ತ್ರಿಶೂರ್ : ಕೇಂದ್ರ ಸಚಿವ ಮತ್ತು ತ್ರಿಶೂರ್ ಸಂಸದ ಹಾಗೂ ನಟ ಸುರೇಶ ಗೋಪಿ ಅವರು ಶನಿವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ “ಭಾರತದ ಮಾತೆ” ಇದ್ದಂತೆ ಮತ್ತು ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ದಿವಂಗತ ಕೆ. ಕರುಣಾಕರನ್ “ಧೈರ್ಯಶಾಲಿ ಆಡಳಿತಗಾರ” ಎಂದು ಬಣ್ಣಿಸಿದ್ದಾರೆ. ಕೇರಳದ ಮಾರ್ಕ್ಸ್‌ವಾದಿ ಹಿರಿಯ ಇ.ಕೆ. ನಾಯನಾರ್ ತಮ್ಮ “ರಾಜಕೀಯ ಗುರುಗಳು” ಎಂದು ಹೇಳಿದ್ದಾರೆ.
ಕೇರಳದ ಪುಂಕುನ್ನಂನಲ್ಲಿರುವ ಕರುಣಾಕರನ್ ಅವರ ಸ್ಮಾರಕ ಮುರಳಿ ಮಂದಿರಕ್ಕೆ ಭೇಟಿ ನೀಡಿದ ನಂತರ ಗೋಪಿ ಸುದ್ದಿಗಾರರೊಂದಿಗೆ ಮಾತನಾಡಿದರು. ಗಮನಾರ್ಹ ವಿಷಯವೆಂದರೆ, ಏಪ್ರಿಲ್ 26 ರ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಯಲ್ಲಿ ಕರುಣಾಕರನ್ ಅವರ ಮಗ ಮತ್ತು ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳುವ ಮೂಲಕ ಸುರೇಶ ಗೋಪಿ ತ್ರಿಶೂರ್ ಲೋಕಸಭಾ ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.
ಕರುಣಾಕರನ್ ಅವರ ಸ್ಮಾರಕಕ್ಕೆ ತಾವು ಭೇಟಿ ನೀಡಿದ್ದಕ್ಕೆ ಯಾವುದೇ ರಾಜಕೀಯ ಅರ್ಥವನ್ನು ಕಲ್ಪಿಸದಂತೆ ಅವರು ಮಾಧ್ಯಮದವರಿಗೆ ಮನವಿ ಮಾಡಿದರು. ತಮ್ಮ “ಗುರುಗಳಿಗೆ” ಗೌರವ ಸಲ್ಲಿಸಲು ಬಂದಿದ್ದೇನೆ ಎಂದು ಹೇಳಿದರು.
ನಾಯನಾರ್ ಮತ್ತು ಅವರ ಪತ್ನಿ ಶಾರದಾ ಟೀಚರ್ ಅವರಂತೆ ತಾನು ಕರುಣಾಕರನ್ ಮತ್ತು ಅವರ ಪತ್ನಿ ಕಲ್ಯಾಣಿಕುಟ್ಟಿ ಅಮ್ಮ ಅವರೊಂದಿಗೆ ನಿಕಟ ಬಾಂಧವ್ಯ ಹೊಂದಿರುವುದಾಗಿ ತಿಳಿಸಿದರು. ಅವರು ಜೂನ್ 12 ರಂದು ಕಣ್ಣೂರಿನ ನಾಯನಾರ್ ಅವರ ಮನೆಗೆ ಭೇಟಿ ನೀಡಿದ್ದರು.
ಸುರೇಶ ಗೋಪಿ ಅವರು ಇಂದಿರಾ ಗಾಂಧಿಯನ್ನು “ಭಾರತದ ಮಾತೆ” ಯಂತೆ ನೋಡಿರುವುದಾಗಿ ಹೇಳಿದ್ದಾರೆ ಮತ್ತು ಕೆ. ಕರುಣಾಕರನ್ ಅವರು “ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ಪಿತಾಮಹ” ಎಂದು ಹೇಳಿದರು. ಕರುಣಾಕರನ್ ಅವರನ್ನು ಕೇರಳದಲ್ಲಿ ಕಾಂಗ್ರೆಸ್‌ನ “ಪಿತಾಮಹ” ಎಂದು ಬಣ್ಣಿಸಿರುವುದು ದಕ್ಷಿಣ ರಾಜ್ಯದ ಕಾಂಗ್ರೆಸ್ ಸ್ಥಾಪಕರು ಅಥವಾ ಸಹ-ಸಂಸ್ಥಾಪಕರಿಗೆ ಅಗೌರವವಲ್ಲ ಎಂದು ಅವರು ಇದೇ ವೇಳೆ ಹೇಳಿದರು. ನಟ- ರಾಜಕಾರಣಿ ಸುರೇಶ ಗೋಪಿ ಕೆ.ಕರುಣಾಕರನ್ ಅವರನ್ನು “ಧೈರ್ಯಶಾಲಿ ಆಡಳಿತಗಾರ” ಎಂದು ಕರೆದರು.
ಬಳಿಕ ಗೋಪಿ ನಗರದ ಪ್ರಸಿದ್ಧ ಲೂರ್ದ್ ಮಾತಾ ಚರ್ಚ್‌ಗೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಸುರೇಶ ಗೋಪಿ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಗೆಲುವ ಸಾಧಿಸುವ ಮೂಲಕ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಕೇರಳದಲ್ಲಿ ಬಿಜೆಪಿಗೆ ಗೆಲುವು ತಂದುಕೊಟ್ಟಿದ್ದಾರೆ.
ತ್ರಿಶೂರ್ ಲೋಕಸಭಾ ಚುನಾವಣೆಗೆ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಸಿಪಿಐ ಪ್ರಮುಖ ಅಭ್ಯರ್ಥಿಗಳ ಮಧ್ಯದ ತೀವ್ರ ಹಣಾಹಣಿಯಲ್ಲಿ ಸುರೇಶ ಗೋಪಿ ಅವರು 74,686 ಮತಗಳಿಂದ ಜಯಗಳಿಸಿದರು.
ಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಈಚೆಗೆ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಚಿತ್ರರಂಗದಲ್ಲಿ ಮುಂದುವರಿಯುವ ಬಯಕೆ ವ್ಯಕ್ತಪಡಿಸಿದ್ದ ಅವರು ಸಚಿವ ಸ್ಥಾನವನ್ನು ತ್ಯಜಿಸಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಅವರು, ‘ನಾನು ಮೋದಿ ಸರ್ಕಾರದ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದು ಕೆಲವು ಮಾಧ್ಯಮಗಳು ತಪ್ಪು ಸುದ್ದಿಯನ್ನು ಹರಡುತ್ತಿವೆ. ಇದು ಸತ್ಯಕ್ಕೆ ದೂರವಾಗಿದೆ. ಮೋದಿ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡುವುದು ಮತ್ತು ಸಂಸತ್‌ನಲ್ಲಿ ಕೇರಳದ ಜನರನ್ನು ಪ್ರತಿನಿಧಿಸುವುದು ನನಗೆ ಹೆಮ್ಮೆಯ ವಿಷಯ’ ಎಂದು ಹೇಳಿ ಊಹಾಪೋಹಗಳಿಗೆ ತೆರೆ ಎಳೆದಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ