ಮಾಜಿ ಐಎಸ್ಐ ಮುಖ್ಯಸ್ಥ ಜನರಲ್ ಜಹಿರುಲ್ ಇಸ್ಲಾಂ ಹೇಗೆ ಪ್ರಮುಖ ಪಾತ್ರ ವಹಿಸಿದ್ದರ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ತಮ್ಮನ್ನು ಐಎಸ್‌ಐ ರಾಜಖಿಯವಾಗಿ ಮುನ್ನೆಲೆಗೆ ತಂದಿಲ್ಲ ಎಂದು ಇಮ್ರಾನ್ ಖಾನ್ ಹೇಳಲಿ ಎಂದು ಸವಾಲು ಹಾಕಿದರು.
“ನಮ್ಮನ್ನು (ಸೈನ್ಯ ಬೆಂಬಲಿಸುತ್ತಿದೆ) ದೂಷಿಸಬೇಡಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (PTI) ಅನ್ನು ಅಧಿಕಾರಕ್ಕೆ ತರುವ ಬಗ್ಗೆ ಜನರಲ್ ಇಸ್ಲಾಂ ಮಾತನಾಡಿದ್ದರ ಎಂಬ ಬಗ್ಗೆ ಹೇಳಬೇಕು ಎಂದು ನಾನು ಇಮ್ರಾನ್ ಅವರನ್ನು ಕೇಳುತ್ತೇನೆ. ಯಾಕೆಂದರೆ ಇಮ್ರಾನ್ ಖಾನ್ ಮಿಲಿಟರಿಯ ಕಾಲು ಹಿಡಿದುಕೊಂಡಿದ್ದರು” ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಹುದ್ದೆಗೆ (2014 ರಲ್ಲಿ) ರಾಜೀನಾಮೆ ನೀಡುವಂತೆ ಜನರಲ್ ಇಸ್ಲಾಂನಿಂದ ಮೂರು ಬಾರಿ ಸಂದೇಶ ಸ್ವೀಕರಿಸಿದೆ. ಆದರೆ ನಾನು ನಿರಾಕರಿಸಿದಾಗ, ಆತ ನನಗೆ ಬೆದರಿಕೆ ಹಾಕಿದ ಎಂದು ಅವರು ಹೇಳಿದರು.
ಷರೀಫ್ ಅವರ ಕಿರಿಯ ಸಹೋದರ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲು ಪ್ರಯತ್ನಗಳನ್ನು ಮಾಡಲಾಯಿತು ಆದರೆ ಶೆಹಬಾಜ್ ನನಗೆ ನಿಷ್ಠರಾಗಿದ್ದರು. ಶೆಹಬಾಜ್ ಅವರಿಗೆ ಕೂಡ ಈ ಹಿಂದೆ ಪ್ರಧಾನಿಯಾಗುವಂತೆ ಮತ್ತು ನನ್ನನ್ನು ಬಿಟ್ಟು ಬರುವಂತೆ ಸೂಚಿಸಲಾಯಿತು. ಆದರೆ ಶೆಹಬಾಜ್ ಅದನ್ನು ನಿರಾಕರಿಸಿದರು” ಎಂದು ಅವರು ಹೇಳಿದರು.
ಪಿಎಂಎಲ್-ಎನ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಪಕ್ಷವನ್ನು ಬಲಪಡಿಸುವ ಪ್ರಯತ್ನಗಳನ್ನು ಮಾಡುವುದಾಗಿ ಷರೀಫ್ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ