ಫತೇಪುರ: ಉತ್ತರ ಪ್ರದೇಶದ ಫತೇಪುರದಲ್ಲಿ 24 ವರ್ಷದ ಯುವಕನಿಗೆ ಒಂದಲ್ಲ ಎರಡಲ್ಲ, ಕಳೆದ 40 ದಿನಗಳಲ್ಲಿ ಬರೋಬ್ಬರಿ 7 ಬಾರಿ ಹಾವು ಕಚ್ಚಿದೆ. ಕುತೂಹಲಕಾರಿ ಸಂಗತಿಯೆಂದರೆ ಆ ವ್ಯಕ್ತಿಗೆ ಶನಿವಾರವೇ ಹಾವು ಕಚ್ಚಿರುವುದು ವಿಶೇಷವಾಗಿದೆ…!
ಹಾವಿನಿಂದ ಕಚ್ಚಿಸಿಕೊಂಡ ಯುವಕನನ್ನು ಕಡಿತದ ನಂತರ ವಿಕಾಸ ದುಬೆ ಎಂದು ಗುರುತಿಸಲಾಗಿದ್ದು, ಆತನನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯಕ್ಕೆ ಆರೋಗ್ಯ ಸ್ಥಿರವಾಗಿದೆ. ಈಗ ಹಾವು ಕಡಿತದ ಚಿಕಿತ್ಸೆಗೆ ಒಳಗಾಗಿ ಹಣವೆಲ್ಲ ಖಾಲಿಯಾಗಿದೆ. ಈಗ ಚಿಕಿತ್ಸೆಗಾಗಿ ಧನ ಸಹಾಯ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾನೆ.
ಜೂನ್ 2ರಂದು ತನ್ನ ಚಿಕ್ಕಪ್ಪನ ಮನೆಯಲ್ಲಿ ಮೊದಲ ಬಾರಿಗೆ ವಿಕಾಸ ದುಬೆಗೆ ಹಾವು ಕಚ್ಚಿತ್ತು. ನಂತರ ಜೂನ್ 2 ಮತ್ತು ಜುಲೈ 6ರ ನಡುವೆ ಮತ್ತೆ 6 ಬಾರಿ ಅವರಿಗೆ ಹಾವು ಕಚ್ಚಿದೆ. ಪ್ರತಿಸಲ ಹಾವು ಕಚ್ಚಿದಾಗಲೂ ವಿಕಾಸ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ನಾಲ್ಕನೇ ಸಲ ಹಾವು ಕಚ್ಚಿದ ನಂತರ ವಿಕಾಸ ದುಬೆಗೆ ಮನೆ ಬಿಟ್ಟು ಬೇರೆಡೆ ಇರುವಂತೆ ಸಲಹೆ ನೀಡಲಾಯಿತು. ಹೀಗಾಗಿ, ವಿಕಾಸ ರಾಧಾನಗರದಲ್ಲಿರುವ ಚಿಕ್ಕಮ್ಮನ ಮನೆಗೆ ತೆರಳಿ ಅಲ್ಲಿದ್ದರು. ಆದರೆ ವಿಚಿತ್ರವೆಂದರೆ ಅಲ್ಲಿಯೂ ಐದನೇ ಬಾರಿಗೆ ಮತ್ತೆ ಹಾವು ಕಚ್ಚಿತ್ತು. ನಂತರ ದುಬೆಯ ಪೋಷಕರು ಆತನನ್ನು ಮನೆಗೆ ಕರೆತಂದರು.
ಜುಲೈ 6ರಂದು ವಿಕಾಸಗೆ ಮತ್ತೊಮ್ಮೆ ಹಾವು ಕಚ್ಚಿದೆ. ವಿಕಾಸ ಆರೋಗ್ಯದ ಬಗ್ಗೆ ಆತಂಕಗೊಂಡ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಿದ ನಂತರ ವಿಕಾಸ ಚೇತರಿಸಿಕೊಂಡಿದ್ದಾರೆ.
ವಿಚಿತ್ರವೆಂದರೆ ವಿಕಾಸಗೆ ಹಾವು ಕಡಿತ ಯಾವಾಗಲೂ ಶನಿವಾರ ಸಂಭವಿಸುತ್ತದೆ. ಹಾವು ಕಚ್ಚುವ ಮೊದಲು ಪ್ರತಿ ಬಾರಿಯೂ ಅವರಿಗೆ ಒಂದು ಮುನ್ಸೂಚನೆ ಸಿಗುತ್ತಿತ್ತು ಎಂದು ದುಬೆ ಈ ಹಿಂದೆ ಹೇಳಿದ್ದರು. ದುಬೆಯ ಪದೇ ಪದೇ ಹಾವು ಕಡಿತದ ಬಗ್ಗೆ ಕುಟುಂಬದವರು ಆತಂಕ ವ್ಯಕ್ತಪಡಿಸಿದ್ದಾರೆ. ವಿಕಾಸ ಈಗಾಗಲೇ 9 ಬಾರಿ ಹಾವು ಕಚ್ಚುವ ಮುನ್ಸೂಚನೆಯನ್ನು ಅನುಭವಿಸಿದ್ದಾರೆ. 8 ಬಾರಿ ಹಾವು ಕಚ್ಚುವವರೆಗೆ ಮಾತ್ರ ವಿಕಾಸ ಬದುಕುಳಿಯುತ್ತಾರೆ ಎಂದು ಆತನ ಭವಿಷ್ಯದಲ್ಲಿದೆ. 9ನೇ ಬಾರಿಗೆ ಹಾವು ಕಚ್ಚಿದರೆ ಯಾವುದೇ ವೈದ್ಯರು, ಪುರೋಹಿತರು ಅಥವಾ ಮಾಂತ್ರಿಕರು ಯಾರಿಗೂ ಉಳಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಹಣಕಾಸಿನ ನೆರವು ಕೋರಿಕೆ… ಆದರೆ
ಈ ಮಧ್ಯೆ ವಿಕಾಸ್ ದುಬೆ ಎಂಬ ವ್ಯಕ್ತಿ ಹಾವು ತನಗೆ ಏಳು ಬಾರಿ ಹಾವು ಕಚ್ಚಿದ ಸಂಗತಿ ತಿಳಿಸಿ ಚಿಕಿತ್ಸೆಗೆ ಅಪಾರ ಹಣ ವೆಚ್ಚವಾಗಿದ್ದರಿಂದ ತನಗೆ ಹಣಕಾಸಿನ ನೆರವು ನೀಡುವಂತೆ ಅಧಿಕಾರಿಗಳನ್ನು ಕೋರಿದ್ದಾರೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ. ರಾಜೀವ ನಯನ ಗಿರಿ ಹೇಳಿದ್ದಾರೆ.
ಸಂತ್ರಸ್ತ ಕಲೆಕ್ಟರೇಟ್‌ಗೆ ಬಂದು ಅಳಲು ತೋಡಿಕೊಂಡಿದ್ದಾರೆ. ಹಾವು ಕಡಿತಕ್ಕೆ ಸಾಕಷ್ಟು ಹಣ ಖರ್ಚಾಗಿದ್ದರಿಂದ ಈಗ ಧನಸಹಾಯ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಹಾವು ವಿಷ ನಿವಾರಕ ಔಷಧವನ್ನು ಉಚಿತವಾಗಿ ನೀಡುವ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡುವಂತೆ ಸೂಚಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಪ್ರತಿ ಶನಿವಾರ ಒಬ್ಬ ವ್ಯಕ್ತಿಗೆ ಹಾವು ಕಚ್ಚುವುದು ತುಂಬಾ ವಿಚಿತ್ರವಾಗಿದೆ. ಪ್ರತಿ ಶನಿವಾರ ಹಾವು ಕಚ್ಚಿದ ವ್ಯಕ್ತಿ ಮತ್ತು ಪ್ರತಿ ಬಾರಿ ಅದೇ ಆಸ್ಪತ್ರೆಗೆ ದಾಖಲಾಗುವ ಮತ್ತು ಕೇವಲ ಒಂದು ದಿನದಲ್ಲಿ ಚೇತರಿಸಿಕೊಳ್ಳುವುದು ವಿಚಿತ್ರವಾಗಿದೆ. ಹೀಗಾಗಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಸಾಮರ್ಥ್ಯವನ್ನು ನಾವು ನೋಡಬೇಕಾಗಿದೆ ಎಂದು ಅವರು ಹೇಳಿದರು.
ಈ ಕುರಿತು ತನಿಖೆ ನಡೆಸಲು ಮೂವರು ವೈದ್ಯರ ತಂಡವನ್ನು ರಚಿಸಲಾಗಿದೆ. ತನಿಖೆಯ ನಂತರ ಇದರ ಸತ್ಯಾಸತ್ಯತೆ ಬಗ್ಗೆ ಜನರಿಗೆ ತಿಳಿಸುತ್ತೇವೆ ಎಂದು ಮುಖ್ಯ ವೈದ್ಯಾಧಿಕಾರಿ ಗಿರಿ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ