
ಇಂಗ್ಲೆಂಡ್ ವೇಗದ ಬೌಲರ್ ಒಲ್ಲಿ ರಾಬಿನ್ಸನ್ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 43 ರನ್‌ಗಳನ್ನು ಚಚ್ಚಿಸಿಕೊಳ್ಳುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಓವರ್ ಬೌಲಿಂಗ್ ದಾಖಲೆ ಮಾಡಿದ್ದಾರೆ.
2021ರಲ್ಲಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಬಲಗೈ ಬೌಲರ್ ರಾಬಿನ್ಸನ್ ಇಂಗ್ಲೆಂಡ್ ಪರ 20 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 76 ವಿಕೆಟ್ ಪಡೆದಿದ್ದಾರೆ. ಅವರು ಹೋವ್‌ನಲ್ಲಿ ಸಸೆಕ್ಸ್‌ಗಾಗಿ ಆಡುತ್ತಿದ್ದು, ಲೀಸೆಸ್ಟರ್‌ಶೈರ್ ವಿರುದ್ಧ ಡಿವಿಷನ್ ಎರಡು ಪಂದ್ಯದಲ್ಲಿ ತಮ್ಮ ಓವರ್ ನಲ್ಲಿ ಒಟ್ಟು ಒಂಬತ್ತು ಎಸೆತಗಳನ್ನು ಬೌಲ್ ಮಾಡಿ 43 ರನ್ ಚಚ್ಚಿಸಿಕೊಂಡಿದ್ದಾರೆ.

ಲೀಸೆಸ್ಟರ್‌ಶೈರ್‌ನ ಲೂಯಿಸ್ ಕಿಂಬರ್ ಅವರು ರಾಬಿನ್ಸನ್ ಎಸೆತದಲ್ಲಿ ಐದು ಸಿಕ್ಸರ್ (ಮೂರು ನೋಬಾಲ್), ಮೂರು ಬೌಂಡರಿ ಮತ್ತು ಒಂದು ರನ್ ಬಾರಿಸಿ 43 ರನ್ ಚಚ್ಚಿದ್ದಾರೆ.
ಲೂಯಿಸ್ ಕಿಂಬರ್ ಅವರು ರಾಬಿನ್ಸನ್ ಅವರ 13ನೇ ಓವರ್‌ನಲ್ಲಿ 6 (ನೋ ಬಾಲ್), 6, 4 (ನೋ ಬಾಲ್), 6, 4, 6, 4(ನೋ ಬಾಲ್), 6 ಮತ್ತು 1 ರನ್ ಗಳಿಸಿದರು. ಈ ಮೂಲಕ ಇಂಗ್ಲೆಂಡ್ ಪರ ಅತಿ ಹೆಚ್ಚು ರನ್ ನೀಡಿದ ದಾಖಲೆಯನ್ನೂ ರಾಬಿನ್ಸನ್ ಮುರಿದರು. ರಾಬಿನ್ಸನ್ ಮಾಜಿ ಟೆಸ್ಟ್ ವೇಗದ ಬೌಲರ್ ಅಲೆಕ್ಸ್ ಟ್ಯೂಡರ್ ಅವರ 38 ರನ್‌ಗಳನ್ನು ನೀಡಿದ ದಾಖಲೆಯನ್ನು ಮುರಿದಿದ್ದಾರೆ.
ಲೀಸೆಸ್ಟರ್‌ಶೈರ್ ಗೆ ಸಸೆಕ್ಸ್ 446 ರನ್‌ಗಳ ಗುರಿ ನೀಡಿತು. ರಾಬಿನ್ಸನ್ ಅವರ ಈ ಓವರ್ ಮುಗಿದ ನಂತರ, ಕಿಂಬರ್ 65 ಎಸೆತಗಳಲ್ಲಿ ಅಜೇಯ 109 ರನ್ ಗಳಿಸಿದ್ದರು. ಇನ್ನೊಂದು ತುದಿಯಲ್ಲಿ ಬೆನ್ ಕಾಕ್ಸ್ ಬ್ಯಾಟಿಂಗ್ ಮಾಡುತ್ತಿದ್ದರು.
ಒಂದು ಓವರ್‌ನಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ದಾಖಲೆ ರಾಬರ್ಟ್ ವ್ಯಾನ್ಸ್ ಅವರ ಹೆಸರಿನಲ್ಲಿದೆ. ಅವರು ವೆಲ್ಲಿಂಗ್ಟನ್ ವಿರುದ್ಧ ಕ್ಯಾಂಟರ್‌ಬರಿ (1989-90) ಪಂದ್ಯದಲ್ಲಿ ಒಂದು ಓವರಿಗೆ 77 ರನ್ ನೀಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ