ಮಧ್ಯಪ್ರದೇಶದ ಇಂದೋರ್ (Indore) ಯೋಗ ಕೇಂದ್ರದಲ್ಲಿ ಆಸ್ತ ಯೋಗ ಕ್ರಾಂತಿ ಅಭಿಯಾನದ ವತಿಯಿಂದ ನಡೆದ ಯೋಗ ಕಾರ್ಯಕ್ರಮದಲ್ಲಿ ನಗು ಮತ್ತು ತೂಕ ಇಳಿಸುವ ಯೋಗಕ್ಕೆ ಹೆಸರಾದ ಬಲ್ವಿಂದರ್ ಸಿಂಗ್ ಛಾಬ್ರಾ (Balwinder Singh Chhabra) ಎಂಬ ನಿವೃತ್ತ ಸೈನಿಕ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ವೇದಿಕೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗಲೇ ಕುಸಿದುಬಿದ್ದು ಪ್ರಾಣ ಬಿಟ್ಟಿದ್ದಾರೆ.
ಈ ಯೋಗ ಕಾರ್ಯಕ್ರಮದಲ್ಲಿ ಜನರು ಆತ ಯೋಗ ಮಾಡುತ್ತಿದ್ದಾನೆ ಎಂದು ತಪ್ಪು ತಿಳಿದುಕೊಂಡ ಕಾರಣ ಅವರು ಕೆಳಗೆ ಬಿದ್ದರೂ ತಕ್ಷಣವೇ ಪ್ರತಿಕ್ರಿಯಿಸಲಿಲ್ಲ. ಇಂದೋರ್ ನಗರದ ಫೂಟಿ ಖೋಟಿ ಪ್ರದೇಶದಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯೋಗ ಶಿಬಿರದಲ್ಲಿ ಜನರ ಗುಂಪಿನೊಂದಿಗೆ ಯೋಗ ಮಾಡಿದ್ದ ಬಲ್ವೀರ್ ಸಿಂಗ್ ಛಾಬ್ರಾ ಕೈಯಲ್ಲಿ ರಾಷ್ಟ್ರಧ್ವಜದೊಂದಿಗೆ ದೇಶಭಕ್ತಿ ಗೀತೆಗೆ ನೃತ್ಯ ಮಾಡಿದರು. ನಂತರ ಡ್ಯಾನ್ಸ್ ಮಾಡುತ್ತ ರಾಷ್ಟ್ರಧ್ವಜ ಹಿಡಿದುಕೊಂಡೇ ವೇದಿಕೆಗೆ ಬಂದಿದ್ದಾರೆ. ನಂತರ ಹಠಾತ್ತನೆ ಕುಸಿದು ಪ್ರಜ್ಞಾಹೀನರಾಗಿದ್ದಾರೆ. ಆರಂಭದಲ್ಲಿ ಇದು ಅವರ ಪ್ರದರ್ಶನದ ಭಾಗ ಎಂದು ಜನರು ಭಾವಿಸಿದರು. ಹಾಗೂ ಚಪ್ಪಾಳೆ ತಟ್ಟುತ್ತಲೇ ಇದ್ದರು. ಆದರೆ ಸ್ವಲ್ಪಸಮಯದ ನಂತರವೂ ಅವರು ಏಳದೇ ಇದ್ದಾಗ ಅಲ್ಲಿದ್ದವರು ನೆರವಿಗೆ ಧಾವಿಸಿದ್ದಾರೆ.
ತಕ್ಷಣವೇ ಛಾಬ್ರಾ ಅವರಿಗೆ ಸಿಪಿಆರ್ ನೀಡಲಾಯಿತು ಮತ್ತು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಇಸಿಜಿ ಮತ್ತು ಇತರ ಪರೀಕ್ಷೆಗಳ ನಂತರ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಸೈನಿಕನ ಯೂನಿಫಾರಂ ಹಾಕಿ, ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡೇ ಬಲ್ವಿಂದರ್ ಸಿಂಗ್ ನೃತ್ಯ ಮಾಡುತ್ತಲೇ ಸಾವಿಗೀಡಾಗಿದ್ದಾರೆ. ಅವರ ಕುಟುಂಬವು ಛಾಬ್ರಾ ಕಣ್ಣು, ಚರ್ಮ ಹಾಗೂ ಇತರ ಅಂಗಗಳನ್ನು ದಾನ ಮಾಡಿದೆ. ಛಾಬ್ರಾ ಮಗ ಜಗಜಿತ್ ಸಿಂಗ್, ತಂದೆ ವರ್ಷಗಳಿಂದ ದೇಶಭಕ್ತಿಯ ನೃತ್ಯಗಳನ್ನು ಪ್ರದರ್ಶಿಸುತ್ತಿದ್ದರು ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು ಎಂದು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ