ಮುಂಬೈ:ಕೆಲವೇ ದಿನಗಳ ಹಿಂದೆ ಸಂಭವಿಸಿದ ಬಿಎಂಡಬ್ಲ್ಯು ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಪ್ರಮುಖ ಆರೋಪಿ ಮಿಹಿರ್ ಶಾ ಅಪಘಾತವಾದ ಬಳಿಕ ತನ್ನ ಗೆಳತಿಗೆ 40 ಸಲ ಮೊಬೈಲ್ ಕರೆ ಮಾಡಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ.
ಮಿಹಿರ್ ಶಾ ಶಿವಸೇನಾ (ಶಿಂದೆ ಬಣ) ಮುಖಂಡ ರಾಜೇಶ ಶಾ ಅವರ ಪುತ್ರ. ಈ ಘಟನೆಯ ಬಳಿಕ ರಾಜೇಶ ಶಾ ಅವರನ್ನು ಶಿವಸೇನೆ ಉಪನಾಯಕ ಸ್ಥಾನದಿಂದ ವಜಾಗೊಳಿಸಲಾಗಿದೆ.
ಮಿಹಿರ್ ಶಾ ಚಾಲನೆ ಮಾಡುತ್ತಿದ್ದರು ಎನ್ನಲಾದ ಬಿಎಂಡಬ್ಲ್ಯು ಕಾರು ಮುಂಬೈನ ವರ್ಲಿ ಪ್ರದೇಶದಲ್ಲಿ ಭಾನುವಾರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿದ್ದು, ಆಕೆಯನ್ನು ಕಾರು ಸುಮಾರು ಒಂದೂವರೆ ಕಿಮೀ ದೂರದ ವರೆಗೆ ಎಳೆದುಕೊಂಡು ಹೋಗಿತ್ತು ಎಂದು ಆರೋಪಿಸಲಾಗಿದೆ. ಆಕೆಯ ಪತಿ ಗಾಯಗೊಂಡಿದ್ದರು. ಮೃತರನ್ನು ವರ್ಲಿ ನಿವಾಸಿ ಕಾವೇರಿ ನಖವಾ (45) ಎಂದು ಗುರುತಿಸಲಾಗಿದೆ.
ಅಪಘಾತದ ಬಳಿಕ ಮಿಹಿರ್ ಶಾ ತನ್ನ ಗೆಳತಿಗೆ 40 ಸಲ ಕರೆ ಮಾಡಿದ್ದ ಎಂಬುದು ತನಿಖೆಯ ವೇಳೆ ಗೊತ್ತಾಗಿದೆ. ಇವನ ಗೆಳತಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಕಲಾ ನಗರದಲ್ಲಿ ಕಾರು ಬಿಟ್ಟು 24 ವರ್ಷದ ಮಿಹಿರ್ ಶಾ ಆಟೋ ಹತ್ತಿಕೊಂಡು ಗೋರೆಗಾಂವ್‌ನಲ್ಲಿರುವ ತನ್ನ ಗೆಳತಿಯ ಮನೆಗೆ ಹೋಗಿದ್ದಾನೆ. ಹಾಗೂ ಎರಡು ಗಂಟೆಗಳ ಕಾಲ ಅಲ್ಲಿ “ವಿಶ್ರಾಂತಿ” ಪಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಗೆಳತಿ ಅಪಘಾತದ ಬಗ್ಗೆ ಮಿಹಿರ್ ಶಾ ಸಹೋದರಿಗೆ ತಿಳಿಸಿದಾಗ ಸಹೋದರಿ ಗೋರೆಗಾಂವ್‌ಗೆ ಹೋದರು ಮತ್ತು ನಂತರ ಆತನ ಗೆಳತಿ ಅಪಘಾತದ ಬಗ್ಗೆ ಶಾನನ್ನು ಬೊರಿವಲಿಯಲ್ಲಿರುವ ಅವರ ಮನೆಗೆ ಕರೆದೊಯ್ದರು.
ಅಲ್ಲಿಂದ, ಶಾ ಅವರ ತಾಯಿ ಮೀನಾ, ಇಬ್ಬರು ಸಹೋದರಿಯರು – ಪೂಜಾ ಮತ್ತು ಕಿಂಜಲ್ – ಮತ್ತು ಸ್ನೇಹಿತ ಅವದೀಪ, ಮುಂಬೈನಿಂದ ಸುಮಾರು 70 ಕಿಮೀ ದೂರದಲ್ಲಿರುವ ಶಾಹಪುರದ ರೆಸಾರ್ಟ್‌ಗೆ ತೆರಳಿ ಅಲ್ಲಿ ಅಡಗಿಕೊಂಡರು ಎಂದು ಹೇಳಲಾಗಿದೆ.
ಆರೋಪಿಯ ಬಂಧನಕ್ಕಾಗಿ 11 ತಂಡಗಳನ್ನು ರಚಿಸಿದ್ದ ಪೊಲೀಸರು, ಲುಕ್ ಔಟ್ ನೋಟಿಸ್ ಹೊರಡಿಸಿದ್ದರು. ಕಾರು ಅಪಘಾತಕ್ಕೀಡಾದ ನಂತರ ತಲೆಮರೆಸಿಕೊಂಡಿದ್ದ ಮಿಹಿರ್ ಶಾನನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದರು. ನಂತರ ಆತನನ್ನು ಜುಲೈ 16 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ,
ಮದ್ಯ ಕುಡಿದು ಕಾರು ಚಾಲನೆ ಮಾಡಿದ್ದು ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಘಟನೆಯು ಮಹಾರಾಷ್ಟ್ರದಲ್ಲಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ