ವಕೀಲ ಮತ್ತು ಕೇರಳ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪ್ರಧಾನ ಕಾರ್ಯದರ್ಶಿಯಾಗಿರುವ ಜಾರ್ಜ್ ಕುರಿಯನ್ ಅವರು, ಅಚ್ಚರಿಯ ರೀತಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರು ತ್ರಿಶೂರ್ ಸಂಸದ ಸುರೇಶ ಗೋಪಿ ಅವರನ್ನು ಹೊರತುಪಡಿಸಿ ಕೇರಳದಿಂದ ಎರಡನೇ ಸಚಿವರಾಗಿ ಸಚಿವ ಸಂಪುಟ ಸೇರಿದ್ದಾರೆ.
ಸಮಾಜವಾದಿಗಳ ಒಂದು ಬಣವು 1980 ರಲ್ಲಿ ಜನಸಂಘದಿಂದ ಹೊಸದಾಗಿ ರೂಪುಗೊಂಡ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಲು ಜನತಾ ಪಕ್ಷವನ್ನು ತೊರೆದಾಗ, ಆ ಸಮಯದಲ್ಲಿ ಈ ನಿರ್ಧಾರ ತೆಗೆದುಕೊಂಡವರಲ್ಲಿ ಕೇವಲ 19 ವರ್ಷ ವಯಸ್ಸಿನ, ಕೊಟ್ಟಾಯಂನ ಸಣ್ಣ ಹಳ್ಳಿಯಾದ ಕನಕರಿಯ ಜಾರ್ಜ್ ಕುರಿಯನ್ ಸಹ ಒಬ್ಬರು. ಕ್ರೈಸ್ತ ಯುವಕನಾಗಿ ಬಲಪಂಥೀಯ ಹಿಂದುತ್ವದ ಒಲವಿನ ಸಂಘಟನೆಗೆ ಸೇರುವ ಅವರ ನಿರ್ಧಾರ, ಆ ಸಮಯದಲ್ಲಿ ಅಪರೂಪದ ಘಟನೆಯಾಗಿದ್ದು, ಅವರ ಸಂಪ್ರದಾಯವಾದಿ ಕ್ರಿಶ್ಚಿಯನ್ ಕುಟುಂಬ ವಲಯಗಳಿಂದ ಟೀಕೆಗೆ ಗುರಿಯಾಗಿತ್ತು. ಕುರಿಯನ್ ಕೇರಳದ ಅತ್ಯಂತ ಪ್ರಮುಖ ಕ್ರಿಶ್ಚಿಯನ್ ಚರ್ಚ್‌ಗಳಲ್ಲಿ ಒಂದಾದ ಸಿರೋ-ಮಲಬಾರ್ ಕ್ಯಾಥೋಲಿಕ್ ಚರ್ಚ್‌ಗೆ ಸೇರಿದವರು. ಆದರೆ ಈಗ ಅವರ ಅಂದು ತೆಗೆದುಕೊಂಡ ನಿರ್ಧಾರ ಈಗ ಫಲ ನೀಡಿದೆ.
63 ವರ್ಷ ವಯಸ್ಸಿನ ಕುರಿಯನ್, ಹಲವಾರು ಸವಾಲುಗಳನ್ನು ಜಯಿಸುವ ಮೂಲಕ ತಮ್ಮ ರಾಜಕೀಯ ಆಯ್ಕೆಯಾದ ಬಿಜೆಪಿಯಲ್ಲಿ ನಲವತ್ತು ವರ್ಷಗಳಿಂದ ಗಟ್ಟಿಯಾಗಿ ಉಳಿದಿದ್ದಾರೆ. ನೂತನ ಎನ್‌ಡಿಎ ಕ್ಯಾಬಿನೆಟ್‌ಗೆ ಅವರ ನೇಮಕವು ಅನಿರೀಕ್ಷಿತವಾಗಿದ್ದರೂ, ಕುರಿಯನ್ ಅವರ ರಾಜಕೀಯ ಚಟುವಟಿಕೆಗಳು ಮತ್ತು ಬಿಜೆಪಿಯನ್ನು ಪ್ರತಿನಿಧಿಸುವ ದೂರದರ್ಶನ ಚರ್ಚೆಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಅವರಿಗೆ ಪಕ್ಷವು ನೀಡಿದ ಯೋಗ್ಯ ಮನ್ನಣೆಯೂ ಹೌದು. ಕುರಿಯನ್ ಅವರು ಈಗಾಗಲೇ ಕೇರಳದಲ್ಲಿ ಚಿರಪರಿಚಿತ ವ್ಯಕ್ತಿ.
ಬಿಜೆಪಿ ಪಕ್ಷದಲ್ಲಿ ಅವರು ನಾಲ್ಕು ದಶಕಗಳಿಂದ ಸಕ್ರಿಯವಾಗಿದ್ದಾರೆ. ಬಿಜೆಪಿಯು ಚುನಾವಣಾ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸದ ರಾಜ್ಯವಾದ ಕೇರಳದಲ್ಲಿ ಕಠಿಣ ರಾಜಕೀಯ ವಾತಾವರಣದಲ್ಲಿದ್ದರೂ, ಕುರಿಯನ್ ಪಕ್ಷದೊಂದಿಗೆ ದೃಢವಾಗಿ ಉಳಿದುಕೊಂಡರು ಮತ್ತು ಅಲ್ಪಸಂಖ್ಯಾತರಿಗೆ, ವಿಶೇಷವಾಗಿ ಅವರು ಸೇರಿರುವ ಕ್ರಿಶ್ಚಿಯನ್ ಸಮುದಾಯಕ್ಕೆ ಬಿಜೆಪಿ ತಲುಪುವಂತೆ ಮಾಡಲು ಕೆಲಸ ಮಾಡಿದರು. ಕುರಿಯನ್ ಅವರು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಯುವಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಮತ್ತು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುವುದು ಸೇರಿದಂತೆ ವಿವಿಧ ಮಹತ್ವದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಮೋದಿ ನೇತೃತ್ವದ ಕ್ಯಾಬಿನೆಟ್‌ಗೆ ಸೇರ್ಪಡೆಗೊಳ್ಳುವ ಸಮಯದಲ್ಲಿ, ಕುರಿಯನ್ ಕೋರ್ ಕಮಿಟಿ ಸದಸ್ಯ ಮತ್ತು ಬಿಜೆಪಿಯ ರಾಜ್ಯ ಘಟಕದ ಉಪಾಧ್ಯಕ್ಷರಾಗಿದ್ದಾರೆ. ಮೋದಿ ಹಾಗೂ ಇತರ ಬಿಜೆಪಿ ನಾಯಕರು ಕೇರಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಭಾಷಣದ ಅನುವಾದಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.
ಬಿಜೆಪಿ ನಾಯಕರ ಪ್ರಕಾರ, ಎಂಎ (MA), ಎಲ್‌ಎಲ್‌ಬಿ (LLB) ಪದವೀಧರರಾದ ಕುರಿಯನ್, ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮೊದಲ ಮಲಯಾಳಿಯಾಗಿದ್ದಾರೆ. ಈ ಹಿಂದೆ, ಅವರು ಕೇಂದ್ರದ ಮಾಜಿ ರೈಲ್ವೆ ರಾಜ್ಯ ಸಚಿವ ಓ ರಾಜಗೋಪಾಲ್ ಅವರಿಗೆ ವಿಶೇಷ ಕರ್ತವ್ಯದ ಅಧಿಕಾರಿ (OSD) ಆಗಿ ಕಾರ್ಯನಿರ್ವಹಿಸಿದ್ದರು.
ಭಾನುವಾರ ಬೆಳಗ್ಗೆ ಪ್ರಧಾನಿ ಮೋದಿ ಅವರೊಂದಿಗಿನ ಸಭೆಯಲ್ಲಿ ಕುರಿಯನ್ ಕಾಣಿಸಿಕೊಂಡಾಗ ಅವರ ಸಚಿವ ಸಂಪುಟ ಸೇರ್ಪಡೆ ಬಗ್ಗೆ ಊಹಾಪೋಹಗಳು ಹೊರಬಿದ್ದಿವು. ದೆಹಲಿಯಲ್ಲಿ ಬಿಜೆಪಿಯ ಕೇಂದ್ರ ನಾಯಕತ್ವದೊಂದಿಗಿನ ಅವರ ಬಲವಾದ ಸಂಪರ್ಕವು ಅವರ ಕ್ಯಾಬಿನೆಟ್ ನೇಮಕಾತಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಕ್ರೈಸ್ತ ಮತಗಳು ಪ್ರಮುಖವಾಗಿದ್ದ ತ್ರಿಶೂರ್‌ನಲ್ಲಿ ಸುರೇಶ್ ಗೋಪಿ ಅವರ ಗೆಲುವನ್ನು ಪರಿಗಣಿಸಿ ಕ್ರೈಸ್ತ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವ ಬಿಜೆಪಿಯ ಕಾರ್ಯತಂತ್ರದ ಭಾಗವಾಗಿ ಕುರಿಯನ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಜೊತೆಗೆ ಬಿಜೆಪಿಯಲ್ಲಿ ಅವರ ಕಾರ್ಯನಿರ್ವಹಣೆ ಹಾಗೂ ನಿಷ್ಠಾವಂತಿಕೆಯೂ ಪರಿಗಣಿಸಲ್ಪಟ್ಟಿದೆ.
ಅಲ್ಫೋನ್ಸ್ ಕಣ್ಣಂತಾನಂ ಅವರನ್ನು ಮೊದಲ ಮೋದಿ ಸರ್ಕಾರದಲ್ಲಿ ಮಂತ್ರಿ ನೇಮಕಾತಿಯೊಂದಿಗೆ ಮೊದಲ ಹಿಂದೆ ಪ್ರಯತ್ನ ಮಾಡಿದ್ದರೂ ಅದು 2019 ರ ಚುನಾವಣೆಯಲ್ಲಿ ಕೇರಳದಲ್ಲಿ ಚುನಾವಣಾ ಲಾಭವ ತಂದಿರಲಿಲ್ಲ. ಆದರೂ ಕ್ರಿಶ್ಚಿಯನ್ ಸಮುದಾಯವನ್ನು ತಲುಪುವ ಮೂಲಕ ಕೇರಳದಲ್ಲಿ ತನ್ನ ನೆಲೆಯನ್ನು ಮತ್ತಷ್ಟು ಬಲಪಡಿಸುವ ಬಿಜೆಪಿಯ ಪ್ರಯತ್ನಗಳ ಭಾಗವಾಗಿ ಕುರಿಯನ್ ಸೇರ್ಪಡೆಯನ್ನು ನೋಡಲಾಗುತ್ತದೆ.
ಕುರಿಯನ್ ಈ ಹಿಂದೆ 2016 ರ ವಿಧಾನಸಭಾ ಚುನಾವಣೆಯಲ್ಲಿ ಉಮ್ಮನ್ ಚಾಂಡಿ ವಿರುದ್ಧ ಪುತ್ತುಪಲ್ಲಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರ ಪತ್ನಿ ಅನ್ನಕುಟ್ಟಿ, ಭಾರತೀಯ ಸೇನೆಯಲ್ಲಿ ನರ್ಸಿಂಗ್ ಅಧಿಕಾರಿಯಾಗಿ ಕೆಲಸ ಮಾಡಿ ಈಗ ನಿವೃತ್ತರಾಗಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ