ವಿಚ್ಛೇದಿತ ಮುಸ್ಲಿಂ ಮಹಿಳೆಯರು ಜೀವನಾಂಶ ಪಡೆಯಲು ಅರ್ಹರು : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಸಿಆರ್‌ಪಿಸಿ ಸೆಕ್ಷನ್ 125ರ ಅಡಿ ವಿಚ್ಛೇದಿತ ಮುಸ್ಲಿಂ ಮಹಿಳೆ ತನ್ನ ಮಾಜಿ ಪತಿಯಿಂದ ಜೀವನಾಂಶ ಪಡೆಬಹುದು ಎಂದು ಸುಪ್ರೀಂ ಕೋರ್ಟ್‌ ಬುಧವಾರ ಮಹತ್ವದ ತೀರ್ಪು ನೀಡಿದೆ. ಹಾಗೂ ಅವರ ಧರ್ಮವನ್ನು ಲೆಕ್ಕಿಸದೆ ಇದು ಎಲ್ಲಾ ವಿವಾಹಿತ ಮಹಿಳೆಯರಿಗೆ ಅನ್ವಯಿಸುತ್ತದೆ ಎಂದು ಹೇಳಿದೆ.
ತನ್ನ ಮಾಜಿ ಪತ್ನಿಗೆ ₹10,000 ಮಧ್ಯಂತರ ಜೀವನಾಂಶ ನೀಡುವಂತೆ ತೆಲಂಗಾಣ ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನು ಪ್ರಶ್ನಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠವು ಬೇರೆ ಬೇರೆ ತೀರ್ಪು ಪ್ರಕಟಿಸಿತು, ಆದರೆ ಸಹಮತದ ತೀರ್ಪು ನೀಡಿತು.
“ನಾವು ಮೇಲ್ಮನವಿಯನ್ನು ವಜಾಗೊಳಿಸುತ್ತಿದ್ದೇವೆ, ಸಿಆರ್‌ಪಿಸಿ ಸೆಕ್ಷನ್ 125 ವಿವಾಹಿತ ಮಹಿಳೆಯರಿಗಷ್ಟೇ ಅಲ್ಲದೆ ಎಲ್ಲಾ ಸ್ತ್ರೀಯರಿಗೂ ಅನ್ವಯಿಸುತ್ತದೆ“ ಎಂದು ನ್ಯಾಯಮೂರ್ತಿ ನಾಗರತ್ನ ತೀರ್ಪು ಪ್ರಕಟಿಸಿದರು. ಜೀವನಾಂಶವು ದಾನವಲ್ಲ, ವಿವಾಹಿತ ಮಹಿಳೆಯರ ಹಕ್ಕು, ಅವರ ಧರ್ಮವನ್ನು ಲೆಕ್ಕಿಸದೆ ಎಲ್ಲಾ ವಿವಾಹಿತ ಮಹಿಳೆಯರಿಗೂ ಇದು ಅನ್ವಯಿಸುತ್ತದೆ ಎಂದು ಪೀಠವು ಒತ್ತಿಹೇಳಿತು.

ಪ್ರಮುಖ ಸುದ್ದಿ :-   ರೈತರಿಗೆ ಪಿಸ್ತೂಲ್ ತೋರಿಸಿದ ವೀಡಿಯೊ ವೈರಲ್‌ ; ವಿವಾದಿತ ಟ್ರೇನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ ತಾಯಿ ಬಂಧನ

ಸಿಆರ್‌ಪಿಸಿ ಸೆಕ್ಷನ್ 125ರ ಅಡಿ ಅರ್ಜಿ ಬಾಕಿ ಇರುವಾಗ, ಸಂಬಂಧಿತ ಮುಸ್ಲಿಂ ಮಹಿಳೆ ವಿಚ್ಛೇದನ ಪಡೆದರೆ, ಅಂತಹವರು ಮುಸ್ಲಿಂ ಮಹಿಳೆಯರ (ಮದುವೆ ಮೇಲಿನ ಹಕ್ಕುಗಳ ರಕ್ಷಣೆ) ಕಾಯಿದೆ, 2019 ಅನ್ನು ಆಶ್ರಯಿಸಬಹುದು. ಸಿಆರ್‌ಪಿಸಿ ಸೆಕ್ಷನ್ 125 ಅಡಿಯ ಪರಿಹಾರದ ಜೊತೆಗೆ 2019ರ ಕಾಯಿದೆಯೂ ಪರಿಹಾರ ಒದಗಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಮಹಿಳೆಗೆ ಜೀವನಾಂಶ ನೀಡಬೇಕು ಎಂಬ ಕೌಟುಂಬಿಕ ನ್ಯಾಯಾಲಯ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ್ದ ತೆಲಂಗಾಣ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೊಹಮ್ಮದ್ ಅಬ್ದುಲ್ ಸಮದ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ವಿಚ್ಛೇದಿತ ಮುಸ್ಲಿಂ ಮಹಿಳೆಯು CrPC ಯ ಸೆಕ್ಷನ್ 125 ರ ಅಡಿಯಲ್ಲಿ ಜೀವನಾಂಶಕ್ಕೆ ಅರ್ಹರಲ್ಲ ಮತ್ತು ಬದಲಿಗೆ ಮುಸ್ಲಿಂ ಮಹಿಳೆಯರ (ವಿಚ್ಛೇದನದ ಮೇಲಿನ ಹಕ್ಕುಗಳ ರಕ್ಷಣೆ) ಕಾಯಿದೆ, 1986 ರ ಅಡಿಯಲ್ಲಿ ಪರಿಹಾರವನ್ನು ಪಡೆಯಬೇಕು ಎಂದು ಸಮದ್ ವಾದಿಸಿದರು.
ವಿಚ್ಛೇದನ ಪಡೆಯುವ ಮೊದಲು ಅರ್ಜಿದಾರರ ಪತ್ನಿಯಾಗಿದ್ದ ಮುಸ್ಲಿಂ ಮಹಿಳೆ ಸಿಆರ್‌ಪಿಸಿಯ ಸೆಕ್ಷನ್ 125ರ ಅಡಿಯಲ್ಲಿ ಜೀವನಾಂಶ ಕೋರಿದ್ದರು. ಅವರ ಕೋರಿಕೆಯನ್ನು ಕೌಟುಂಬಿಕ ನ್ಯಾಯಾಲಯ ಮಾನ್ಯ ಮಾಡಿತ್ತು, ಅದನ್ನು ಹೈಕೋರ್ಟ್‌ ಕೂಡ ಎತ್ತಿಹಿಡಿದಿತ್ತು.
ಹೈಕೋರ್ಟ್ ಜೀವನಾಂಶವನ್ನು ತಿಂಗಳಿಗೆ ₹ 10,000ಕ್ಕೆ ಇಳಿಸಿತ್ತು. ಜೊತೆಗೆ ಆರು ತಿಂಗಳೊಳಗೆ ಪ್ರಕರಣ ವಿಲೇವಾರಿ ಮಾಡುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರ ಪತಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಪ್ರಮುಖ ಸುದ್ದಿ :-   ಹಳಿ ತಪ್ಪಿದ ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್‌ ರೈಲಿನ ಹಲವು ಬೋಗಿಗಳು ; ನಾಲ್ವರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement