ಕಾಲೇಜಿನಲ್ಲಿ ಹಿಜಾಬ್‌ಗೆ ನಿಷೇಧ ಪ್ರಶ್ನಿಸಿದ್ದ ವಿದ್ಯಾರ್ಥಿಗಳ ಅರ್ಜಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್

ಮುಂಬೈ: ತಮ್ಮ ಧರ್ಮ ಪ್ರತಿನಿಧಿಸುವ ಬುರ್ಖಾ, ನಖಾಬ್‌, ಪದಕ, ಟೊಪ್ಪಿಗೆ ಅಥವಾ ಸ್ಟೋಲ್‌ ರೀತಿಯ ಬಟ್ಟೆ ಧರಿಸುವುದಕ್ಕೆ ಕಾಲೇಜು ಆಡಳಿತ ಮಂಡಳಿ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಮುಂಬೈ ಕಾಲೇಜೊಂದರ ಒಂಬತ್ತು ವಿದ್ಯಾರ್ಥಿಗಳು ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಕಾಲೇಜಿನ ನಿರ್ಧಾರದಲ್ಲಿ ತಾನು ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎ.ಎಸ್. ಚಂದೂರ್ಕರ್‌ ಮತ್ತು ರಾಜೇಶ ಪಾಟೀಲ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
ಚೆಂಬೂರ್ ಟ್ರಾಂಬೆ ಎಜುಕೇಶನ್ ಸೊಸೈಟಿಯ ಎನ್‌ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಾಲೇಜು ಹೊರಡಿಸಿದ ಜೂನ್ 4ರ ಹೊಸ ಶೈಕ್ಷಣಿಕ ವರ್ಷದಿಂದ ವಸ್ತ್ರ ಸಂಹಿತೆ ಜಾರಿಗೆ ತರಲು ಉದ್ದೇಶಿಸಲಾಗಿತ್ತು. ವಸ್ತ್ರ ಸಂಹಿತೆಯ ಮಾರ್ಗಸೂಚಿಗಳನ್ನು ಅಧ್ಯಾಪಕರು ಎರಡನೇ ಮತ್ತು ಮೂರನೇ ವರ್ಷದ ಪದವಿ ವಿದ್ಯಾರ್ಥಿಗಳಿಗೆ ವಾಟ್ಸಾಪ್‌ ಮೂಲಕ ಕಳುಹಿಸಿದ್ದರು. ಇದನ್ನು ಒಂಬತ್ತು ವಿದ್ಯಾರ್ಥಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಕಾಲೇಜಿನ ಮಾರ್ಗಸೂಚಿಗಳು ಕಾನೂನುಬಾಹಿರ, ನಿರಂಕುಶ ಮತ್ತು ಅಸಮಂಜಸ ಎಂದು ಅವರು ಹೇಳಿದ್ದರು. ಮುಂಬೈ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಮತ್ತು ಮಹಾರಾಷ್ಟ್ರ ಸರ್ಕಾರದಿಂದ ನೆರವು ಪಡೆದ ಕಾಲೇಜಿಗೆ ಅಂತಹ ನಿರ್ಬಂಧ ವಿಧಿಸುವ ಅಧಿಕಾರ ಇಲ್ಲ. ಯಾವ ಸೆಕ್ಷನ್‌ ಪ್ರಕಾರ ನಿರ್ದಿಷ್ಟ ಉಡುಪುಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂಬುದನ್ನು ಕಾಲೇಜು ಆಡಳಿತ ಮಂಡಳಿ ಸ್ಪಷ್ಟಪಡಿಸಿಲ್ಲ. ನಖಾಬ್ ಮತ್ತು ಹಿಜಾಬ್ ಅರ್ಜಿದಾರರ ಧಾರ್ಮಿಕ ನಂಬಿಕೆಯ ಅವಿಭಾಜ್ಯ ಅಂಗವಾಗಿದೆ. ತರಗತಿಯಲ್ಲಿ ನಖಾಬ್ ಮತ್ತು ಹಿಜಾಬ್ ಧರಿಸುವುದು ಇದು ನಮ್ಮ ಆಯ್ಕೆ ಮತ್ತು ಖಾಸಗಿತನದ ಹಕ್ಕಿನ ಭಾಗ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.

ಪ್ರಮುಖ ಸುದ್ದಿ :-   ವಾಯುಪಡೆ ಸಿಬ್ಬಂದಿ ಪತ್ನಿಗೆ ಮತ್ತು ಬರಿಸುವ ಪಾನೀಯ ನೀಡಿ ಅತ್ಯಾಚಾರ, ಬ್ಲ್ಯಾಕ್‌ಮೇಲ್, ಬಲವಂತದ ಮತಾಂತರಕ್ಕೆ ಯತ್ನ; ಇಬ್ಬರ ಬಂಧನ

ಕಾಲೇಜು ಆಡಳಿತ ಮಂಡಳಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅನಿಲ ಅಂತೂರಕರ್ ಅವರು, ಸಂವಿಧಾನದ 25ನೇ ವಿಧಿಯ ಅಡಿಯಲ್ಲಿ ಸಿಖ್ ಪೇಟದಂತಹ ಕೆಲವು ಉಡುಪುಗಳನ್ನು ಧರಿಸುವುದು ಮಾತ್ರ ಧಾರ್ಮಿಕ ಮೂಲಭೂತ ಹಕ್ಕಿಗೆ ಒಳಪಟ್ಟಿದೆ. ಈ ರೀತಿ ಸಾಬೀತಾಗದೆ ಉಳಿದ ಎಲ್ಲರಿಗೂ ವಸ್ತ್ರ ಸಂಹಿತೆ ಅನ್ವಯಿಸುತ್ತದೆ. ಮೇಲ್ನೋಟಕ್ಕೆ, ಅರ್ಜಿದಾರರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿಲ್ಲ. ಹೀಗಾಗಿ ಅವರ ಮನವಿ ಆಧಾರರಹಿತವಾಗಿದೆ ಎಂದು ವಾದಿಸಿದರು. ಇದಕ್ಕೆ ಅರ್ಜಿದಾರರ ಪರ ವಕೀಲ ಅಲ್ತಾಫ್‌ ಖಾನ್‌ ವಿರೋಧ ವ್ಯಕ್ತಪಡಿಸಿದರು. ಅರ್ಜಿದಾರರನ್ನು ಪ್ರತಿನಿಧಿಸಿದ ವಕೀಲ ಅಲ್ತಾಫ್ ಖಾನ್ ಅವರು, ಜೂನಿಯರ್ ಕಾಲೇಜುಗಳಲ್ಲಿ ಹಿಜಾಬ್ ನಿಷೇಧದ ಕುರಿತು ಕರ್ನಾಟಕ ಹೈಕೋರ್ಟ್ ತೀರ್ಪಿನಿಂದ ಈ ಪ್ರಕರಣ ಪ್ರತ್ಯೇಕ ಎಂದು ವಾದಿಸಿದರು. ಈ ಪ್ರಕರಣವು ಡ್ರೆಸ್ ಕೋಡ್ ಹೊಂದಿರುವ ಆದರೆ ಸಮವಸ್ತ್ರವನ್ನು ಹೊಂದಿರದ ಹಿರಿಯ ಕಾಲೇಜು ವಿದ್ಯಾರ್ಥಿಗಳಿಗೆ ಸಂಬಂಧಿಸಿದೆ ಎಂದು ಗಮನಿಸಿದರು. ಯಾವುದೇ ಕಾನೂನು ಅಧಿಕಾರವಿಲ್ಲದೆ ವಾಟ್ಸಾಪ್ ಮೂಲಕ ಡ್ರೆಸ್ ಕೋಡ್ ಅನ್ನು ಹೇರಲಾಗಿದೆ ಎಂದು ವಾದಿಸಿದರು.
ವಾದಗಳನ್ನು ಆಲಿಸಿದ ನ್ಯಾಯಾಲಯ ಕಾಲೇಜು ಆಡಳಿತ ಮಂಡಳಿಯ ವಸ್ತ್ರ ಸಂಹಿತೆ ಆದೇಶದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು.

ಪ್ರಮುಖ ಸುದ್ದಿ :-   ಭಾರತದ ಆಕಾಶದಲ್ಲಿಲ್ಲ ಮಳೆ ತರುವ ಮೋಡಗಳು ; ಆತಂಕಕಾರಿ ವಾಸ್ತವ ಬಿಂಬಿಸಿದ 3 ಉಪಗ್ರಹಗಳ ಚಿತ್ರಗಳು ; ಇದಕ್ಕೆ ಕಾರಣಗಳೇನು?

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement