
ಮಂಗಳೂರು : ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಆಟೋ ರಿಕ್ಷಾ ಚಾಲಕರು ಮೃತಪಟ್ಟ ಘಟನೆ ಮಂಗಳೂರು ನಗರದ ರೊಸಾರಿಯೋ ಬಳಿ ಬುಧವಾರ ರಾತ್ರಿ ನಡೆದಿದ್ದು ಗುರುವಾರ ಮುಂಜಾನೆ ಬೆಳಕಿಗೆ ಬಂದಿದೆ.
ಮೃತರನ್ನು ಹಾಸನದ ಅಲ್ಲೂರು ನಿವಾಸಿ ರಾಜು (50) ಹಾಗೂ ಪುತ್ತೂರಿನ ರಾಮಕುಂಜ ನಿವಾಸಿ ದೇವರಾಜ ಗೌಡ (46) ಎಂದು ಗುರುತಿಸಲಾಗಿದೆ.
ಇಬ್ಬರೂ ಕೂಡಾ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಪಾಂಡೇಶ್ವರದ ರೊಸಾರಿಯೋ ಚರ್ಚ್ ಹಿಂಬದಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಬುಧವಾರ ರಾತ್ರಿ ಜೋರಾಗಿ ಮಳೆ ಸುರಿಯುತ್ತಿದ್ದಾಗ ಪಕ್ಕದ ವಿದ್ಯುತ್ ಕಂಬದಿಂದ ಒಂದು ತಂತಿ ಕೆಳಗೆ ಬಿದ್ದಿದೆ. ಗುರುವಾರ ಬೆಳಗ್ಗೆ ತಮ್ಮ ರಿಕ್ಷಾವನ್ನು ತೊಳೆಯಲೆಂದು ಹೊರಗೆ ಬಂದಾಗ ರಾಜು ಎಂಬವರಿಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ. ಅವರು ಕೂಗಿಕೊಂಡಾಗ ಅವರ ರಕ್ಷಣೆಗೆ ಮತ್ತೋರ್ವ ಗೋಣಿ ಚೀಲ ಹಿಡಿದು ಮುಂದಾಗಿದ್ದು, ಆತನೂ ವಿದ್ಯುತ್ ಅಘಾತಕ್ಕೆ ಒಳಗಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ