ನವದೆಹಲಿ: ಭಾರತದ ಹವಾಮಾನ ಇಲಾಖೆ (IMD) ಮಂಗಳವಾರ ತನ್ನ ಜೂನ್ ತಿಂಗಳ ಮಳೆಯ ಮುನ್ಸೂಚನೆಯನ್ನು ನವೀಕರಣ ಮಾಡಿದ್ದು, ಈ ವರ್ಷದ ಜೂನ್ ತಿಂಗಳಲ್ಲಿ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ತಿಳಿಸಿದೆ.
ಕಳೆದ ಕೆಲವು ತಿಂಗಳುಗಳಿಂದ ಭಾರತದ ಕೆಲವು ಭಾಗಗಳು ತೀವ್ರವಾದ ಶಾಖದ ಅಲೆಯಲ್ಲಿ ತತ್ತರಿಸುತ್ತಿವೆ. ಈಗ ದೇಶದಲ್ಲಿ ಮಾನ್ಸೂನ್ ಆಗಮನದ ಕುರಿತಾದ ನವೀಕರಣದಲ್ಲಿ ಭಾರತ ಹವಾಮಾನ ಇಲಾಖೆಯು, “ಒಟ್ಟಾರೆಯಾಗಿ ದೇಶದ ಸರಾಸರಿ ಜೂನ್ ಮಳೆಯು ಸಾಮಾನ್ಯಕ್ಕಿಂತ (ವಾಡಿಕೆಗಿಂತ) ಕಡಿಮೆ ಇರಲಿದೆ, ಅಂದರೆ ಇದು ದೇಶದ ಜೂನ್ ತಿಂಗಳ ದೀರ್ಘಾವಧಿಯ ಸರಾಸರಿ (LPA) ಯ 92 ಪ್ರತಿಶತಕ್ಕಿಂತ ಕಡಿಮೆ ಇರಲಿದೆ ಎಂದು ಹೇಳಿದೆ.
ಮೇ 30 ರಂದು ಕೇರಳದ ಮೇಲೆ ನೈರುತ್ಯ ಮಾನ್ಸೂನ್ ಪ್ರಾರಂಭವಾದಾಗಿನಿಂದ ದೇಶದಲ್ಲಿ ವಾಡಿಕೆಗಿಂತ ಶೇ 20 ರಷ್ಟು ಕಡಿಮೆ ಮಳೆಯಾಗಿದೆ. ಜೂನ್ 12 ಮತ್ತು 18 ರ ನಡುವೆ ಮಳೆಯ ವ್ಯವಸ್ಥೆಯಲ್ಲಿ ಗಮನಾರ್ಹ ಪ್ರಗತಿಯಾಗಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆದಾಗ್ಯೂ, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮಹಾರಾಷ್ಟ್ರ, ಛತ್ತೀಸ್‌ಗಢ, ಒಡಿಶಾ, ಕರಾವಳಿ ಆಂಧ್ರಪ್ರದೇಶ, ವಾಯುವ್ಯ ಬಂಗಾಳ ಕೊಲ್ಲಿ, ಬಿಹಾರ ಮತ್ತು ಜಾರ್ಖಂಡ್‌ನ ಭಾಗಗಳಲ್ಲಿ ಮಾನ್ಸೂನ್ ಮತ್ತಷ್ಟು ಮುನ್ನಡೆಯಲು ಪರಿಸ್ಥಿತಿಗಳು ಅನುಕೂಲಕರವಾಗಿವೆ ಎಂದು ಅದು ಹೇಳಿದೆ.
ಭಾರತದಲ್ಲಿ ಜೂನ್ 1 ಮತ್ತು 18 ರ ನಡುವೆ ಸರಾಸರಿ 64.5 ಮಿಮೀ ಮಳೆ ಸುರಿದಿದೆ. ಇದು ದೀರ್ಘಾವಧಿಯ ಸರಾಸರಿ (ಎಲ್‌ಪಿಎ) 80.6 ಮಿಮೀಗಿಂತ 20 ಶೇಕಡಾ ಕಡಿಮೆಯಾಗಿದೆ ಎಂದು ಅದು ಹೇಳಿದೆ.
ಜೂನ್ 1 ರಿಂದ, ವಾಯುವ್ಯ ಭಾರತದಲ್ಲಿ 10.2 ಮಿಮೀ (ಸಾಮಾನ್ಯ ಮಳೆಗಿಂತ 70% ಕಡಿಮೆ), ಮಧ್ಯ ಭಾರತದಲ್ಲಿ 50.5 ಮಿಮೀ (ಸಾಮಾನ್ಯಕ್ಕಿಂತ 31%ಕ್ಕಿಂತ ಕಡಿಮೆ), ದಕ್ಷಿಣ ಭಾರತ 106.6 ಮಿಮೀ (ಸಾಮಾನ್ಯಕ್ಕಿಂತ 16% ಹೆಚ್ಚು), ಮತ್ತು ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ 146.7 ಮಿಮೀ (ಸಾಮಾನ್ಯಕ್ಕಿಂತ 15 ಪ್ರತಿಶತ ಕಡಿಮೆ) ಸುರಿದಿದೆ.
ನಾಲ್ಕು ತಿಂಗಳ ಮಾನ್ಸೂನ್ ಋತುವಿನಲ್ಲಿ (ಜೂನ್ ನಿಂದ ಸೆಪ್ಟೆಂಬರ್) ದೇಶವು 87 ಸೆಂ.ಮೀ.ಮಳೆಯೊಂದಿಗೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ಕಾಣಬಹುದು ಎಂದು ಐಎಂಡಿ ಮೇ ಅಂತ್ಯದ ವೇಳೆಗೆ ಹೇಳಿದೆ.
ಮಾನ್ಸೂನ್ ಭಾರತದ ಕೃಷಿಗೆ ನಿರ್ಣಾಯಕವಾಗಿದೆ, ಕೃಷಿ ಪ್ರದೇಶದ 52 %ರಷ್ಟು ಪ್ರದೇಶ ಮಾನ್ಸೂನ್ ಮಳೆಯ ಮೇಲೆ ಅವಲಂಬಿತವಾಗಿದೆ. ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ನಿರ್ಣಾಯಕವಾದ ಜಲಾಶಯಗಳನ್ನು ಮರುಪೂರಣಗೊಳಿಸಲು ಇದು ನಿರ್ಣಾಯಕವಾಗಿದೆ.
ಜೂನ್ ಮತ್ತು ಜುಲೈ ಅನ್ನು ಕೃಷಿಗೆ ಪ್ರಮುಖ ಮಾನ್ಸೂನ್ ತಿಂಗಳುಗಳೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಖಾರಿಫ್ ಬೆಳೆಗೆ ಹೆಚ್ಚಿನ ಬಿತ್ತನೆಯು ಈ ಅವಧಿಯಲ್ಲಿ ನಡೆಯುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ